ಮಾಜಿ ಶಾಸಕ ವಿಠಲ್ ಹೇರೂರ ಅಂತ್ಯಕ್ರಿಯೆ
ಅಫಜಲ್ಪುರ: ಕೋಲಿ ಸಮಾಜದ ನಾಯಕ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ವಿಠಲ್ ಹೇರೂರ ಅವರ ಅಂತ್ಯ ಸಂಸ್ಕಾರ ದೇವಲಗಾಣಗಾಪುರದ ಕಂಠೆಪ್ಪ ಹೇರೂರ ಶಾಲಾ ಆವರಣದಲ್ಲಿ ಬುಧವಾರ ಮಧ್ಯಾಹ್ನ ನೆರವೇರಿತು.
ದೇವಲಗಾಣಗಾಪುರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯೊಂದಿಗೆ ಹೇರೂರ ಅವರ ಪಾರ್ಥಿವ ಶರೀರವನ್ನು ಶಾಲಾ ಆವರಣಕ್ಕೆ ತಂದಾಗ ಸಾವಿರಾರು ಜನ ಕಣ್ಣೀರಿಟ್ಟರು. ಈ ಸಂದರ್ಭದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಶಾಸಕ ಮಾಲೀಕಯ್ಯ ಗುತ್ತೇದಾರ ಮಾತನಾಡಿ, ಯಾವುದೇ ರಾಜಕೀಯ ಪಕ್ಷಕ್ಕೆ ಸಿಮಿತವಾಗಿರದೆ ತಮ್ಮ ಸಮಾಜದ ಒಳಿತಿಗಾಗಿ ಯಾರು ಬರುತ್ತಾರೋ ಅಂತವರ ಜತೆ ಗುರುತಿಸಿಕೊಂಡು ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದರು ಎಂದು ಅಭಿಪ್ರಾಯಪಟ್ಟರು.
ಕಾಡಾ ಮಾಜಿ ಅಧ್ಯಕ್ಷ ಗಿರೀಶ ಮಟ್ಟಣ್ಣವರ್, ಮಾಜಿ ಸಚಿವರಾದ ವೈಜನಾಥ ಪಾಟೀಲ್, ರೇವೂನಾಯಕ ಬೆಳಮಗಿ, ಮಾಜಿ ಶಾಸಕ ಎಂ.ವೈ. ಪಾಟೀಲ್, ಶಾಸಕ ಡಾ.ಅಜಯಸಿಂಗ್ ಸೇರಿದಂತೆ ಹಲವಾರು ಮುಖಂಡರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.