ರಂಗಂಪೇಟೆಯಲ್ಲಿ ಬೆಳ್ಳಿಯ ಆಂಜನೇಯ ಮೂರ್ತಿ ಪ್ರತಿಷ್ಠಾಪನೆ
ಸುರಪುರ: ಸಮೀಪದ ರಂಗಂಪೇಟೆಯ ಕುಂಬಾರಗಲ್ಲಿಯ ಮಾರುತಿ ದೇವಸ್ಥಾನದಲ್ಲಿ ಬೆಳ್ಳಿಯಲ್ಲಿ ತಯಾರಿಸಿದ ನೂತನ ಆಂಜನೇಯ ಮೂರ್ತಿಯನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ಪ್ರತಿಷ್ಠಾಪನೆ ಮಾಡಲಾಯಿತು. ದೇವಸ್ಥಾನ ಸಮಿತಿಯ ಸದಸ್ಯರ ನೇತೃತ್ವದಲ್ಲಿ ತಿಮ್ಮಾಪುರದ ಬಸ್ ನಿಲ್ದಾಣದಿಂದ ಮುಖ್ಯರಸ್ತೆಯ ಮೂಲಕ ಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ದೇವಸ್ಥಾನಕ್ಕೆ ತರಲಾಯಿತು. ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಫಲಪುಷ್ಪ ಅರ್ಚನೆ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮೂರ್ತಿ ಸ್ಥಾಪಿಸಲಾಯಿತು. ರಷ್ಮಿ ಶಿವನಗೌಡ ಶಿರವಾಳ ದಂಪತಿ ಪೂಜೆ ನೆರವೇರಿಸಿದರು.
1.6 ಲಕ್ಷ ವೆಚ್ಚದಲ್ಲಿ..: ಭಕ್ತರೊಬ್ಬರು 1.6 ಲಕ್ಷ ನಗದು ನೀಡಿದ್ದು, ಆ ಹಣದಲ್ಲಿ 1.5 ಕೆಜಿಯ ಬೆಳ್ಳಿ ಮೂರ್ತಿ ಮಾಡಿಸಲಾಗಿದೆ. ಪ್ರತಿ ವರ್ಷ ಶ್ರಾವಣ ಮಾಸದ ನಿಮಿತ್ತ ತಿಂಗಳ ಪೂರ್ಣ ದೀಪಾರಾಧನೆ ಕೈಗೊಳ್ಳುತ್ತೇವೆ. ಕೊನೆಯ ಶನಿವಾರ ರಾತ್ರಿ ಅಖಂಡ ಭಜನೆ ನಡೆಸಿ ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡುತ್ತೇವೆ ಎಂದು ದೇವಸ್ಥಾನ ಸಮಿತಿ ಮುಖಂಡರು ತಿಳಿಸಿದರು. ಪ್ರಮುಖರಾದ ವೆಂಕಟೇಶ ಗದ್ವಾಲ್, ಗುರುರಾಜ ಚಾಮನಾಳ, ಸೋಮಶೇಖರ ಶಾಬಾದಿ, ಗೋಪಾಲ ದಾಸೆ, ಶರಣಪ್ಪ ಕಲಕೇರಿ, ಪರುಶುರಾಮ ಪಗಡೇಕಲ್, ಶಿವಶರಣಪ್ಪ ಶಾಬಾದಿ, ರಾಮಯ್ಯ ಕಡಬೂರ, ಗೋವಿಂದರಾಜ, ಪ್ರಕಾಶ ಗುಳಗಿ, ನಾಗೇಶ ಅಂಬೂರೆ, ಸುನೀಲ್ ರಾಹುತ್, ಗೋಪಾಲ ಕಿಡಕಿ, ದೇವು ದಾಸೆ, ಘಾಳೆಪ್ಪ ದಾಸೆ, ಅಶೋಕ, ಶ್ರೀವಲ್ಲಭ, ಪ್ರಾಣೇಶ ಇದ್ದರು.