ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕೋಲಿ ಸಮಾಜದಲ್ಲಿ ಜಾಗೃತಿ ಜ್ಯೋತಿ ಹಚ್ಚಿದ ಚೇತನ

Lingaraj Badiger
Updated On : 4 Dec 2013, 10:57 am

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಡಿ.3
ನಮ್ಮ ಮಂದಿ (ಕಬ್ಬಲಿಗ ಸಮಾಜ ಬಾಂಧವರು) ತುಸು ಭೋಳಾ... ಯಾನೂ ಗೊತ್ತಿಲ್ಲದವ್ರು, ರೊಕ್ಕಕ್ಕಾಗಿ ಊರಾಗ ಇವ್ರೇ ದೋ ಪಾರ್ಟಿ ಆಗಿ ನಿಂತು ತಲವಾರ, ಜಂಬೆ ಹಿಡ್ದು ತಾವೇ ಹೊಡ್ದಾಡಿಕೊಂಡು ಪರಸ್ಪರ ಜೀಂವಾ ತೆಗಿಲಿಕ್ಕೂ ಹೇಸ್ಗೊಂಡವರಲ್ರಿ. ಸತ್ತ ಸುದ್ದಿ ಸಾರಲಿಕ್ಕೂ ನಮ್ಮವರನ್ನೇ ಬಳಸೋ ಕೆಟ್ಟ ಪರಂಪರೆ ಅದರಿ, ಹೀಂಗಿರೋ ಕುಲಬಾಂಧವರಲ್ಲಿ ಸಿಂಹಪಾಲು ಮಂದಿ ದುಶ್ಚಟಗಳ ದಾಸರು. ಇಂಥಾ ಸಮುದಾಯದಲ್ಲಿ ಅರಿವಿನ ದೀಪ ಹಚ್ಬೇಕು ಅಂತ ಹೊಂಟೀನಿ, ಏನಾಗ್ತದೋ ಏನೋ...
ಕೋಲಿ ಸಮುದಾಯದಲ್ಲಿನ ಹತ್ತು ಹಲವು ಅಪಸವ್ಯಗಳನ್ನು ತಾವೇ ಖುದ್ದು ಗುರ್ತಿಸಿ, ಅವುಗಳ ಮೂಲೋತ್ಪಾಟನೆ ಸಂಕಲ್ಪ ಮಾಡಿ ಸದಾಕಾಲ ಕಾಲಿಗೆ ಗಾಲಿ ಕಟ್ಟಿಕೊಂಡಂತೆ ಹಳ್ಳಿ- ಪಟ್ಟಣ ಸುತ್ತುತ್ತ ಸಮಾಜ ಸಂಘಟನೆ ಮಾಡುತ್ತಲೇ ಜಾಗೃತಿ ದೀಪ ಹಚ್ಚಿದ್ದ ಆ ಸಮಾಜದ ಜಟ್ಟಿ ವಿಠ್ಠಲ್ ಹೆರೂರ್ ತಮ್ಮ ಸಮುದಾಯ ಅಭಿವೃದ್ಧಿಗೆ ಯಾರಿಂದ ನೆರವಾಗುತ್ತದೆ ಎಂದು ತಮಗನ್ನಿಸುತ್ತಿತ್ತೋ ಅಂಥವರ ಮುಂದೆ ಮಾತ್ರ ಈ ಮೇಲಿನಂತೆ ಮನದಾಳದ ಮಾತುಗಳನ್ನು ಹಂಚಿಕೊಳ್ಳುತ್ತಿದ್ದರು.
ಸಮಾಜ ಬಾಂಧವರು ಮೌಢ್ಯ ಬಿಟ್ಟು ಮುಖ್ಯವಾಹಿನಿಗೆ ಬರಬೇಕು. ಅದೇ ಸಮಾಜದಲ್ಲಿ ಹುಟ್ಟಿದ್ದರೂ ಕೇವಲ ಸಮಾಜದ್ದಷ್ಟೇ ಅಲ್ಲ, ಇಡೀ ಮಾನವ ಸಮಾಜದ ಅಪನಂಬಿಕೆ, ಮೌಢ್ಯಗಳಿಗೆ ಅದ್ಹೇಗೆ ಅಂಬಿಗರ ಚೌಡಯ್ಯ ತಮ್ಮ ನಡೆ- ನುಡಿ ಹಾಗೂ ವಚನಗಳಿಂದ ಸಮಾಜ ತಿದ್ದುವ ಕೆಲಸಕ್ಕೆ ಮುಂದಾದರೋ ಅದೇ ರೀತಿಯಲ್ಲಿ ಕುಲಬಾಂಧವರು ಉದ್ಧಾರವಾಗಬೇಕು.
 ಚೌಡಯ್ಯನವರ ಹೆಸರು ಅಜರಾಮರವಾಗಿಸಬೇಕೆಂಬುದು ಹೆರೂರ್ ಕಳಕಳಿಯಾಗಿತ್ತು.
ಗಾಣಗಾಪುರ ವೇದಿಕೆಯಾಯ್ತು: ಹೋರಾಟಗಾರ ಹೆರೂರ್ ಬಹುಶಃ ದತ್ತನ ತಾಣ ದೇವಲಗಾಣಗಾಪುರ ಮಣ್ಣಿಂದಲೇ ಹೋರಾಟದ ಕಸವು ಪಡೆದುಕೊಂಡಿರಲು ಸಾಕು.
 ಏಕೆಂದರೆ 1980ರ ದಶಕದಿಂದಲೇ ಹೋರಾಟದ ದಾರಿ ಹಿಡಿದು ಕೊನೆಯುಸಿರಿರೋವರೆಗೂ ಆ ದಾರಿಯಿಂದ ಆಚೀಚೆ ಕದಲಲಿಲ್ಲ.
1985ರಲ್ಲಿ ಗಾಣಗಾಪುರ ಮಂಡಲ ಪಂಚಾಯ್ತಿ ಪ್ರಧಾನರಾಗಿ ಬದುಕಿನ ಹೋರಾಟ ಶುರುಮಾಡಿದ ಇವರು 2004ರಲ್ಲಿ ಎಂಎಲ್ಸಿಯಾಗಿ, ಸರ್ಕಾರದ ಮುಖ್ಯ ಸಚೇತಕರಾಗಿಯೂ ರಾಜಧಾನಿವರೆಗೂ ತಮ್ಮ ಹೋರಾಟದಿಂದಲೇ ಹೆಸರು ಮಾಡಿದವರು.
ಗಾಣಗಾಪುರದಲ್ಲಿ 1986ರಲ್ಲಿ ರಾಜ್ಯ 8ನೇ ಬಂಡಾಯ ಸಾಹಿತ್ಯ ಸಮ್ಮೇಳನ ನಡೆಸಿದರು. 1989ರಲ್ಲಿ ಸಾಮಾಜಿಕ ನ್ಯಾಯ- ಸಮಾನತೆಗಾಗಿ ಅಫಜಲ್ಪುರದಲ್ಲಿ ಶೋಷಿತ ವರ್ಗಗಳ ಸಮಾವೇಶ ಸಂಘಟಿಸಿದರು. ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು 1996ರಲ್ಲಿ ಗುಲ್ಬರ್ಗದಲ್ಲಿ ಬೃಹತ್ ರ್ಯಾಲಿ ನಡೆಸಿ ರಾಜ್ಯ- ಕೇಂದ್ರ ಸರ್ಕಾರಗಳ ಗಮನ ಸೆಳೆದರು.
ಹೀಗೆ ಸರಣಿ ಹೋರಾಟಗಳಿಂದ ಜನಮನ ಸೆಳೆದ ಹೆರೂರ್ ಹಿಂತಿರುಗಿ ನೋಡಿದ್ದೇ ಇಲ್ಲ, ಅಫಜಲ್ಪುರದಲ್ಲಿ ಅಂಬಿಗರ ಚೌಡಯ್ಯ ನಗರ ಸ್ಥಾಪಿಸಿದ ಇವರು 1996ರಲ್ಲಿ ಬಿಎಸ್ಪಿಯಿಂದ ಲೋಕಸಭೆಗೆ ಸ್ಪರ್ಧಿಸಿ 53 ಸಾವಿರ ಮತ ಪಡೆದು ಜಿಲ್ಲಾ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ ಮಾಡಿದ್ದರು.
ಹಲ್ಲೆಯನ್ನು ಮೆಟ್ಟಿನಿಂತರು: ಹೆರೂರ್ ರಾಜಕೀಯ ಏಳಿಗೆ ಸಹಿಸದ ಕೆಲವರು 1998ರಲ್ಲಿ ಚೌಡಾಪುರ ಕ್ರಾಸ್ ಬಳಿ ಇವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಆದರೂ ಎದೆಗುಂದದೆ ಚೇತರಿಸಿಕೊಂಡು 1999ರಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿ ತಮ್ಮ ವಿರೋಧಿ ಗುಂಪಿಗೆ ಪ್ರತ್ಯುತ್ತರ ನೀಡಿದ್ರು. 2002ರಲ್ಲಿ ಎನ್ವಿ ಮೈದಾನದಲ್ಲಿ ರಾಜ್ಯ ಮಟ್ಟದ ಅಂಬಿಗರ ಚೌಡಯ್ಯ ಜಯಂತಿ ಆಚರಿಸಿದರು.
2004ರಲ್ಲಿ ಹಾವೇರಿ ಜಿಲ್ಲ ಚೌಡದಾನಪುರದಲ್ಲಿ ಅಂಬಿಗರ ಚೌಡಯ್ಯ ಜಯಂತಿ ಸಂಘಟಿಸಿ ರಾಜ್ಯದ ನಾಲ್ಕು ನಿಟ್ಟಿನಿಂದ ಜ್ಯೋತಿ ಯಾತ್ರೆಗಳನ್ನು ಹೊರಡಿಸಿ ಅವು ಏಕಕಾಲಕ್ಕೆ ಚೌಡದಾನಪುರದಲ್ಲಿ ಸಂಗಮಿಸುವಂತೆ ನೋಡಿಕೊಂಡಿದ್ದರು.
ಹೆರೂರ್ ಅವರ ದೈತ್ಯ ಸಂಘಟನಾ ಶಕ್ತಿ ಕಂಡೇ ದೇವೇಗೌಡರು ಎಂಎಲ್ಸಿ ಸ್ಥಾನಮಾನ ಕೊಡುಗೆಯಾಗಿ ನೀಡಿದ್ದು ಗುಟ್ಟೇನಲ್ಲ.
ಗುವಿವಿಯಲ್ಲಿ ಆರಂಭವಾಗಿರುವ ಅಂಬಿಗರ ಚೌಡಯ್ಯ ಅಧ್ಯಯನ ಪೀಠ, ಸರ್ಕಾರವೇ ಚೌಡಯ್ಯ ಜಯಂತಿ ಆಚರಣೆಗೆ ಮುಂದಾದದ್ದು ಹೆರೂರ್ ಹೋರಾಟದ ಸಿಹಿಫಲಗಳು.
ಕೋಲಿಗೆ ಎಸ್ಟಿ ಪಟ್ಟ ಹೆರೂರ್ ಕನಸು: ತಾವಿರುವ ಕೋಲಿ, ಕಬ್ಬಲಿಗ, ಟೋಕರೆ ಕೋಳಿ ಹೀಗೆ 14 ಪರ್ಯಾಯ ಪದಗಳಿಂದ ಕರೆಯುವ ಕೋಲಿ ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡಬೇಕೆಂದು ಹೆರೂರ್ ನಡೆಸಿದ ಹೋರಾಟಗಳು ಹಲವು. ಅದಕ್ಕಾಗಿ ಈ ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡಿದಾಗ ಮಾತ್ರ ನಿಜವಾಗಿಯೂ ನ್ಯಾಯ ದೊರಕುವುದು ಎಂದು ಅವಕಾಶ ಸಿಕ್ಕಾಗೆಲ್ಲ ವಾದ ಮಂಡಿಸಿದವರು. ಕೋಲಿ ಸಮಾಜ ಈ ಹೋರಾಟ ಮುಂದುವರಿಸಿ ಹೆರೂರ್ ಕನಸು ನನಸಾಗಿಸಬೇಕಾಗಿದೆ.
ಆರೋಗ್ಯ ಲೆಕ್ಕಿಸಲೇ ಇಲ್ಲ: ವಿಟಿ (ವಿಠ್ಠಲ್ ತಿಪ್ಪಣ್ಣ) ಎಂದೇ ಹೆಸರಾಗಿದ್ದ ವಿಠ್ಠಲ್ ಹೆರೂರ್ ಹೋರಾಟದಲ್ಲಿ ತಮ್ಮ ಆರೋಗ್ಯದತ್ತ ನಿಷ್ಕಾಳಜಿ ತೋರದ್ದೇ ಕ್ಯಾನ್ಸರ್‌ಪೀಡಿತರಾಗಲು ಕಾರಣವಾಯ್ತು.
 2 ವರ್ಷಗಳಿಂದ ದೈಹಿಕವಾಗಿ ಸೊರಗುತ್ತಲೇ ಸಾಗಿದ್ದರೂ ಇವರ ಹೋರಾಟ ಮಾತ್ರ ಸೊರಗಲಿಲ್ಲ.
ಕಳೆದ ಮೇ ತಿಂಗಳಲ್ಲಿಯೂ ಅಸೆಂಬ್ಲಿ ಅಖಾಡಕ್ಕಿಳಿದರು ಎಂದರೆ ಅವರ ಹೋರಾಟದ ಕೆಚ್ಚು ಹೇಗಿತ್ತು ಎಂಬುದರ ಅರಿವಾಗುತ್ತದೆ.
  ಆಪ್ತರು, ಮನೆ ಮಂದಿ ಹೋರಾಟ ಸಾಕು, ಆರೋಗ್ಯದತ್ತ ಗಮನ ಕೊಡಿ ಎಂದು ಹೇಳಿದರಾದರೂ ಹೆರೂರ್ ಈ ಮಾತುಗಳಿಗೆ ಸೊಪ್ಪು ಹಾಕಲಿಲ್ಲ. ಹೋರಾಟಗಾರನ ಅಂತ್ಯ ಬೇಗ ಆಗಬಾರದಿತ್ತು ಎಂದು ಅವರನ್ನು ಹತ್ತಿರದಿಂದ ಕಂಡವರು ಕಂಬನಿ ಮಿಡಿಯುತ್ತಾರೆ.
ಶೋಷಣೆಗೆ ತುತ್ತಾದ ಕೋಲಿ ಸಮಾಜ ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಸ್ವಾವಲಂಬಿಯಾಗಬೇಕು, ಹೆಚ್ಚಿನ ಅವಕಾಶ ಪಡೆಯಬೇಕೆಂದು ಹೆರೂರ್ ಸಂಘಟಿಸಿದ ಹೋರಾಟಗಳು, ಹೊತ್ತಿಸಿದ ಅರಿವಿನ ಜ್ಯೋತಿ ಮುಕ್ಕಾಗದಂತೆ ಕಾಯ್ದುಕೊಳ್ಳುವ ಜವಾಬ್ದಾರಿ ಕೋಲಿ ಮತಬಾಂಧವರ ಮುಂದಿನ ಸವಾಲಾಗಿದೆ.
--
- ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement