ಮಾಧ್ಯಮ ವರದಿ ಆಧರಿಸಿಯೂ ಕ್ರಮ: ಹುನಗುಂದ
ಗುಲ್ಬರ್ಗ: ಮಾನವ ಹಕ್ಕುಗಳಿಗೆ ಧಕ್ಕೆಯಾದ ಅಥವಾ ಉಲ್ಲಂಘನೆಯಾದ ಪ್ರಕರಣಗಳು ಸ್ಥಳೀಯ ಪತ್ರಿಕೆ ಹಾಗೂ ರಾಜ್ಯ ಮಟ್ಟದ ಪತ್ರಿಕೆಗಳ ಸ್ಥಳೀಯ ಆವೃತ್ತಿಗಳಲ್ಲಿ ಪ್ರಕಟವಾದಲ್ಲಿ, ಆ ವರದಿಗಳ ಪತ್ರಿಕಾ ತುಣುಕುಗಳನ್ನು ಮಾನವ ಹಕ್ಕುಗಳ ಆಯೋಗದ ಕಚೇರಿಗೆ ಕಳುಹಿಸಿಕೊಟ್ಟಲ್ಲಿ ಆಯೋಗದಿಂದ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುವುದು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಸಿ.ಜಿ. ಹುನಗುಂದ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಮಾತನಾಡಿ, ಹೈ-ಕ ಸೇರಿದಂತೆ ದೂರದ ಪ್ರದೇಶಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾದ ಕುರಿತ ಸುದ್ದಿಗಳು ಅಲ್ಲಿನ ಸ್ಥಳೀಯ ಪತ್ರಿಕೆಗಳಲ್ಲಿ ಹಾಗೂ ರಾಜ್ಯ ಮಟ್ಟದ ಪತ್ರಿಕೆಗಳ ಸ್ಥಳೀಯ ಆವೃತ್ತಿಯಲ್ಲಿ ಪ್ರಕಟವಾದ ಸುದ್ದಿಗಳು ಆಯೋಗದ ಗಮನಕ್ಕೆ ಬರುವುದಿಲ್ಲ. ಅಂತಹ ವರದಿಗಳನ್ನು ಯಾರಾದರೂ ಆಯೋಗಕ್ಕೆ ಕಳುಹಿಸಿದ್ದಲ್ಲಿ ಆಯೋಗದಿಂದ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುವುದು ಎಂದರು.
ವಸ್ತುಸ್ಥಿತಿ ಅವಲೋಕಿಸಿ ದೂರು ದಾಖಲು: ಅದೇ ರೀತಿ ಮಾಧ್ಯಮಗಳಲ್ಲಿ ವರದಿಯಾಗುವ ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳನ್ನು ಆಯೋಗವು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತದೆ. ವಸ್ತುಸ್ಥಿತಿಯನ್ನು ಅವಲೋಕಿಸಿಕೊಂಡು ದೂರು ದಾಖಲಿಸಿಕೊಳ್ಳಲಾಗುವುದು ಎಂದರು. ಎಲ್ಲರೂ ಮಾನವಿಯತೆಯಿಂದಲೇ ಕಾರ್ಯನಿರ್ವಹಿಸಬೇಕು. ಅದಕ್ಕಿಂತ ಶ್ರೇಷ್ಠ ಇನ್ನೊಂದಿಲ್ಲ. ಆಯೋಗಕ್ಕೆ ಆ ಉದ್ದೇಶವಿದ್ದು, ಸಿಪಾಯಿಯಿಂದ ಸಾಹೇಬರವರೆಗೆ ಎಲ್ಲ ಮಟ್ಟದಲ್ಲೂ ಮಾನವೀಯತೆ ಇಟ್ಟುಕೊಂಡು ಕೆಲಸ ಮಾಡುವ ಅಗತ್ಯತೆ ಇದೆ ಎಂದು ಹೇಳಿದರು.