ಶಾಸಕ ಸಂಭಾಜಿ ಗಡಿಪಾರಿಗೆ ಆಗ್ರಹ
ಕೆಂಭಾವಿ: ಅನೇಕ ವರ್ಷಗಳಿಂದ ರಾಜ್ಯದಲ್ಲಿದ್ದು, ನಾಡಿನ ಮತದಾರರಿಂದಲೇ ಆಯ್ಕೆಗೊಂಡು ವಿಧಾನ ಸಭೆ ಪ್ರವೇಶಿಸಿರುವ ಎಂಇಎಸ್ ಶಾಸಕ ಸಂಬಾಜಿ ಪಾಟೀಲ್ ಹಾಗೂ ಅರವಿಂದ ಪಾಟೀಲ ಕನ್ನಡಿಗರ ಬಗ್ಗೆ ಲಘುವಾಗಿ ಮಾತನಾಡಿರುವುದನ್ನು ಕರವೇ ತೀವ್ರವಾಗಿ ಖಂಡಿಸಿದೆ. ಅವರನ್ನು ತಕ್ಷಣ ಈ ರಾಜ್ಯದಿಂದ ಗಡಿಪಾರು ಮಾಡಬೇಕು. ಇದರಿಂದ ಅವರಿಗೆ ಬುದ್ಧಿ ಕಲಿಸಿದಂತಾಗುತ್ತದೆ ಎಂದು ಕರವೇ ಕೆಂಭಾವಿ ಹೋಬಳಿ ಉಪಾಧ್ಯಕ್ಷ ರವಿರಾಜ ಕಂದಳ್ಳಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಈ ಕೂಡಲೇ ಎಂಇಎಸ್ ಶಾಸಕರ ವಿರುದ್ದ ಪ್ರಕರಣ ದಾಖಲಿಸಿಕೊಂಡು ಅವರನ್ನು ಬಂಧಿಸಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ವೇದಿಕೆಯ ಮಲ್ಲಿಕಾರ್ಜುನ ಸ್ವಾಮಿ ಪರಸನಹಳ್ಳಿ ಹಾಗೂ ಕಾರ್ಯಕರ್ತರು ಇದ್ದರು.
ಇಂದು ಉಚಿತ ನೇತ್ರ ಚಿಕಿತ್ಸಾ ಶಿಬಿರ
ಸುರಪುರ: ತಾಲೂಕಿನ ಬಿಜಾಸ್ಪೂರ ಗ್ರಾಮದಲ್ಲಿ ದಿ. ಬಸವರಾಜಪ್ಪ ಪಾಟೀಲ ವಕೀಲರು ಇವರ ಸ್ಮರಣಾರ್ಥವಾಗಿ ಡಿ. 2ರಂದು ಸೋಮವಾರ ಬೆ.10.30ಕ್ಕೆ ಉಚಿತ ನೇತ್ರ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ. ಹೈ.ಕ. ಶಿಕ್ಷಣ ಸಂಸ್ಥೆಯ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜಿನ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯ ನೇತ್ರ ಚಿಕಿತ್ಸಾಶಾಸ್ತ್ರ ವಿಭಾಗ ಮತ್ತು ಯಾದಗಿರಿ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆಸಂಯುಕ್ತಾಶ್ರಯದಲ್ಲಿ ಬಿಜಾಸ್ಪೂರು ಗ್ರಾಮದ ಬಸವ ನಿಲಯ ಆವರಣದಲ್ಲಿ ಉಚಿತ ನೇತ್ರಾ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ನುರಿತ ನೇತ್ರ ತಜ್ಞರು ಮತ್ತು ಸಿಬ್ಬಂದಿ ಶಿಬಿರದಲ್ಲಿ ತಪಾಸಣೆ ಮಾಡುವರು. ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಪಡುವ ರೋಗಿಗಳಿಗೆ ಡಿ. 3, 4ರಂದು ಗುಲ್ಬರ್ಗದ ಬಸವೇಶ್ವರ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆ ಸಲಾಗುವುದು. ಕಣ್ಣಿನ ದೋಷದಿಂದ ಬಳಲುತ್ತಿರುವವರು ಶಿಬಿರದ ಲಾಭವನ್ನು ಪಡೆದುಕೊಳ್ಳಬೇಕೆಂದು ಶಿಬಿರದ ಆಯೋಜಕರಎ ತಿಳಿಸಿದ್ದಾರೆ.