ನಿವೃತ್ತಿ ಬಳಿಕ ಪುಸ್ತಕ ಪ್ರಕಾಶನ ಕಾಯಕ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಡಿ.1
ಸೇವೆಯಿಂದ ನಿವೃತ್ತಿಗೊಂಡಲ್ಲಿ ಶಾಲು, ಹಾರ, ತುರಾಯಿಯುಳ್ಳ ಸಮಾರಂಭ ಸಾಮಾನ್ಯ. ಬೀಳ್ಕೊಡುವಾಗಲೂ ಇಂತಹದ್ದೇ ಅದ್ಧೂರಿತನ ಕಾಣಸಿಗುತ್ತದೆ. ಆದರೆ ಸಮಾಜಮುಖಿ ಚಿಂತನೆ ಇರುವವರು ಸೇವೆಯಿಂದ ನಿವೃತ್ತಿ ಹೊಂದಿದರೆ ಅವರು ಸಂಘಟಿಸುವ ಸಮಾರಂಭಗಳೇ ಭಿನ್ನ ಎನ್ನಬಹುದು.
ಹೈಕಶಿ ಸಂಸ್ಥೆಯ ಮಹಾದೇವಪ್ಪ ರಾಂಪೂರೆ ವೈದ್ಯ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ, ಬಸವೇಶ್ವರ ಬೋಧನಾ ಆಸ್ಪತ್ರೆ ಪ್ರಧಾನ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಎಸ್. ಹಿರೇಮಠ ತಮ್ಮ ಸೇವಾ ನಿವೃತ್ತಿಯನ್ನು ಭಿನ್ನವಾಗಿ ಆಚರಿಸಿದರು.
ಸಂದೇಶ: ತಮ್ಮ ಮಾವ, ಲಿಂ. ಷಡಕ್ಷರಸ್ವಾಮಿ ಡಿಗ್ಗಾಂವ್ಕರ್ ಅವರ ಹೆಸರಲ್ಲಿ ಪುಸ್ತಕ ಪ್ರಕಾಶನ ಆರಂಭಿಸುವ ಮೂಲಕ ನಿವೃತ್ತಿಯ ಬಳಿಕವೂ ಸೇವಾಕಾರ್ಯಕ್ಕೆ ಅವಕಾಶಗಳು ಮುಕ್ತವಾಗಿವೆ ಎಂಬ ಸಂದೇಶ ಸಾರಿದರು.
ತಾವು ಬಹುವಾಗಿ ಮೆಚ್ಚುವ ಹಾಗೂ ವೃತ್ತಿಯ ಜೊತೆಗೇ, ಸಾಹಿತ್ಯ ರಂಗದಲ್ಲಿಯೂ ಪ್ರಕಾಶನದ ಮೂಲಕ ಸೇವೆ ಸಲ್ಲಿಸಬಹುದು ಎಂಬ ಚಿಂತನೆಯೊಂದಿಗೆ ಪತ್ನಿ, ಉಪನ್ಯಾಸಕಿ ಮಹಾನಂದ ಡಿಗ್ಗಾಂವಕರ್ ಅವರ ಒತ್ತಾಸೆಯೊಂದಿಗೆ ಕನ್ನಡ ಪುಸ್ತಕ ಪ್ರಕಾಶನದ ಹೊಸ ರಂಗಕ್ಕೂ ತಮ್ಮನ್ನು ತೆರೆದುಕೊಂಡರು.
ಭಿನ್ನತೆ: ಇದೆಲ್ಲಕ್ಕಿಂತ ವಿಶಿಷ್ಟವೆಂದರೆ, ಡಾ. ನಾ ಸೋಮೇಶ್ವರ ಅವರು ಬರೆದ, 'ಸತ್ತ ಮೇಲೂ ಸಮಾಜ ಸೇವೆ' ಎಂಬ ಮೌಲಿಕ ಕೃತಿ ಬಿಡುಗಡೆ ಮಾಡಿದರು. ಇದು ಷಡಕ್ಷರಿಸ್ವಾಮಿ ಪ್ರಕಾಶನದ ಮೊದಲ ಪುಸ್ತಕ. ವೈಜ್ಞಾನಿಕವಾಗಿ, ಕರಾರುವಾಕ್ಕಾಗಿ, ಹಲವು ಮಹತ್ವದ ಮಾಹಿತಿ, ಚಿತ್ರಗಳನ್ನು ಒಳಗೊಂಡ ಕೃತಿ ಪ್ರಕಾಶಿಸುವ ಮೂಲಕ ಹಿರೇಮಠ ದಂಪತಿ ಪ್ರಕಾಶನ ಆರಂಭದಲ್ಲೂ ಭಿನ್ನತೆ ಮೆರೆದರು.
ಆಹ್ವಾನ ಪತ್ರಿಕೆಯಿಂದಲೇ ಹಿರೇಮಠ ದಂಪತಿ ನವೀನತೆ ಮರೆದಿದ್ದರು. ಬದುಕಿನಲ್ಲಿ ತಮ್ಮ ಬೆನ್ನು ತಟ್ಟಿ ಸ್ಫೂರ್ತಿ ತುಂಬಿ ಬೆಂಬಲಿಸಿದ ಎಲ್ಲರನ್ನು ಆಹ್ವಾನ ಪತ್ರಿಕೆಯಲ್ಲಿ ಸ್ಮರಿಸಿ, ರೂಢಿಯಂತೆ ಹಾರ- ಶಾಲು ಬೇಡ, ಬೊಗಸೆ ತುಂಬ ಪ್ರೀತಿ ಮಾತ್ರ ತನ್ನಿ... ಎಂದು ಕೋರಿ ಗಮನ ಸೆಳೆದಿದ್ದರು.
ಖ್ಯಾತ ವೈದ್ಯ ಡಾ. ಪಿ.ಎಸ್. ಶಂಕರ್, ಆರ್ಕೆ ಹುಡಗಿ, ಬಸವರಾಜಪ್ಪ ಕಾಮರೆಡ್ಡಿ, ಸಾಹಿತಿ ಡಾ. ಸ್ವಾಮಿರಾವ್ ಕುಲ್ಕರ್ಣಿ ಸರಳ ಸಮಾರಂಭದಲ್ಲಿ ಉಪಸ್ಥಿತರಿದ್ದು, ಡಿಗ್ಗಾಂವ್ಕರ್ ಪ್ರಕಾಶನದ ಚೊಚ್ಚಲ ಕೃತಿ ಸತ್ತಮೇಲೂ ಸಮಾಜ ಸೇವೆ ಲೋಕಾರ್ಪಣೆ ಮಾಡಿ ಶುಭ ಹಾರೈಸಿದರು.