ಸಪ್ತ ಸುಪಾರಿ ಹಂತಕರ ಹೆಡೆಮುರಿ ಬಿಗಿದ ಪೊಲೀಸ್
ಗುಲ್ಬರ್ಗ: ಕೊನೆಗೂ ಜಿಲ್ಲಾ ಪೊಲೀಸರು ಜಿಲ್ಲೆಯಲ್ಲಿನ ಭೀಮಾ ತೀರ ಅಫಜಲ್ಪುರ ಸೇರಿದಂತೆ, ಗುಲ್ಬರ್ಗ, ಬೀದರ್, ಯಾದಗಿರಿ, ಬಿಜಾಪುರ ಸೀಮೆಯಲ್ಲಿ ಸುಪಾರಿ ಕೊಲೆ ಸಂಸ್ಕೃತಿ, ಅಕ್ರಮ ಶಸ್ತ್ರಾಸ್ತ್ರ ಮಾರಾಟ ಜಾಲವನ್ನು ನೀರೆರೆದು ಪೋಷಿಸಿಕೊಂಡು ಹೊರಟಿದ್ದ ರವಿ ಭೈರಾಮಡಗಿ ಮತ್ತವರ ತಂಡವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗುಲ್ಬರ್ಗ, ಬಿಜಾಪುರ, ಬೀದರ್, ಯಾದಗಿರಿ ಜಿಲ್ಲೆಗಳಲ್ಲಿ ಕೊಲೆ, ಸುಲಿಗೆ, ದೊಂಬಿಯಂತಹ ಹತ್ತು ಹಲವು ಪ್ರಕರಣಗಳಲ್ಲಿ ಬಂಧಿತ ಸುಪಾರಿ ಹಂತಕ ರವಿ ಭೈರಾಮಡಗಿ ಮತ್ತವರ ಸಹಚರರು ಬಹು ದಿನಗಳಿಂದ ಪೊಲೀಸರಿಗೆ ಬೇಕಾಗಿದ್ದರಾದರೂ ತಲೆಮರೆಸಿಕೊಂಡು ಅಡ್ಡಾಡುತ್ತಿದ್ದದರಿಂದ ಪೊಲೀಸರ ನಿದ್ರೆಗೆಡಿಸಿದ್ದರು.
ತಮಗೆ ದೊರಕಿದ್ದ ಖಚಿತ ಮಾಹಿತಿ ಆಧರಿಸಿ ಕಾರ್ಯಪ್ರವೃತ್ತರಾದ ಗುಲ್ಬರ್ಗ ಪೊಲೀಸರ ತಂಡ ಆ.28ರಂದು ಶರಣಸಿರಸಗಿ ಹತ್ತಿರದ ರಸ್ತೆ ಸೇತುವೆ ಪಕ್ಕ ಬೈಕ್ನಲ್ಲಿದ್ದ ರವಿ ಭೈರಾಮಡಗಿ ಗರೂರ ಈತನನ್ನು ಮತ್ತು ತಂಡವನ್ನು ಬಂಧಿಸಿ ಅವರಿಂದ ಪಿಸ್ತೂಲ್ಗಳು, ಗುಂಡುಗಳು ಹಾಗೂ ಹರಿತ ಆಯುಧಗಳನ್ನು ಜಪ್ತಿ ಮಾಡಿದ್ದಾರೆ.
ಬಂಧಿತರು...
1. ರವಿ ಅಲಿಯಾಸ್ ರವಿಕಾಂತ ನಾಗೀಂದ್ರಪ್ಪ ಭೈರಾಮಡಗಿ(24)
2. ಮಲ್ಲಿಕಾರ್ಜುನ ನಾಗೀಂದ್ರಪ್ಪ ಭೈರಾಮಡಗಿ
3. ವಿಶಾಲ ಸುಭಾಸ ನವರಂಗ, ಜಗತ್ ಗುಲ್ಬರ್ಗ
4. ಮಸ್ತಾನ್ ಪಟೇಲ್ ನಬೀಪಟೇಲ್ ಲಂಗರ ಹನುಮಾನ್ ಏರಿಯಾ, ಗುಲ್ಬರ್ಗ
5. ರಾಜು ಅಶೋಕ ನಗರ, ಗುಲ್ಬರ್ಗ
6. ಅಬ್ದುಲ್ ಸಮದ್, ವಿದ್ಯಾನಗರ ಗುಲ್ಬರ್ಗ
7. ಗೋವಿಂದರೆಡ್ಡಿ, ಹಾರುತಿ ಹಡಗಿಲ್, ಗುಲ್ಬರ್ಗ ತಾಲೂಕು
ಬಂಧಿತರೆಲ್ಲರ ಬಳಿ ನಾಡ ಪಿಸ್ತೂಲ್, ಚಾಕು, ಜೀವಂತ ಗುಂಡುಗಳು ಲಭ್ಯವಾಗಿವೆ. ಇವರನ್ನೆಲ್ಲ ತಪಾಸಣೆಗೆ ಒಳಪಡಿಸಿದಾಗ ಅಕ್ರಮ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಇವರನ್ನೆಲ್ಲ ಬಂಧಿಸಿ ವಶಕ್ಕೆ ತೆಗೆದುಕೊಂಡಿದ್ದು ಮುಂದಿನ ತನಿಖೆ ಚುರುಕುಗೊಳಿಸಲಾಗುತ್ತದೆ ಎಂದು ಜಿಲ್ಲಾ ಎಸ್ಪಿ ಅಮಿತ್ಸಿಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಒಬ್ಬ ಪರಾರಿ: ಈ ತಂಡಗಳಿಗೆ ನೆರವು ನೀಡುತ್ತಿದ್ದವರ ಪೈಕಿ ಕಡಗಂಚಿಯ ರಾಹುಲ್ ಅಲಿಯಾಸ್ ಪಿಂಟ್ಯಾ ಪರಾರಿಯಾಗಿದ್ದಾನೆ. ಇದೇ ತಂಡದ ಜೊತೆ ಸಂಪರ್ಕ ಹೊಂದಿದ್ದಾನೆ ಎಂದು ತಿಳಿದು ಬಂದಿರುವ ರಹೀಮ ಶಹಾಪುರ ಈತನನ್ನು ಬಂಧಿಸಲು ಜಾಲ ಬೀಸಲಾಗಿದೆ ಎಂದು ಎಸ್ಪಿ ಅಮಿತ್ಸಿಂಗ್ ತಿಳಿಸಿದ್ದಾರೆ. ಪೊಲೀಸರು ಇಸ್ಮಾಯಿಲ್ ಹಾಗೂ ಮಹ್ಮದ್ ಇಲಿಯಾಸ್ ಪಟೇಲ್ ಎಂಬಿಬ್ಬರನ್ನು ದಸ್ತಗಿರಿ ಮಾಡಿ ಅವರಿಂದ ಪಿಸ್ತೂಲ್, ಗುಂಡುಗಳನ್ನು ಜಪ್ತಿ ಮಾಡಿತ್ತು.
ಇವರಿಬ್ಬರಿಗೂ ಶಸ್ತ್ರಾಸ್ತ್ರ ಮತ್ತು ಗುಂಡು ಕೊಟ್ಟವ ಶಹಾಪುರದ ಫಹೀಮ ಎಂದು ಹೇಳಲಾಗಿದೆ. ಹೀಗಾಗಿ ಫಹೀಮ್ನ ಬಂಧನವೂ ಈ ಪ್ರಕರಣದಲ್ಲಿ ಅತ್ಯಂತ ಮಹತ್ವದ್ದಾಗಿದೆ ಎಂದು ಜಿಲ್ಲಾ ಎಸ್ಪಿ ಅಮೀತ್ ಸಿಂಗ್ ಹೇಳಿದ್ದಾರೆ.