ಹಾಳಾದ ಹೆದ್ದಾರಿಗೆ ಯಾರು ದಿಕ್ಕು?
ಕನ್ನಡಪ್ರಭ ವಾರ್ತೆ ಹುಣಸಗಿ ಡಿ.1
ಸದನದಲ್ಲಿ ಚರ್ಚೆ ಮಾಡದ ರಸ್ತೆಗಳು- ಆ ಕ್ಷೇತ್ರದ ಶಾಸಕರು.. ಏನು ಹೇಳಬೇಕು......
ಸುರಪುರ ತಾಲೂಕಿನ ಕೆ-ಶಿಪ್ ರಸ್ತೆ ಅಂದ ತಕ್ಷಣ ನೆನಪಿಗೆ ಬರುವುದು ದೇವಾಪುರ- ಮನಗೂಳಿ ರಾಜ್ಯ ಹೆದ್ದಾರಿ 61. ಹಾಗೇ ಈ ರಸ್ತೆಯ ವಿಧಾನ ಸಭಾ ಸದಸ್ಯರ ನಿಷ್ಕಾಳಜಿಯಿಂದ ಈ ರಸ್ತೆ ಇಂದು ಅನಾಥವಾಗಿದೆ. ಹಾಳಾದ ರಸ್ತೆಯ ದೆಸೆಯಿಂದ ನೂರಾರು ಜನರ ಪ್ರಾಣ ಹೋಗಿದೆ. ಅನೇಕರು ಉಪಜೀವನಕ್ಕಾಗಿ ಆಟೋ, ಖಾಸಗಿ ಜೀಪ್ ಇಟ್ಟುಕೊಂಡಿದ್ದರೂ, ಅವು ಕೂಡಾ ಸರಿಯಾಗಿ ಬಾಳಿಕೆ ಬರದೆ ಹೊಲ-ಮನೆ ಮಾರಿ ವಾಹನದ ಕಂತು ಕಟ್ಟಿ ದಿವಾಳಿಯಾಗಿದ್ದಾರೆ.
ಈ ರಸ್ತೆಯ ಬಗೆಗೆ ಒಂದಿಷ್ಟು: ಈ ರಸ್ತೆಯ ಉದ್ದ 106 ಕಿ.ಮಿ, ಇದು ವಿಜಾಪುರ ಜಿಲ್ಲೆಯ ಮನಗೂಳಿ, ಬಸವನ ಬಾಗೆವಾಡಿ, ಹೂವಿನ ಹಿಪ್ಪರಗಿ, ತಾಳಿಕೋಟಿ, ಯಾದಗಿರಿ ಜಿಲ್ಲೆಯ ಹುಣಸಗಿ, ದೇವಾಪುರ ಬರುವುದು. ಇದನ್ನು ಕಳೆದ ಎರಡು ವರ್ಷಗಳ ಕೆಳಗೆ ವಿಶ್ವಬ್ಯಾಂಕ್ ಯೋಜನೆಯ ನೆರವಿನೊಂದಿಗೆ ರು. 248 ಕೋಟಿ ಟೆಂಡರ್ ಕರೆಯಲಾಯಿತು. ಇನ್ನೆನು ರಸ್ತೆಯ ನಿರ್ಮಾಣ ಆಗೇ ಬಿಟ್ಟಿತು ಎಂದು ಭಾವಿಸಿದ್ದರು. ಆದರೆ ಟೆಂಡರ್ ನಿಯಮಾವಳಿಗಳು ಕಾಮಗಾರಿಯ ಆರಂಭಕ್ಕೆ ವಿಘ್ನವನ್ನುಂಟು ಮಾಡಿದವು. ಇದರಿಂದ ಈ ರಸ್ತೆಯಲ್ಲಿ ಸಂಚರಿಸುವ ವಾಸ್ಕೋ, ಪಣಜಿ, ಮೀರಜ್, ಮಂತ್ರಾಲಯ, ಶ್ರೀಶೈಲ, ಹೈದರಾಬಾದ್, ಬಿಜಾಪುರ, ಪುಣೆ ಬಸ್ಸುಗಳು ಮಾರ್ಗ ಬದಲಿಸಿ ಸಂಚರಿಸುತ್ತಿವೆ. ಇಂತಹ ರಸ್ತೆಗೆ ಕನಿಷ್ಠ ನಿರ್ವಹಣೆಗೂ ಕ್ರಮ ತೆಗೆದುಕೊಳ್ಳದಿರುವ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿರೋಧ ಪಕ್ಷದವರಾದರೂ ಈ ರಸ್ತೆಯ ಕುರಿತು ಹೋರಾಟ ಮಾಡಬೇಕಿತ್ತು. ಅವರು ಕೂಡಾ ಜನ ಇನ್ನು ಸಿಟ್ಟಿಗೆ ಬರಲಿ ಎಂದು ಕಾಯ್ದಿದ್ದಾರಂತೆ. ಇನ್ನು ಸಂಘ ಸಂಸ್ಥೆಗಳ ಕಾರ್ಯವೂ ಅಷ್ಟಕ್ಕೆ ಅಷ್ಟೆ.
ನೆನೆಗುದಿ: ಸದ್ಯ ರಾಜ್ಯದಲ್ಲಿರುವ ನಾಲ್ಕು ಪ್ರಮುಖ ಕೆ ಶಿಪ್ (ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ) ರಸ್ತೆಗಳ ಕಾಮಗಾರಿಗೆ ಟೆಂಡರ್ ಕರೆಯಲಾಗಿತ್ತು. ಅದರಲ್ಲಿ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಿಂದ ಬಾಗಲಕೋಟೆ ಜಿಲ್ಲೆಯ ಮುಧೋಳವರೆಗೆ 109 ಕಿಮಿ, ಬಿಜಾಪುರ ಜಿಲ್ಲೆಯ ಮನಗೂಳಿಯಿಂದ ಯಾದಗಿರಿ ಜಿಲ್ಲೆಯ ದೇವಪುರವರೆಗಿನ ರಸ್ತೆಗಳು ಒಳಗೊಂಡಿವೆ. ರಸ್ತೆ ನಿರ್ಮಾಣದ ನಂತರ ಏಳು ವರ್ಷಗಳವರೆಗಿನ ನಿರ್ವಹಣೆ ನಿಯಮಾವಳಿಯಲ್ಲಿ ಗೊಂದಲದಿಂದಾಗಿ ಗುತ್ತಿಗೆದಾರರು ಹಿಂದೆ ಸರಿದಿದ್ದರಿಂದ ಈ ಕಾಮಗಾರಿಗಳು ನೆನಗುದಿಗೆ ಬೀಳಲು ಕಾರಣವೆಂದು ತಿಳಿದು ಬಂದಿದೆ.
ವಿಶ್ವ ಬ್ಯಾಂಕ್ ತಂಡ ಭೇಟಿ: ಇದೀಗ ಈ ರಸ್ತೆಗಳ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡುತ್ತಿರುವ ವಿಶ್ವ ಬ್ಯಾಂಕ್ ತಂಡ ಉತ್ತರ ಕರ್ನಾಟಕದ ಕಾಮಗಾರಿ ನಡೆಯಲಿರುವ ಜಿಲ್ಲೆಗಳಲ್ಲಿ ಡಿ.4ರಿಂದ ಡಿ.12ರವರೆಗೆ ವೀಕ್ಷಣಾ ಭೇಟಿ ನೀಡಿ ಎಲ್ಲ ಮಾಹಿತಿ ಕಲೆಹಾಕಿ ಅಂತಿಮಗೊಳಿಸಲಿದೆ. ಒಂದು ವೇಳೆ ವೇಳೆ ವಿಶ್ವಬ್ಯಾಂಕ್ ಹಸಿರು ನಿಶಾನೆ ತೋರಿಸಿದರೂ, ಕಾಮಗಾರಿ ಆರಂಭವಾಗಲು ಒಂದು ವರ್ಷ ಬೇಕೆಂದು ಕೆ ಶಿಪ್ ಮೂಲಗಳು ತಿಳಿಸುತ್ತವೆ.
ಹಾಗಾದರೆ ಇನ್ನೂ ಒಂದು ವರ್ಷ ಕಾಲಾವಧಿವರೆಗೆ ರಸ್ತೆ ನಿರ್ವಹಣೆ ಸಂಬಂಧಿಸಿದ ಲೋಕೋಪಯೋಗಿ ಇಲಾಖೆಯು ಮಾಡಲೇಬೇಕು. ಮುಧೋಳ - ನಿಪ್ಪಾಣಿ ರಾಜ್ಯ ಹೆದ್ದಾರಿ ನಿರ್ವಹಣೆಯನ್ನು ಅಲ್ಲಿಯ ಲೋಕೋಪಯೋಗಿ ಇಲಾಖೆ ವಿಭಾಗ ಕಚೇರಿ ರು. 9 ಕೋಟಿಗಳಲ್ಲಿ ಮಾಡುತ್ತಿದೆ. ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ್ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ರು. 3 ಕೋಟಿಯಲ್ಲಿ ನಿರ್ವಹಣೆಗೆ ಸಜ್ಜಾಗಿದ್ದಾರೆ. ಆದರೆ ಮುದ್ದೇಬಿಹಾಳ ಮತ್ತು ಸುರಪುರ ಮತಕ್ಷೇತ್ರಗಳ ಶಾಸಕರು ಈ ಬಗ್ಗೆ ಯಾವುದೇ ತಲೆ ಕೆಡಿಸಿಕೊಳ್ಳದೆ ನಿರುಮ್ಮಳಾಗಿರುವುದರಿಂದ ತಾಳಿಕೋಟೆ, ಹೂವಿನಹಿಪ್ಪರಗಿ, ಹುಣಸಗಿ, ದೇವಾಪುರ ಜನರ ಅಸಹನೆಗೀಡಾಗಿದ್ದಾರೆ.
ಕಡತ ಅನಾಥ: ಧಾರವಾಡದ ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರರ ಕಚೇರಿಯಲ್ಲಿ ದೇವಾಪುರ -ಮನಗೋಳಿ ರಸ್ತೆಗೆ ಸಂಬಂಧಿಸಿದ ಮಾಳನೂರು ಗ್ರಾಮದಿಂದ ದೇವಪುರದವರೆಗಿನ 37 ಕಿ.ಮೀ ರಸ್ತೆಗೆ ಒಂದು ಪದರು ಡಾಂಬರ್ ಹಾಕುವ ರು. 2 ಕೋಟಿ ಅಂದಾಜು ಪತ್ರಿಕೆ ಧೂಳು ತಿನ್ನುತ್ತಾ ಬಿದ್ದು ಒಂದೂವರೆ ವರ್ಷವಾಗುತ್ತಾ ಬಂದಿದೆ. ಆದರೂ ಅಲ್ಲಿಯ ಮುಖ್ಯ ಅಭಿಯಂತರರಾದ ಒ.ಕೆ. ಸ್ವಾಮಿ ಇನ್ನೂ ಒಪ್ಪಿಗೆ ನೀಡಿಲ್ಲ. ಕಾರಣ ಈ ರಸ್ತೆಯ ನಿರ್ವಹಣೆಗೆ ಬೇಕಾದ ಅನುದಾನವನ್ನು ಕೆ ಶಿಪ್ನೊಂದಿಗೆ ಚರ್ಚೆ ಮಾಡಿ ನಂತರ ನೀಡುವುದಾಗಿ ಹೇಳುತ್ತಿದ್ದಾರೆ. ಶಾಸಕರ ನಿರ್ಲಕ್ಷ್ಯದಿಂದ ಈ ರಸ್ತೆ ಮತ್ತು ಇದಕ್ಕೆ ಸಂಬಂಧಿಸಿದ ಕಡತ ಅನಾಥವಾಗಿದೆ. ಕರ್ನಾಟಕ ಹೆದ್ದಾರಿ ಅಭಿವೃದ್ಧಿ ಯೋಜನೆಯ ಮುಖ್ಯ ಅಧಿಕಾರಿಯಾಗಿ ಮಣಿವಣ್ಣನ್ ಇತ್ತೀಚಿಗೆ ಅಧಿಕಾರ ವಹಿಸಿಕೊಂಡಿದ್ದಾರೆ.
ಕೆ ಶಿಪ್ ಕಚೇರಿ ಮೂಲಗಳು ತಿಳಿಸಿದಂತೆ ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ್ ಬಿಟ್ಟರೆ ಎ.ಎಸ್. ಪಾಟೀಲ್ ನಡಹಳ್ಳಿ, ಅಪ್ಪಾಜಿ ನಾಡಗೌಡ, ರಾಜಾ ವೆಂಕಟಪ್ಪನಾಯಕ ಇಲ್ಲಿಗೆ ಕನಿಷ್ಠ ಒಂದು ಬಾರಿಯಾದರೂ ಭೇಟಿ ನೀಡಿಲ್ಲವಂತೆ. ಬಿಜಾಪುರ ಬಸ್ಸಿನಲ್ಲಿ ಪ್ರಯಾಣಿಕನೊಬ್ಬ ಈ ಬಗ್ಗೆ ತಿಳಿಸುತ್ತಾ, ಶಿವಾನಂದ ಪಾಟೀಲ್ ಅವರೊಬ್ಬರ ಗುದ್ದ್ಯಡಲಿಕತ್ತಾರ. ರಸ್ತಾ ಅವರೊಬ್ಬರ ಗುತ್ತಾ ತಗೊಂಡರೇನು? ಎಂದು ಆಕ್ರೋಶಗೊಂಡ. ಕೆ ಶಿಪ್ ತಿಳಿಸುವಂತೆ ಈ ರಸ್ತೆ ನಿರ್ವಹಣೆಗೆ ಸರ್ಕಾರ ಸೂಚಿಸಿದಲ್ಲಿ ತಾವೇ ಮುಂದಾಗುವುದಾಗಿ ಹೇಳಿದ್ದಾರೆ. ಇನ್ನಾದರೂ ಈ ರಸ್ತೆ ವ್ಯಾಪ್ತಿ ಶಾಸಕರು ಜಂಟಿ ಪ್ರಯತ್ನ ಮಾಡಿದರೆ ಜನ ಮೆಚ್ಚಿಯಾರು. ಇನ್ನಾದರೂ ರಸ್ತೆ ಕುರಿತು ಕಾಳಜಿ ತೋರುವರಾ?
ಹಣ ಖರ್ಚಾದರೂ ದುರಸ್ತಿ ಕಾರಣದ ರಸ್ತೆ
ಶಹಾಪುರ: ತಾಲೂಕಿನ ಹತ್ತಿಗೂಡೂರ ಕ್ರಾಸ್ನಿಂದ ಹೈಯಾಳಕ್ಕೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿರುವುದು
ಜನಪ್ರತಿನಿಧಿಗಳ ನಿಷ್ಕಾಳಜಿಗೆ ಸಾಕ್ಷಿಯಾಗಿದೆ. ರಸ್ತೆ ರಿಪೇರಿ ನೆಪದಲ್ಲಿ ಪ್ರವಾಹ ವಿಕೋಪ
ನಿಧಿ ಇನ್ನಿತರ ಅನುದಾನದಲ್ಲಿ ಸರ್ಕಾರದ ಲೆಕ್ಕದಲ್ಲಿ ಖರ್ಚು ಮಾಡಿದ್ದರೂ ರಸ್ತೆಯ ಸ್ಥಿತಿ ಮಾತ್ರ ಪುಟ್ಟಿ ಮಣ್ಣು ಕಾಣದಂತಾಗಿದೆ.
ದಿನನಿತ್ಯ ನೂರಾರು ವಾಹನಗಳು ಓಡಾಡುವ, ಮರಳು ಸಾಕಾಣಿಕೆಯ ಮುಖ್ಯ ರಸ್ತೆಯು ಇದಾಗಿದೆ. ಆಳೆತ್ತರದ ತಗ್ಗು ಗುಂಡಿಗಳು ಬಿದ್ದಿವೆ. ಈ ಭಾಗದ ಜನಪ್ರತಿನಿಧಿಗಳು ಸೂಕ್ತ ಕಾಳಜಿ ವಹಿಸದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ದಿನನಿತ್ಯ ತಿರುಗಾಡುವವರು ರಸ್ತೆಯ ಸ್ಥಿತಿ ಬಗ್ಗೆ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಹೈಯಾಳ ರಸ್ತೆಯತ್ತ ಗಮನ ಹರಿಸುವರೇ ಕಾದು ನೋಡಬೇಕಾಗಿದೆ.