ಆಳಂದ ತಾಲೂಕು ಅಭಿವೃದ್ಧಿಗೆ ಮೊದಲಾದ್ಯತೆ: ಶಾಸಕ ಪಾಟೀಲ್
ಆಳಂದ: ತಾಲೂಕಿನ ಸಾವಳೇಶ್ವರ ಗ್ರಾಮದ ದಲಿತ ಬಡಾವಣೆಯಲ್ಲಿ ಕುಡಿಯುವ ನೀರು, ಶೌಚಾಲಯ, ಸಿಮೆಂಟ್ ರಸ್ತೆ, ಅಲ್ಲದೇ ಗ್ರಾಮದಲ್ಲಿಯೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಂಜೂರಾದ 30 ಲಕ್ಷ ಅನುದಾನಕ್ಕೆ ಶಾಸಕ ಬಿ.ಆರ್. ಪಾಟೀಲ್ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಚುನಾವಣೆ ಪೂರ್ವ ಭರವಸೆಯಂತೆ ತಾಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ತರುವ ಮೂಲಕ ಅಭಿವೃದ್ಧಿಯಲ್ಲಿ ತಾಲೂಕು ಮೊದಲ ಸ್ಥಾನಕ್ಕೆ ತರುವುದು ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡುತ್ತಿರುವುದಾಗಿ ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ್ ಪಾಟೀಲ್, ಕರವೇ ತಾಲೂಕು ಅಧ್ಯಕ್ಷ ರೇವಣಸಿದ್ದಪ್ಪ ನಾಗೂರೆ, ಮುಖಂಡ ಚಂದ್ರಕಾಂತ ಘೋಡಕೆ, ಶಶಿಕಾಂತ ಶೀಲವಂತ ಮಾತನಾಡಿದರು.
ಗ್ರಾಪಂ ಅಧ್ಯಕ್ಷೆ ಸುನೀತಾ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪುರಸಭೆ ಸದಸ್ಯ ಮಲ್ಲಿನಾಥ ಹತ್ತರಕಿ, ಮುಖಂಡ ಬಸವರಾಜ ಪಡಶೆಟ್ಟಿ, ಮಲಕಪ್ಪ ಕುದುರೆ, ಮಲ್ಲಿನಾಥ ಪರೇಣಿ, ಸಿದ್ದು ಜಮಾದಾರ, ಶಿವಶರಣಪ್ಪ ಪಾವಲೆ, ಮಲ್ಲಿನಾಥ ಘೋಡಕೆ ಇತರರಿದ್ದರು.
--
ಛಟ್ಟಿ ಉತ್ಸವ: ವಿಶೇಷ ಬಸ್
ಜೇವರ್ಗಿ: ತಾಲೂಕಿನ ಶ್ರೀಕ್ಷೇತ್ರ ರಾಸಣಗಿಯಲ್ಲಿ ಡಿ.7 ಮತ್ತು 8ರಂದು ನಡೆಯಲಿರುವ ಬಲಭೀಮಸೇನ್ ದೇವರ ಛಟ್ಟಿ ಉತ್ಸವದ ಅಂಗವಾಗಿ ಜೇವರ್ಗಿಯಿಂದ- ರಾಸಣಗಿಗೆ ತೆರಳಲು ಭಕ್ತಾಧಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ರಾಸಣಗಿಯಲ್ಲಿ ಡಿ.7 ಮತ್ತು 8ರಂದು ನಡೆಯಲಿರುವ ಛಟ್ಟಿ ಉತ್ಸವಕ್ಕೆ ಗುಲ್ಬರ್ಗ, ರಾಯಚೂರು ಹಾಗೂ ವಿಜಾಪುರ ಜಿಲ್ಲೆಗಳಿಂದ ಸಹಸ್ರಾರು ಭಕ್ತಾದಿಗಳು ಆಗಮಿಸುತ್ತಾರೆ.
ಭಕ್ತರ ಅನುಕೂಲಕ್ಕಾಗಿ ವಿಶೇಷ ಬಸ್ ಸೌಲಭ್ಯ ಒದಗಿಸುವಂತೆ ರಾಸಣಗಿ ಬಲಭೀಮಸೇನ್ ದೇವಸ್ಥಾನ ಟ್ರಸ್ಟ್ ಕಾರ್ಯಾಧ್ಯಕ್ಷ ರಾಮಚಾರ ಹರವಾಳಕರ್ ಅವರು ಸಾರಿಗೆ ಸಂಸ್ಥೆಗೆ ಮನವಿ ಮಾಡಿದ್ದಾರೆ.