ಸುಪಾರಿ ಹಂತಕರ ಹೆಡೆಮುರಿ ಕಟ್ಟಿದ ಪೊಲೀಸ್
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಆ.28
ಕೊನೆಗೂ ಜಿಲ್ಲಾ ಪೊಲೀಸರು ಜಿಲ್ಲೆಯಲ್ಲಿನ ಭೀಮಾ ತೀರ ಅಫಜಲ್ಪುರ ಸೇರಿದಂತೆ, ಗುಲ್ಬರ್ಗ, ಬೀದರ್, ಯಾದಗಿರಿ, ಬಿಜಾಪುರ ಸೀಮೆಯಲ್ಲಿ ಸುಪಾರಿ ಕೊಲೆ ಸಂಸ್ಕೃತಿ, ಅಕ್ರಮ ಶಸ್ತ್ರಾಸ್ತ್ರ ಮಾರಾಟ ಜಾಲವನ್ನು ನೀರೆರೆದು ಪೋಷಿಸಿಕೊಂಡು ಹೊರಟಿದ್ದ ರವಿ ಭೈರಾಮಡಗಿ ಮತ್ತವರ ತಂಡವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗುಲ್ಬರ್ಗ, ಬಿಜಾಪುರ, ಬೀದರ್, ಯಾದಗಿರಿ ಜಿಲ್ಲೆಗಳಲ್ಲಿ ಕೊಲೆ, ಸುಲಿಗೆ, ದೊಂಬಿಯಂತಹ ಹತ್ತು ಹಲವು ಪ್ರಕರಣಗಳಲ್ಲಿ ಬಂಧಿತ ಸುಪಾರಿ ಹಂತಕ ರವಿ ಭೈರಾಮಡಗಿ ಮತ್ತವರ ಸಹಚರರು ಬಹು ದಿನಗಳಿಂದ ಪೊಲೀಸರಿಗೆ ಬೇಕಾಗಿದ್ದರಾದರೂ ತಲೆಮರೆಸಿಕೊಂಡು ಅಡ್ಡಾಡುತ್ತಿದ್ದದರಿಂದ ಪೊಲೀಸರ ನಿದ್ರೆಗೆಡಿಸಿದ್ದರು.
ತಮಗೆ ದೊರಕಿದ್ದ ಖಚಿತ ಮಾಹಿತಿ ಆಧರಿಸಿ ಕಾರ್ಯಪ್ರವೃತ್ತರಾದ ಗುಲ್ಬರ್ಗ ಪೊಲೀಸರ ತಂಡ ಆ.28ರಂದು ಶರಣಸಿರಸಗಿ ಹತ್ತಿರದ ರಸ್ತೆ ಸೇತುವೆ ಪಕ್ಕ ಬೈಕ್‌ನಲ್ಲಿದ್ದ ರವಿ ಭೈರಾಮಡಗಿ ಗರೂರ ಈತನನ್ನು ಮತ್ತು ತಂಡವನ್ನು ಬಂಧಿಸಿ ಅವರಿಂದ ಪಿಸ್ತೂಲ್‌ಗಳು, ಗುಂಡುಗಳು ಹಾಗೂ ಹರಿತ ಆಯುಧಗಳನ್ನು ಜಪ್ತಿ ಮಾಡಿದ್ದಾರೆ.
ಬಂಧಿತರೆಂದರೆ ರವಿ ಅಲಿಯಾಸ್ ರವಿಕಾಂತ ನಾಗೀಂದ್ರಪ್ಪ ಭೈರಾಮಡಗಿ (24), ಮಲ್ಲಿಕಾರ್ಜುನ ನಾಗೀಂದ್ರಪ್ಪ ಭೈರಾಮಡಗಿ, ವಿಶಾಲ ಸುಭಾಸ ನವರಂಗ, ಜಗತ್ ಗುಲ್ಬರ್ಗ. ಮಸ್ತಾನ್ ಪಟೇಲ್ ನಬೀಪಟೇಲ್ ಲಂಗರ ಹನುಮಾನ್ ಏರಿಯಾ, ಗುಲ್ಬರ್ಗ, ರಾಜು ಅಶೋಕ ನಗರ, ಗುಲ್ಬರ್ಗ, ಅಬ್ದುಲ್ ಸಮದ್, ವಿದ್ಯಾನಗರ ಗುಲ್ಬರ್ಗ, ಗೋವಿಂದರೆಡ್ಡಿ, ಹಾರುತಿ ಹಡಗಿಲ್, ಗುಲ್ಬರ್ಗ ತಾಲೂಕು.
ಇವರೆಲ್ಲರ ಬಳಿ ನಾಡ ಪಿಸ್ತೂಲ್, ಚಾಕು, ಜೀವಂತ ಗುಂಡುಗಳು ಲಭ್ಯವಾಗಿವೆ. ಇವರನ್ನೆಲ್ಲ ತಪಾಸಣೆಗೆ ಒಳಪಡಿಸಿದಾಗ ಅಕ್ರಮ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಇವರನ್ನೆಲ್ಲ ಬಂಧಿಸಿ ವಶಕ್ಕೆ ತೆಗೆದುಕೊಂಡಿದ್ದು ಮುಂದಿನ ತನಿಖೆ ಚುರುಕುಗೊಳಿಸಲಾಗುತ್ತದೆ ಎಂದು ಜಿಲ್ಲಾ ಎಸ್ಪಿ ಅಮಿತ್‌ಸಿಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಒಬ್ಬ ಪರಾರಿ: ಈ ತಂಡಗಳಿಗೆ ನೆರವು ನೀಡುತ್ತಿದ್ದವರ ಪೈಕಿ ಕಡಗಂಚಿಯ ರಾಹುಲ್ ಅಲಿಯಾಸ್ ಪಿಂಟ್ಯಾ ಪರಾರಿಯಾಗಿದ್ದಾನೆ. ಇದೇ ತಂಡದ ಜೊತೆ ಸಂಪರ್ಕ ಹೊಂದಿದ್ದಾನೆ ಎಂದು ತಿಳಿದು ಬಂದಿರುವ ರಹೀಮ ಶಹಾಪುರ ಈತನನ್ನು ಬಂಧಿಸಲು ಜಾಲ ಬೀಸಲಾಗಿದೆ ಎಂದು ಎಸ್ಪಿ ಅಮಿತ್‌ಸಿಂಗ್ ತಿಳಿಸಿದ್ದಾರೆ. ಪೊಲೀಸರು ಇಸ್ಮಾಯಿಲ್ ಹಾಗೂ ಮಹ್ಮದ್ ಇಲಿಯಾಸ್ ಪಟೇಲ್ ಎಂಬಿಬ್ಬರನ್ನು ದಸ್ತಗಿರಿ ಮಾಡಿ ಅವರಿಂದ ಪಿಸ್ತೂಲ್, ಗುಂಡುಗಳನ್ನು ಜಪ್ತಿ ಮಾಡಿತ್ತು.
ಇವರಿಬ್ಬರಿಗೂ ಶಸ್ತ್ರಾಸ್ತ್ರ ಮತ್ತು ಗುಂಡು ಕೊಟ್ಟವ ಶಹಾಪುರದ ಫಹೀಮ ಎಂದು ಹೇಳಲಾಗಿದೆ. ಹೀಗಾಗಿ ಫಹೀಮ್‌ನ ಬಂಧನವೂ ಈ ಪ್ರಕರಣದಲ್ಲಿ ಅತ್ಯಂತ ಮಹತ್ವದ್ದಾಗಿದೆ ಎಂದು ಜಿಲ್ಲಾ ಎಸ್ಪಿ ಅಮೀತ್ ಸಿಂಗ್ ಹೇಳಿದ್ದಾರೆ.
ಡಿಎಸ್ಪಿ ಗ್ರಾಮೀಣ ವೃತ್ತ ತಿಮ್ಮಪ್ಪ ಮಾರ್ಗದರ್ಶನದಲ್ಲಿ ಪ್ರೊಬೇಷನರಿ ಪೊಲೀಸ್ ಅಧಿಕಾರಿ ಡಾ. ರಾಮು ಅರಸಿದ್ದಿ, ಸಿಪಿಐ ಸತೀಶ, ಸಿದ್ದರಾಮಯ್ಯ ಬಳೂರ್ಗಿ, ಸಿಬ್ಬಂದಿ ಹುಸೇನ ಬಾಷಾ, ಸಂಜೀವರೆಡ್ಡಿ, ಕೇಶವ, ರಾಜಕುಮಾರ್, ಹಣಮಂತ ನವಲೆ, ವಿಶ್ವನಾಥ, ಮೋಯಿಜೊದ್ದೀನ್, ಕೆಟಂಪ್ಪ, ಶಿವಶರಣಪ್ಪ, ಶರಣು ಇವರನ್ನು ಒಳಗೊಂಡಿದ್ದ ಪೊಲೀಸ್ ತಂಡ ಸುಪಾರಿ ಹಂತಕರ ಸೆರೆಹಿಡಿಯುವಲ್ಲಿ ಯಶ ಕಂಡಿದೆ. ಕ್ರಿಮಿನಲ್‌ಗಳ ಮೇಲಿನ ದಾಳಿ ಹಾಗೂ ಬಂಧನ ನಡೆಸಿರುವ ಪೊಲೀಸ್ ತಂಡದ ಎಸ್ಪಿ ಅಮಿತ್ ಸಿಂಗ್ ಶ್ಲಾಘಿಸಿದ್ದಾರೆ.