ಅತ್ಯಾಚಾರ; ಕಾರಾಗೃಹ ಶಿಕ್ಷೆ
ಗುಲ್ಬರ್ಗ: ಜಾತಿ ನಿಂದನೆ ಮಾಡಿ ಮಹಿಳೆ ಮೇಲೆ ಅತ್ಯಾಚಾರವೆಸಗಿಸದ ಆರೋಪಿಗೆ ಜಿಲ್ಲಾ 2ನೇ ಅಪರ ಸತ್ರ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ನಾಲವಾರ ವಲಯದ ಸೂಗೂರ(ಎನ್) ಗ್ರಾಮದ ನಿವಾಸಿ ಮಹ್ಮದ್ ಹನೀಫ್ ದೌಲಸಾಬ್ ಎಂಬಾತ ಅದೇ ಗ್ರಾಮದ ಪದ್ಮಾವತಿ ಬಾವಿ ಎಂಬ ದಲಿತ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ ಮಹಿಳೆಯ ಮಾನಭಂಗ ಹಾಗೂ ಜಾತಿ ನಿಂದನೆ ಮಾಡಿದ್ದ ಕಾರಣಕ್ಕೆ ಆರೋಪಿ ಹನೀಫ್‌ನನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು.
ಜಿಲ್ಲಾ 2ನೇ ಅಪರ ಸತ್ರ ನ್ಯಾಯಾಲಯದ ನ್ಯಾಯಾಧೀಶ ವಿ.ಎಸ್. ಉಪನಾಳರವರು 3 ವರ್ಷಗಳ ಸುದೀರ್ಘ ವಿಚಾರಣೆ ಕೈಗೊಂಡು ನ.25ರಂದು ಆರೋಪಿಗೆ 500 ದಂಡ, 40 ದಿನಗಳ ಜೈಲು ಶಿಕ್ಷೆ ವಿಧಿಸಿದ್ದಾರೆ.
ಬಾಕಿ ಉಳಿದ ನಾಲ್ಕು ಪ್ರಕರಣ: ಈ ಹಿಂದೆ ಪಟ್ಟಣದ ಪುರಸಭೆ ಯೋಜನಾಧಿಕಾರಿಯಾಗಿದ್ದ ನಾಗರತ್ನಾ ದೇಶಮಾನೆಯವರು ಕರವೇ ಅಧ್ಯಕ್ಷ ಸಿದ್ದು ಪಂಚಾಳ ಮೇಲೆ ಮಾಡಿದ್ದ ಜಾತಿ ನಿಂದನೆ ದೂರು, ಸೇರಿದಂತೆ ಪಟ್ಟಣದ ಜೆಸ್ಕಾಂ ಕಚೇರಿ ಸಿಬ್ಬಂದಿಯ ಒಂದು ಪ್ರಕರಣ ಮತ್ತು ಸನ್ನತಿ ಗ್ರಾಪಂ ವ್ಯಾಪ್ತಿಯ ಕನಗನಹಳ್ಳಿ, ಬೆಳಗೇರಾ ಗ್ರಾಮದ ಒಟ್ಟು ನಾಲ್ಕು ಜಾತಿ ನಿಂದನೆ ಪ್ರಕರಣಗಳು ನ್ಯಾಯಾಲಯದಲ್ಲಿವೆ. ಶೀಘ್ರವೇ ತೀರ್ಪು ಹೊರಬಿದ್ದು ಆರೋಪಿಗಳಿಗೆ ಶಿಕ್ಷೆ ಪ್ರಕಟವಾಗಲಿದೆ ಎಂದು ವಾಡಿ ಠಾಣೆ ಪಿಎಸ್‌ಐ ನಟರಾಜ ಲಾಡೆ ತಿಳಿಸಿದ್ದಾರೆ.