ನಾಳೆ ಅಂಬೇಡ್ಕರ್ ಕಾರ್ಯಕ್ರಮ
ಗುಲ್ಬರ್ಗ: ದೂರದರ್ಶನ ಕೇಂದ್ರ ಪರಿಶಿಷ್ಟ ಜಾತಿ, ಪಂಗಡ ನೌಕರರ ಸಂಘದ ವತಿಯಿಂದ ಡಿ.6ರಂದು ಬೆಳಗ್ಗೆ 10. 30 ಗಂಟೆಗೆ ದೂರದರ್ಶನ ಕೇಂದ್ರ ಸಭಾಂಗಣದಲ್ಲಿ ಸಂವಿಧಾನದ ಶಿಲ್ಪಿ ಡಾ.ಅಂಬೇಡ್ಕರ್ ಅವರ 57ನೇ ಮಹಾಪರಿನಿರ್ವಾಣ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಜಿ.ಪಂ. ಉಪಾಧ್ಯಕ್ಷ ಅನಿತಾ ಪಿ. ವಳಕೇರಿ, ಉದಯಕುಮಾರ್ ಎಂ. ಬೆವಿನಗಿಡದ, ಭೀಮರಾವ್ ತೇಗಲತಿಪ್ಪಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಕಾರ್ಯನಿರ್ವಾಹಕ ಅಭಿಯಂತರ ಮಾರುತಿ ಗೋಖಲೆ ಉಪನ್ಯಾಸ ನೀಡಲಿದ್ದಾರೆ. ಕೇಂದ್ರದ ಸಹಾಯಕ ನಿರ್ದೇಶಕ ಎಂ.ಬಿ. ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಂಘದ ಕಾರ್ಯದರ್ಶಿ ಹಣಮಂತ ಮಡಪೆ ತಿಳಿಸಿದ್ದಾರೆ.
ಹಾವು ಕಚ್ಚಿ ವ್ಯಕ್ತಿ ಸಾವು
ಗುಲ್ಬರ್ಗ: ತಾಲೂಕಿನ ಸೊಂತ ಗ್ರಾಮದಲ್ಲಿ ಹಾವು ಕಚ್ಚಿದ ಪರಿಣಾಮ ವ್ಯಕ್ತಿಯೊಬ್ಬ ಸಾವಿಗೀಡಾದ ಘಟನೆ ಸೋಮವಾರ ನಡೆದಿದೆ.
ರಾಜು ತಂದೆ ಭೀಮಾಶಂಕರ ಧೂಮಾಳ ಮೃತನು. ರಾಜು ತನ್ನ ಮನೆಯ ಮುಂದಿನ ಗೇಟ್ ಹತ್ತಿರ ರಾತ್ರಿ ಸಮಯದಲ್ಲಿ ಹಾವಿನ ಮೇಲೆ ಕಾಲಿಟ್ಟಾಗ ಕಾಲಿಗೆ ಕಚ್ಚಿದೆ. ತಕ್ಷಣ ಚಿಕಿತ್ಸೆಗಾಗಿ ಹೋಗುತ್ತಿದ್ದಾಗ ಮಾರ್ಗಮದ್ಯ ಆತ ಮೃತಪಟ್ಟಿದ್ದಾನೆ. ಈ ಕುರಿತು ಕಮಲಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ವಿದ್ಯುತ್ ವ್ಯತ್ಯಯ
ಗುಲ್ಬರ್ಗ: ಆರ್ಎಪಿಡಿಆರ್ಪಿ ಯೋಜನೆಯಡಿಯಲ್ಲಿ ಜೆಸ್ಕಾಂ ವ್ಯಾಪ್ತಿಯ ಗುಲ್ಬರ್ಗದ 11 ಕೆವಿ ಐವಾನ್-ಎ-ಶಾಹಿ ಹಾಗೂ ಮಹಾವೀರ ನಗರ ಫೀಡರ್ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಹಾಗೂ ಎಲ್ಟಿ ಎಬಿ ಕೇಬಲ್ ಅಳವಡಿಸುವ ಕಾರ್ಯ ಕೈಗೊಳ್ಳಲಿರುವ ಪ್ರಯುಕ್ತ ಡಿ.5ರಂದು ಬೆ.10ರಿಂದ ಸಂಜೆ 5ರವರೆಗೆ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಈ ಬಡಾವಣೆಯ ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸುವಂತೆ ಕೋರಲಾಗಿದೆ.
11 ಕೆವಿ ಐವಾನ್- ಎ-ಶಾಹಿ ಫೀಡರ್: ಹಳೆ ಅತಿಥಿಗೃಹ, ನೀಚೆಗಲ್ಲಿ, ವಾಣಿಜ್ಯ ಇಲಾಖೆಗಳ ಕಚೇರಿ, ವಿಜಯ ವಿದ್ಯಾಲಯ, ಲಾಹೋಟಿ ಪೆಟ್ರೋಲ್ ಪಂಪ್, ಎಚ್ಕೆಇ ಕಚೇರಿ, ಏಶಿಯನ್ ಪ್ಲಾಜಾ, ಪರಿವಾರ ಹೋಟೆಲ್, ತಿಮ್ಮಾಪುರಿ ಚೌಕ್ ಮತ್ತು ವಿಜಿ ಮಹಿಳಾ ಕಾಲೇಜು.
11 ಕೆವಿ ಮಹಾವೀರ ನಗರ ಫೀಡರ್: ಎಸ್ಸಿ- ಎಸ್ಟಿ ವಸತಿಗೃಹ, ಡಾ. ರವೀಂದ್ರ ಆಸ್ಪತ್ರೆ, ಮೋಹನ ಲಾಡ್ಜ್, ಪಿಡಬ್ಲ್ಯೂಡಿ ಕಚೇರಿ, ನಾಗರ್ಜುನ್ ಹೋಟೆಲ್, ಜಿ.ಕೆ.ಕಾಂಪ್ಲೆಕ್ಸ್, ಕೋಠಾರಿ ಕಣ್ಣಿನ ಆಸ್ಪತ್ರೆ, ತಿಮ್ಮಾಪುರಿ ಕಾಂಪ್ಲೆಕ್ಸ್, ಕ್ರಿಸ್ಟಲ್ ಮತ್ತು ಪ್ಲಾಜಾ.
ಮಹಾ ಪರಿನಿರ್ವಾಣ ದಿನಾಚರಣೆ ನಾಳೆ
ಗುಲ್ಬರ್ಗ: ಡಿ.6 ರಂದು ಬೆಳಗ್ಗೆ 8.30ಕ್ಕೆ ಜಗತ್ ವೃತ್ತದ ಡಾ. ಅಂಬೇಡ್ಕರ್ ಪ್ರತಿಮೆ ಆವರಣದಲ್ಲಿ ಡಾ. ಅಂಬೇಡ್ಕರ್ ಅವರ 57ನೇ ಮಹಾ ಪರಿನಿರ್ವಾಣ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಸರ್ಕಾರಿ, ಅರೆ ಸರ್ಕಾರಿ ಪರಿಶಿಷ್ಟ ಜಾತಿ, ಪಂಗಡ ನೌಕರರ ಸಂಘ ಹಾಗೂ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ರಕ್ತದಾನ ಶಿಬಿರ
ಗುಲ್ಬರ್ಗ: ಎಚ್ಡಿಎಫ್ಸಿ ಬ್ಯಾಂಕ್ನಿಂದ ಡಿ.6 ರಂದು ನಗರದ ಆದಿತ್ಯ ಹೋಟಲ್ ಎದುರಿನ ಬ್ಯಾಂಕ್ನಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಬ್ಯಾಂಕ್ ನೌಕರರು, ಸಾರ್ವಜನಿಕರು ಭಾಗವಹಿಸಬೇಕೆಂದು ಕೋರಲಾಗಿದೆ.
ಜಗನ್ನಾಥರಾವ್
ಜೇವರ್ಗಿ: ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಮಾಡಬಾಳದ ಜಗನ್ನಾಥರಾವ್ ಬಿಂದು ಮಾಧವರಾವ್ ದೇಶಪಾಂಡೆ (55) ಅವರು ಮಂಗಳವಾರ ಬೆಳಗ್ಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ. ಅಂತ್ಯಕ್ರಿಯೆ ಮಂಗಳವಾರ ಸಂಜೆ ಸಿಂದಗಿ ಪಟ್ಟಣದಲ್ಲಿ ನಡೆಯಿತು.
ಸ್ವಾಭಿಮಾನ ಕನ್ನಡ ಸೇನೆ ಘಟಕ ರಚನೆ
ಶಹಾಪುರ: ಕನ್ನಡ ಪರ ಸಂಘಟನೆಗಳಲ್ಲಿ ಒಂದಾದ ಸ್ವಾಭಿಮಾನಿ ಕನ್ನಡ ಸೇನೆಯ ತಾಲೂಕಾ ಘಟಕದ ಅಧ್ಯಕ್ಷರನ್ನಾಗಿ ವೆಂಕಣ್ಣಗೌಡ.ಪಿ ಬಸರಡ್ಡಿ ಯಕ್ಚಿಂತಿ ಮತ್ತು ಉಪಾಧ್ಯಕ್ಷರನ್ನಾಗಿ ಬಸವರಾಜ ಗುಜಲೋರ ಕೊಂಗಂಡಿ ಅವರನ್ನು ನೇಮಕ ಮಾಡಿ ಯಾದಗಿರಿ ಜಿಲ್ಲಾಧ್ಯಕ್ಷ ಭೀಮರಾಯ ಜಂಗಳಿ ಆದೇಶ ನೀಡಿದ್ದಾರೆ.
ಕನ್ನಡ, ನಾಡು, ನುಡಿ, ಜಲದ ರಕ್ಷಣೆಯ ಜೊತೆಗೆ ಸಂಘಟನೆಯ ಕಾರ್ಯವ್ಯಾಪ್ತಿ ಹೆಚ್ಚಿಸುತ್ತ ಸಂಘಟನಾತ್ಮಕವಾಗಿ ಕಾರ್ಯ ನಿರ್ವಹಿಸಬೇಕೆಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯಧ್ಯಕ್ಷರಾದ ಭೀಮಾಶಂಕರ ಆಲ್ದಾಳ, ಉತ್ತರ ವಲಯದ ಅಧ್ಯಕ್ಷರಾದ ಆನಂದ ಗೋಡಿಹಾಳ ಉಪಸ್ಥಿತರಿದ್ದರು.
ಇಂದು ಸಾಹಿತಿ- ಮಾಹಿತಿ ಕನ್ನಡದ ಜಾಗೃತಿ ಮಾಲಿಕೆ-2
ಗುರುಮಠಕಲ್: ಸಗರನಾಡು ಸೇವಾ ಪ್ರತಿಷ್ಠಾನದ ವತಿಯಿಂದ ಸಾಹಿತಿ ಮಾಹಿತಿ ಕನ್ನಡದ ಜಾಗೃತಿ ಸಾಪ್ತಾಹಿಕ ಸರಣಿ ಮಾಲಿಕೆ-2 ಹಾಗೂ ಪಂಜೆ ಮಂಗೇಶರಾಯರ ಕುರಿತು ಉಪನ್ಯಾಸ ಕಾರ್ಯಕ್ರಮವು ಡಿ.5ರಂದು ಬೆಳಿಗ್ಗೆ 10.30ಕ್ಕೆ ಕೊಂಕಲನ ಮುರಾಜರ್ ದೇಸಾಯಿ ವಸತಿ ಶಾಲೆಯಲ್ಲಿ ನಡೆಯಲ್ಲಿದೆ. ಯಾದಗಿರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ದಪ್ಪ ಹೊಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಪಂಜೆ ಮಂಗೇಶರಾಯರ ಕುರಿತು ಯುವ ಸಾಹಿತಿ ಬಸವರಾಜ ಬಾನಾರ ಉಪನ್ಯಾಸ ನೀಡುವರು.
ಸೂಗೂರೇಶ್ವರ ಜಾತ್ರೆ 7ರಂದು
ಸುರಪುರ: ಇಲ್ಲಿಯ ಸುಪ್ರಸಿದ್ಧ ಸೂಗೂರೇಶ್ವರ ಜಾತ್ರಾ ಮಹೋತ್ಸವ ಡಿ.7 ರಂದು ಜರುಗಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಅಂದು ರಾತ್ರಿ 9ಕ್ಕೆ ದೇವಸ್ಥಾನದಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ದಾಂಡೇಲಿಯ ಮಂಜುಳಾ, ಅಫಜಲ್ಪುರದ ಗುರುಬಸಯ್ಯ ಹಿರೇಮಠ, ಶಾರದಾ ಹಿರೇಮಠ, ತಾಳಿಕೋಟಿಯ ಎ.ಎಸ್. ವಠಾರ, ಅಮರಯ್ಯ ಸ್ವಾಮಿ ರಾಜನಕೋಳೂರು, ಹಾಗೂ ಆಕಾಶವಾಣಿ ಕಲಾವಿದರಾದ ಬಸವರಾಜ ಬಂಟನೂರು ಕೆಂಭಾವಿಯ ಮಲ್ಲಕಾರ್ಜುನ ಭಜಂತ್ರಿ, ಲಿಂಗಸೂರಿನ ದೇವಿಂದ್ರಕುಮಾರ ಕಕ್ಕಳಮೇಲಿ ಶರಣುಕುಮಾರ ಜಾಲಹಳ್ಳಿ, ಮಳ್ಳಿಯ ವಿಜಯಲೋಕರೆ, ಯಾಳಗಿ ಯಮನೇಶ, ಈಶ್ವರ ಬಡಿಗೇರ, ಮೋಹನರಾವು ಮಾಳದಕರ್, ವಿರುಪಾಕ್ಷಿ ಹೂಗಾರ, ಕಾವ್ಯ ಗೆಜ್ಜಿ ಮತ್ತು ಶಿವಶರಣಯ್ಯ ಬಳ್ಳುಂಡಗಿ ಮಠ ಸೇರಿದಂತೆ ಸಗರನಾಡಿನ ಹೆಸರಾಂತ ಸಂಗೀತಗಾರು ಭಾಗವಹಿಸಲಿದ್ದಾರೆ. ಡಿ.8 ರಂದು ಬೆಳಗ್ಗೆ 6ಕ್ಕೆ ಸೂಗೂರೇಶ್ವರ ದೇವಸ್ಥಾನದಲ್ಲಿ ಕಳಸಾರೋಹಣ ಜರುಗಲಿದೆ. ಕೊಟ್ರಯ್ಯಸ್ವಾಮಿ ಬಳ್ಳೂಂಡಿಗಿ ಮಠ ನೇತೃತ್ವ ವಹಿಸುವರು.
ಶೋಭಾರಾಣಿ ಅಧಿಕಾರ ಸ್ವೀಕಾರ
ಗುರುಮಠಕಲ್: ತಾಲೂಕು ಪಂಚಾಯ್ತಿ ನೂತನ ಅಧ್ಯಕ್ಷೆ ಶೋಭಾರಾಣಿ ದೇವಿಂದ್ರಪ್ಪ ಗುತ್ತೇದಾರ ಕೋಟಗೇರಾ ಅವರು ಬುಧವಾರ ತಮ್ಮ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿ, ತಾಲೂಕು ಅಭಿವೃದ್ಧಿ ಹಾಗೂ ಮೂಲಸೌಕಾರ್ಯಕ್ಕಾಗಿ ಶ್ರಮಿಸಲಾಗುವುದು ಎಂದು ಹೇಳಿದರು. ತಾಪಂ ಮಾಜಿ ಅಧ್ಯಕ್ಷೆ ಲಕ್ಷ್ಮೀ ಬೀಮರಾವ ಚಂಡರಕಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಸಾವಿತ್ರಿ, ಹಂಪಣಗೌಡ, ಶರಣಪ್ಪ ಮೋಟನಳ್ಳಿ, ಸದಾಶಿವರಡ್ಡಿ, ಸುಭಾಶ ಗುತ್ತೆದಾರ ಇದ್ದರು.
ಲಕ್ಷ್ಮೀಪುರದಲ್ಲಿ ಕನಕದಾಸರ ವೃತ್ತ ಉದ್ಘಾಟನೆ
ಸುರಪುರ: ಅಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ತಾಂಡವವಾಡುತ್ತಿದ್ದ ತಾರತಮ್ಯದ ವಿರುದ್ಧ ಕೀರ್ತನೆಗಳ ಮೂಲಕವೇ ಹೋರಾಟ ನಡೆಸಿದ ಕ್ರಾಂತಿ ಪುರುಷ ಎಂದು ತಿಂಥಣಿ ಕನಕ ಗುರು ಪೀಠದ ಪೀಠಾಧಿಪತಿ ಸಿದ್ದರಾಮನಂದ ಪುರಿ ಸ್ವಾಮೀಜಿ ಹೇಳಿದರು.
ಸಮೀಪದ ಲಕ್ಷ್ಮೀಪುರ ಗ್ರಾಮದಲ್ಲಿ ಕನಕದಾಸರ ವೃತ್ತ ಉದ್ಘಾಟಿಸಿ ನಂತರ ಜರುಗಿದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀ, ದಾಸರಲ್ಲಿ ಶ್ರೇಷ್ಠ ಸಂತರಾದ ಕನಕದಾಸರು 500 ವರ್ಷಗಳ ಹಿಂದೆಯೇ ಜಾತಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿ ಹೋರಾಟ ಮಾಡಿದವರು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಲ್ಲಯ್ಯ ಕಮತಗಿ ಮತ್ತು ತಾಪಂ ಮಾಜಿ ಅಧ್ಯಕ್ಷ ನಿಂಗಣ್ಣ ಬಾದ್ಯಾಪುರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಮಾರ್ಥಂಡಪ್ಪ ಮುತ್ತ್ಯಾ, ಕನಕ ಯುವ ಸೇನೆ ಅಧ್ಯಕ್ಷ ರಂಗನಗೌಡ ದೇವಿಕೇರಿ, ಪ್ರಮುಖರಾದ ಪರಮಣ್ಣ ಬಿಜಾಸ್ಪೂರು, ಪರಮಣ್ಣ ಹಾಲಬಾವಿ, ನಿಂಗರಾಜ ಬಾಚಿಮಟ್ಟಿ, ರವಿಚಂದ್ರ ಸಾಹು, ನಿಂಗಣ್ಣ ಜಾಲಹಳ್ಳಿ, ಯಮನಪ್ಪ ಮಾಸ್ಟರ್ ಬಪ್ಪರಗಿ, ರಾಘವೇಂದ್ರ ಮಾಚಗುಂಡಾಳ, ಹಣಮಂತ್ರಾಯ, ಹಣಮಂತ ಸುರಪುರ, ಭೀಮಣ್ಣಗೌಡ, ಸೂಲಪ್ಪ ಬಗಡಿ ಸೇರಿದಂತೆ ಹಲವರಿದ್ದರು.