ಅವರ ಆಸ್ತಿ ಕೋಲಿ ಕಬ್ಬಲಿಗ ಸಮಾಜದ್ದು: ಮುಖಂಡರ ಸ್ಪಷ್ಟನೆ
ಕ.ಪ್ರ.ವಾರ್ತೆ ಗುಲ್ಬರ್ಗ ಡಿ.2
ಅಫಜಲ್ಪುರ ಪಟ್ಟಣದ ಅಂಬಿಗರ ಚೌಡಯ್ಯ ನಗರದಲ್ಲಿರುವ ವಿಠ್ಠಲ್ ಹೇರೂರ ಅವರಿಗೆ ಸೇರಿದ ಸುಮಾರು 9 ಪ್ಲಾಟ್ಗಳ ಆಸ್ತಿ ಕೋಲಿ ಕಬ್ಬಲಿಗ ಸಮಾಜಕ್ಕೆ ಸೇರಿದವಾಗಿರುತ್ತವೆ ಎಂದು ತಾಲೂಕು ಕೋಲಿ ಕಬ್ಬಲಿಗ ಸಮಾಜ ಸಂಘದ ಮುಖಂಡರಾದ ಅವಣ್ಣ ಮ್ಯಾಕೇರಿ, ಲಚ್ಚಪ್ಪ ಜಮಾದಾರ, ಸಿದ್ದಪ್ಪ ಸಿನ್ನೂರ, ರಮೇಶ ಇಂಗಳಗಿ, ಬಸಣ್ಣ ಎಳಮೇಲಿ ಅವರು ಸ್ಪಷ್ಟಪಡಿಸಿದ್ದಾರೆ.
ವಿಠ್ಠಲ್ ಹೇರೂರ ಅವರು ಇಡೀ ಕೋಲಿ ಕಬ್ಬಲಿಗ ಸಮಾಜಕ್ಕೆ ಸೇರಿದವರು. ಅವರು ತಮ್ಮ ಜೀವನ ಪರ್ಯಂತ ಸಮಾಜಕ್ಕಾಗಿ ಹೋರಾಟ ಮಾಡುತ್ತ ಬಂದಿದ್ದು, ಸಮಾಜದವರಿಗಾಗಿ ಪಟ್ಟಣದಲ್ಲಿ 7.24 ಎಕರೆ ಭೂಮಿಯಲ್ಲಿ ಅಂಬಿಗರ ಚೌಡಯ್ಯ ನಗರ ಲೇಔಟ್ ನಿರ್ಮಿಸಿ ಸಮಾಜ ಬಂಧುಗಳಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಸಮಾಜದಿಂದ ತಲಾ 2000 ಗಳಂತೆ ಸಂಗ್ರಹಿಸಿ ಈ ಹೊಲವನ್ನು ಖರೀದಿಸಿ ಸಮಾಜದ ಕಾರ್ಯದರ್ಶಿಯಾಗಿದ್ದ ಮಲಕಣ್ಣ ಯಂಕಂಚಿ ಮೇಲಿನ ವಿಶ್ವಾಸದಿಂದ ಅವರ ಹೆಸರಿನಲ್ಲಿ ಎಲ್ಲ ವ್ಯವಹಾರ ಮಾಡಿ ನಿವೇಶನಗಳನ್ನು ಹಂಚಿರುತ್ತಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.