ಅಕ್ರಮ ಹತ್ತಿ ಕೇಂದ್ರಗಳಿಗೆ ಎಪಿಎಂಸಿ ಪ್ರೋತ್ಸಾಹ
ಕ.ಪ್ರ. ವಾರ್ತೆ, ಶಹಾಪುರ, ಡಿ.5
ರೈತರ ಹಿತ ಕಾಪಾಡುವಲ್ಲಿ ಪಟ್ಟಣದ ಎಪಿಎಂಸಿ ಈಗಾಗಲೇ ಸಂಪೂರ್ಣ ವಿಫಲವಾಗಿದೆ. ಪಟ್ಟಣದ ಸುತ್ತ ಮುತ್ತ ಹಾಗೂ ತಾಲೂಕಿನಲ್ಲಿ ಅಕ್ರಮವಾಗಿ ಹತ್ತಿ ಕೇಂದ್ರಗಳನ್ನು ತೆರೆಯಲು ದಲ್ಲಾಳಿಗಳಿಗೆ ಪ್ರೋತ್ಸಾಹ ನೀಡಿದೆ ಎಂದು ಸಿಪಿಐ (ಎಂ) ನ ಮುಖಂಡರಾದ ಎಸ್.ಎಂ. ಸಾಗರ ಆರೋಪಿಸಿದ್ದಾರೆ.
ಪಟ್ಟಣದ ಸುತ್ತಮುತ್ತ ನಾಯಿ ಕೊಡೆಗಳ ಹಾಗೆ ತಲೆಎತ್ತಿದ ಹತ್ತಿ ತುಂಬುವ ಕೇಂದ್ರಗಳ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳದ ಎಪಿಎಂಸಿ, ರೈತರನ್ನು ದಿವಾಳಿ ಅಂಚಿಗೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಹುಲಕಲ್, ವಿಭೂತಿಹಳ್ಳಿ, ಗೋಗಿ, ಹೋತಪೇಟ, ಸಗರ, ಹತ್ತಿಗೂಡೂರ, ಶಖಾಪೂರ, ದಿಗ್ಗಿ, ನಾಗನಟಗಿ, ಸೈದಾಪುರ, ಚಾಮನಾಳ, ಮದ್ರಕಿ, ಮುಡಬೂಳ, ಸಾದ್ಯಾಪೂರ ಮುಂತಾದ ಗ್ರಾಮಗಳಲ್ಲಿ ಅಕ್ರಮ ಹತ್ತಿ ತುಂಬುವ ಕೇಂದ್ರಗಳು ರೈತರನ್ನು ಶೋಷಣೆ ಮಾಡುತ್ತಿವೆ.
ಎಪಿಎಂಸಿ ಮಾರುಕಟ್ಟೆಯಲ್ಲಿ ಅಧಿಕೃತ ಪರವಾನಗಿ ಹೊಂದಿದ ವ್ಯಾಪಾರಸ್ಥರು ಮಾರುಕಟ್ಟೆಯ ಬೆಲೆಯಲ್ಲಿ ರೈತರ ಹತ್ತಿಯನ್ನು ಖರೀದಿಸಬೇಕು. ಅಕ್ರಮವಾಗಿ ಹತ್ತಿ ತುಂಬುವ ಕೇಂದ್ರಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಸಿಪಿಎಂ ಸಂಘಟನೆಯ ದಾವಲಸಾಬ್ ನದಾಫ್, ಮಲ್ಲಯ್ಯ ಪೋಲಂಪಲ್ಲಿ, ಸಿದ್ಧಯ್ಯಸ್ವಾಮಿ ಹಿರೇಮಠ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.