ಮಾಜಿ ಎಂಎಲ್ಸಿ ವಿಠ್ಠಲ್ ಹೆರೂರ್ ದೇಹಸ್ಥಿತಿ ವಿಷಮ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಡಿ.2
ಕೋಲಿ ಸಮಾಜ ಸಂಘಟಕ, ಮಾಜಿ ಎಂಎಲ್ಸಿ ವಿಠ್ಠಲ್ ಹೆರೂರ್ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಅವರು ನಗರದ ಸತ್ಯ ಯೂರೋ ಕೇರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕಳೆದ 4 ದಿನಗಳ ಹಿಂದೆಯೇ ಅನಾರೋಗ್ಯದಿಂದ ದಾಖಲಾಗಿರುವ ಇವರ ದೇಹಸ್ಥಿತಿ ದಿನದಿಂದ ದಿನಕ್ಕೆ ವಿಷಮಿಸುತ್ತಿದೆ ಎಂದು ಅವರ ಕುಟುಂಬ ಮೂಲಗಳು- ಅಭಿಮಾನಿ ಬಳಗ ತಿಳಿಸಿದೆ. ಆಸ್ಪತ್ರೆ ವೈದ್ಯರು ಈ ಸಂಗತಿಯನ್ನು ಖಚಿತಪಡಿಸಿದ್ದಾರೆ.
ಇವರ ಆರೋಗ್ಯ ಸ್ಥಿತಿ ಉಲ್ಬಣಿಸುತ್ತಿರುವ ಸುದ್ದಿ ತಿಳಿದ ಅಭಿಮಾನಿಗಳು, ಕೋಲಿ ಸಮುದಾಯ ಸಂಘಟನೆ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಸತ್ಯ ಆಸ್ಪತ್ರೆ ಇರುವ ಜಿಲ್ಲಾ ಕೋರ್ಟ್ ಮುಂಭಾಗದ ರಸ್ತೆಯಲ್ಲಿ ಜಮಾಯಿಸಿದ್ದಾರೆ. ಈ ರಸ್ತೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಹೆರೂರ್ ಕೋಮಾವಸ್ಥೆಯಲ್ಲಿದ್ದಾರೆ, ಯಾರನ್ನೂ ಗುರುತಿಸುತ್ತಿಲ್ಲ.
ಆಸ್ಪತ್ರೆ ಮೂಲಗಳ ಪ್ರಕಾರ-ವಿಠ್ಠಲ್ ಹೆರೂರ್ ಅವರು ಕ್ಯಾನ್ಸರ್ ಕಾಯಿಲೆಯಿಂದ ನರಳುತ್ತಿದ್ದಾರೆ. ಅವರನ್ನು ವೆಂಟಿಲೇಟರ್ ಸೌಕರ್ಯದಲ್ಲಿ ತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ, ಪರಿಣಿತ ವೈದ್ಯರ ತಂಡದ ಚಿಕಿತ್ಸೆ ಮುಂದುವರಿದಿದೆ. ರಕ್ತದೊತ್ತಡ ಏರಿಳಿತವಾಗುತ್ತಿದೆ ಎಂದು ತಿಳಿದು ಬಂದಿದೆ.
ವೈದ್ಯರು- ಅಭಿಮಾನಿಗಳ ವಾಗ್ವಾದ: ವಿಠ್ಠಲ್ ಹೆರೂರ್ ಹಲವು ದಶಕಗಳಿಂದ ಪ್ರಗತಿಪರ ಚಿಂತಕರಾಗಿ, ಬಂಡಾಯ ಸಾಹಿತ್ಯ ಸಂಘಟನೆಯ ಬೆಂಬಲಿಗರಾಗಿ, ಕೋಲಿ ಸಮಾಜ ಸಮ್ಮೇಳನಗಳನ್ನು ಸಂಘಟಿಸುತ್ತ ಈ ವರ್ಗದವರಿಗೆ ಎಸ್ಟಿ ಪಟ್ಟ ಬೇಡಿಕೆಯನ್ನು ಕೇಂದ್ರದವರೆಗೂ ಪ್ರತಿಧ್ವನಿಸುವಂತೆ ಮಾಡಿದವರ ಪೈಕಿ ಮುಂಚೂಣಿಯಲ್ಲಿದ್ದವರು. ಕಾಯಿಲೆ ಪೀಡಿತರಾಗಿ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟದಲ್ಲಿರುವಾಗ ಅಭಿಮಾನಿಗಳು ಅವರ ಯೋಗಕ್ಷೇವುಕ್ಕೆ ಮಾತ್ರ ತಮ್ಮ ವಿಚಾರಣೆ ಸೀಮಿತಗೊಳಿಸದೆ ವೈದ್ಯರೊಂದಿಗೇ ವಾಗ್ವಾದ ನಡೆಸುತ್ತಿರುವುದು ಬೇಸರದ ಸಂಗತಿ.
ವೆಂಟಿಲೇಟರ್ ಸೌಕರ್ಯದೊಂದಿಗೆ ಹೆರೂರ್ ಅವರಿಗೆ ಆಮ್ಲಜನಕ ನೀಡಿ ಚಿಕಿತ್ಸೆ ಮುಂದುವರಿಸಲಾಗುತ್ತಿದೆ. ಅವರ ಆರೋಗ್ಯ ವಿಷಮಿಸುತ್ತಿದೆ, ಆದರೆ ಯಾವಾಗ ಏನಾಗುತ್ತದೆ ಎಂದು ಹೇಳಲಾಗದು ಎಂದು ವೈದ್ಯರು ಹೇಳಿದ್ದರೂ ಅಭಿಮಾನಿಗಳು ನಿಖರ ಮಾಹಿತಿಗಾಗಿ ಆಗ್ರಹಿಸಿ ವೈದ್ಯರೊಂದಿಗೇ ವಾಗ್ವಾದ ನಡೆಸುತ್ತಿರುವುದು ಸತ್ಯ ಯೂರೋಕೇರ್ ಆಸ್ಪತ್ರೆ ಅಂಗಳದಲ್ಲಿ ಕಂಡು ಬಂತು.
ಕೋಲಿ ಸಮಾಜ ಸಂಘಟಕ: 2004ರಲ್ಲಿ ಜೆಡಿಎಸ್ನಿಂದ ಪಕ್ಷದಿಂದ ವಿಧಾನಪರಿಷತ್ ಸದಸ್ಯರಾಗಿ ನಾಮಕರಣಗೊಂಡಿದ್ದ ಹೆರೂರ್ ಇದೇ ಅವಧಿಯಲ್ಲಿ ಮುಖ್ಯ ಸಚೇತಕರಾಗಿ ಕಾರ್ಯನಿರ್ವಹಿಸಿದ್ದರು. ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿ, ಬಿಎಸ್ಪಿ ಪಕ್ಷಗಳನ್ನು ಪ್ರತಿನಿಧಿಸಿದ್ದರು. ಆದರೆ ಇವರಿಗೆ ರಾಜಕೀಯವಾಗಿ ಬಡ್ತಿ ದೊರಕಿದ್ದು ಜೆಡಿಎಸ್ನಲ್ಲಿದ್ದಾಗ ಎಂಬುದು ಗಮನಾರ್ಹ.
ಜೆಡಿಎಸ್ ಕಾರ್ಯಕರ್ತರಾಗಿದ್ದಾಗಲೇ ಇವರಿಗೆ ಎಂಎಲ್ಸಿ ಯೋಗ ದೊರಕಿತ್ತು. 2013ರ ಮೇ ತಿಂಗಳಲ್ಲಿ ನಡೆದ ರಾಜ್ಯ ಅಸೆಂಬ್ಲಿ ಚುನಾವಣೆಯಲ್ಲೂ ಹೆರೂರ್ ಜೆಡಿಎಸ್ ಹುರಿಯಾಳಾಗಿಯೇ ಅಖಾಡದಲ್ಲಿದ್ದರು.
ಅಫಜಲ್ಪುರ ತಾಲೂಕು ದೇವಲಗಾಣಗಾಪುರ ನಿವಾಸಿಯಾದ ಹೆರೂರ್, 1986ರಲ್ಲಿ ಗಾಣಗಾಪುರದಲ್ಲಿ ಬಂಡಾಯ ಸಾಹಿತ್ಯ ಸಮ್ಮೇಳನಕ್ಕೆ ವೇದಿಕೆ ಕಲ್ಪಿಸಿ ಸರ್ವರ ಗಮನ ಸೆಳೆದರು. ಇದಾದ ನಂತರ ಕೋಲಿ ಸಮಾಜ ಸಂಘಟನೆಯತ್ತ ಲಕ್ಷ ಕೊಟ್ಟರು. 1992ರಲ್ಲಿ ಅಫಜಲ್ಪುರದಲ್ಲಿ ಕೋಲಿ ಸಮಾಜ ಸಮ್ಮೇಳನ ಮಾಡಿದ ಕೀರ್ತಿ ಇವರದ್ದು.
ಇದಾದ ನಂತರ 10ಕ್ಕೂ ಹೆಚ್ಚು ರಾಜ್ಯ ಸಮ್ಮೇಳನಗಳನ್ನು ಸಂಘಟಿಸಿದರಲ್ಲದೆ, ಹಾವೇರಿ ಜಿಲ್ಲೆಯ ಚೌಡದಾನಾಪುರದಲ್ಲಿಯೂ(ಇದು ಅಂಬಿಗರ ಚೌಡಯ್ಯನವರ ಸ್ಥಳ) ಕೋಲಿ ಸಮಾಜ ಸಂಘಟನೆಯ ಸಮಾರಂಭ ನಡೆಸಿದ್ದರು. ಇದಲ್ಲದೆ ಗುಲ್ಬರ್ಗದಲ್ಲಿ ಸತತ 8 ಸಮ್ಮೇಳನ ನಡೆಸಿ ಕೋಲಿ ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡಬೇಕೆಂದು ರಾಜ್ಯ- ಕೇಂದ್ರ ಸರ್ಕಾರಗಳನ್ನು ಆಗ್ರಹಿಸುತ್ತಲೇ ಬಂದವರು.
ಬಹುಕೋಟಿ ಆಸ್ತಿಪಾಸ್ತಿ: ವಿಠ್ಠಲ್ ಹೆರೂರ್ ಬೆಂಗಳೂರು, ಗುಲ್ಬರ್ಗ, ಅಫಜಲ್ಪುರ, ಗಾಣಗಾಪುರದಲ್ಲಿ ಅಪಾರ ಆಸ್ತಿಪಾಸ್ತಿ ಹೊಂದಿದವರು. ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿಯಲ್ಲಿ 1 ನಿವೇಶನ, ಗುಲ್ಬರ್ಗದಲ್ಲಿ ಮನೆ, ಅಫಜಲ್ಪುರದಲ್ಲಿ ತಮ್ಮದೇ ಸ್ವಂತ ನಿವೇಶನಗಳಿರುವ ಬಡಾವಣೆ, ಗಾಣಗಾಪುರದಲ್ಲಿ 2 ಎಕರೆಯಲ್ಲಿ ಅಭಿವೃದ್ಧಿಪಡಿಸಿರುವ ಬಡಾವಣೆ, ಜೊತೆಗೇ 1 ಶಾಲೆ... ಹೀಗೆ ಬಹುಕೋಟಿ ಬೆಲೆಬಾಳುವ ಆಸ್ತಿಪಾಸ್ತಿ ಒಡೆಯರು.
ಆಸ್ತಿಪಾಸ್ತಿ ವಿಚಾರದಲ್ಲಿ ಕೆಲದಿನಗಳ ಹಿಂದೆಯೇ ಗೊಂದಲ ಕಂಡಿತ್ತಾದರೂ ಹೆರೂರ್ ಅವರೇ ಮುಂದಾಗಿ ತಮಗೆ ಸೇರಿದ ಆಸ್ತಿಪಾಸ್ತಿ ವಿಚಾರವಾಗಿ, ಅದರ ಒಡೆತನದ ವಿಚಾರವಾಗಿ ಕಾನೂನು ರೀತಿ ಉಯಿಲು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ತಮ್ಮ ಸಹೋದರ ಡಾ. ದಿಗಂಬರ ಅವರಿಗೆ ತಮ್ಮೆಲ್ಲ ಆಸ್ತಿಪಾಸ್ತಿಯ ಜನರಲ್ ಪವರ್ ಆಫ್ ಅಟಾರ್ನಿ(ಜಿಪಿಎ) ಬರೆದಿದ್ದಾರೆ ಎಂದೂ ಹೆರೂರ್ ಅಭಿಮಾನಿಗಳು, ನಿಕಟವರ್ತಿಗಳು 'ಕನ್ನಡಪ್ರಭ'ಕ್ಕೆ ಖಚಿತಪಡಿಸಿದ್ದಾರೆ.