ಇಲಾಖೆ ಮಾಹಿತಿ ಜೊತೆಗೇ ಸಭೆಗೆ ಬನ್ನಿ...
ಕನ್ನಡಪ್ರಭ ವಾರ್ತೆ, ಆಳಂದ, ಡಿ.5
ಸಭೆಗೆ ಬರುವ ಮುನ್ನ ಆಯಾ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆ ಕಾರ್ಯಗಳ ಬಗ್ಗೆ ಮಾಹಿತಿ ತಯಾರಿಸಿ, ಎಲ್ಲರಿಗೂ ನೀಡಬೇಕು ಎಂದು ಇಒ ಲಕ್ಷ್ಮಣ ಶೃಂಗೇರಿ ಹೇಳಿದರು.
ಇಲ್ಲಿನ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆಗಳ ಮೂಲಕ ಯೋಜನೆ ಅನುಷ್ಠಾನ ಕುರಿತು ಅಧಿಕಾರಿಗಳು ಸಂಪೂರ್ಣ ಮಾಹಿತಿ ಒದಗಿಸುತ್ತಿಲ್ಲ ಎಂದು ನರೋಣಾ ತಾಪಂ ಸದಸ್ಯ ಮಲ್ಲಿಕಾರ್ಜುನ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಒ ಅವರು ಅಧಿಕಾರಿಗಳಿಗೆ ಸಭೆಗೆ ಮಾಹಿತಿಯೊಂದಿಗೆ ಸಿದ್ಧರಾಗಿ ಬರಲು ತಾಕೀತು ಮಾಡಿದರು.
ಜಲಾನಯನ ಅಧಿಕಾರಿ ಮಠಪತಿ ವರದಿ ಮಂಡಿಸುವಾಗ ಮಧ್ಯೆ ಪ್ರವೇಶಿಸಿದ ಸದಸ್ಯ ಶರಣಗೌಡ ಪಾಟೀಲ್, ಇಲಾಖೆಯಿಂದ ಶೇ.30ರಷ್ಟು ಕಾಮಗಾರಿ ನಡೆದಿಲ್ಲ. ಶೀಘ್ರವಾಗಿ ಪೂರ್ಣಗೊಳಿಸಲು ಸಭೆ ಗಮನಕ್ಕೆ ತಂದರು.
ಸಿಡಿಪಿಒ ಅಶೋಕ ರಾಜನ ವರದಿ ಓದುವಾಗ, ಸದಸ್ಯ ಮಲ್ಲಿನಾಥ ಜಮಾದಾರ, ಮಂದಾಕಿನಿ ಪಾಟೀಲ್ ಇನ್ನಿತರ ಸದಸ್ಯರು, ಅಂಗನವಾಡಿ ಸಿಬ್ಬಂದಿ ಭಾಗ್ಯಲಕ್ಷ್ಮೀ ಬಾಂಡ್ ವಿತರಣೆಗೆ ಹಣ ಪಡೆಯುತ್ತಿದ್ದಾರೆ. ಕ್ರಮ ಕೈಗೊಂಡಿಲ್ಲ. ಇನ್ನೂ ಮುಂದೆ ಜಿಲ್ಲಾ ಕಚೇರಿಯಿಂದ ಬರುವ ಬಾಂಡ್ಗಳನ್ನು ತಾಲೂಕು ಕಚೇರಿಯಿಂದ ನೇರವಾಗಿ ಅಂಚೆ ಮೂಲಕ ಫಲಾನುಭವಿಗಳಿಗೆ ತಲುಪಿಸಬೇಕು ಎಂದು ಒತ್ತಾಯಿಸಿದರು.
ಕಳೆದೆರಡು ಸಭೆಯಲ್ಲಿ ಇಲಾಖೆ ಪೂರ್ಣ ವಿವರಣೆ ಕೇಳಿದಾಗಲೂ ಸಿಡಿಪಿಒ ಅವರು ಕೊಟ್ಟಿಲ್ಲ ಎಂದು ಶರಣಗೌಡರು ಸಿಡಿಪಿಒ ವರದಿಗೆ ಆಕ್ಷೇಪಿಸಿದರು.
ತೋಟಗಾರಿಕೆ ಅಧಿಕಾರಿ ರಾಹುಲ್ ಭಾವಿದೊಡ್ಡಿ ವರದಿ ನೀಡಿ, 10 ಎಕರೆ ನರ್ಸರಿ ಕೈಗೊಳ್ಳುವರಿಗೆ 12 ಲಕ್ಷ, ಎರಡೂವರಿ ಎಕರೆ ನರ್ಸರಿ ಮಾಡುವ ರೈತರಿಗೆ 3 ಲಕ್ಷ ಮತ್ತು ಮಾವು, ದಾಳಿಂಬೆ, ದ್ರಾಕ್ಷಿ ಇನ್ನಿತರ ಹಣ್ಣು, ಹೂ ಬೆಳೆಯಾದ ಚೆಂಡು, ಸುಗಂಧರಾಜ, ಗುಲಾಬಿ ಇನ್ನಿತರ ಹೂವಿನ ಬೆಳೆಗೆ ಇಲಾಖೆಯ ಸಬ್ಸಿಡಿ ನೀಡಲಿದೆ ಎಂದರು.
ಭೂಸೇನಾ ಸಹಾಯಕ ನಿರ್ದೇಶಕ ಬಿ.ವಿ.ಕಲಗುರ್ಕಿ ಅವರು, ಉಸುಬಿನ ಅಭಾವದಿಂದ ಕಳೆದ 6 ತಿಂಗಳಿಂದ ಎಲ್ಲ ಕಾಮಗಾರಿಗಳು ಸ್ಥಗಿತಗೊಂಡಿವೆ. ಎಸ್ಡಿಪಿ ಅಡಿಯಲ್ಲಿ 5 ಅಂಗನವಾಡಿ ಕಟ್ಟಡ ಸ್ಥಳದ ಕೊರತೆಯಿಂದ ಕಾಮಗಾರಿ ನಿಂತಿದ್ದು, ಸ್ಥಳ ಒದಗಿಸಿದರೆ ಕಾಮಗಾರಿ ಆರಂಭಿಸುವುದಾಗಿ ಹೇಳಿದರು.
ಪಶು ಸಂಗೋಪನ ಸಹಾಯಕ ನಿರ್ದೇಶಕ ಡಾ.ಶರಣಪ್ಪ ವರದಿ ಸಲ್ಲಿಸಿ, ರಾಜ್ಯ ಯೋಜನೆಯಡಿ ತಾಲೂಕಿನಲ್ಲಿ 21 ಮೇವು ಕತ್ತರಿಸುವ ವಿದ್ಯುತ್ ಚಾಲಿತ ಯಂತ್ರ ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದೆ. ಅಸಕ್ತರು ಡಿ. 20 ರೊಳಗೆ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶರಣಪ್ಪ ಕೋಬಾಳ ವರದಿ ಮಂಡಿಸುವಾಗ ಮಧ್ಯ ಪ್ರವೇಶಿಸಿದ ಸದಸ್ಯೆ ಮಂದಾಕಿನಿ ಪಾಟೀಲ್ ಅವರು, ಲಿಂಗನವಾಡಿ ಶಾಲೆಯಲ್ಲಿ ಕಳೆದ ಆಗಷ್ಟ್ನಿಂದ ಬಿಸಿಯೂಟ ನೀಡಿಲ್ಲ. ಒಬ್ಬರ ಮೇಲೆ ಇನ್ನೊಬ್ಬರು ಹಾಕಿ ಮಕ್ಕಳ ಸೌಲಭ್ಯ ಕಸಿದುಕೊಳ್ಳಲಾಗಿದೆ ಎಂದರು. ಆಗ ಸಮಿತಿ ರಚಿಸಿ ಸರಿಪಡಿಸಲಾಗುವುದು ಎಂದು ಇಒ ಭರವಸೆ ನೀಡಿದರು.
ಸಂಬಂಧಿತ ಅಕ್ಷರ ದಾಸೋಹ ಅಧಿಕಾರಿ ಸಿದ್ದರಾಮ ಚನ್ನಗುಂಡ ಅವರು, ಶಾಲೆಗೆ ಆಹಾರಧಾನ್ಯ ಕಳುಹಿಸಿಕೊಡಲಾಗಿದೆ ಎಂದರು. ಆದರೆ, ವಾಸ್ತವದಲ್ಲಿ ಬಿಸಿಯೂಟವೇ ಇಲ್ಲ ಎಂದು ಸದಸ್ಯೆ ಮಂದಾಕಿನಿ ಆಕ್ಷೇಪಿಸಿದರೆ, ಸದಸ್ಯ ಶಿವುಪುತ್ರಪ್ಪ ಕೊಟ್ಟರಗಿ ಧ್ವನಿಗೂಡಿಸಿದರು. ಶರಣಗೌಡ ಅವರು, ಮೋಘಾ ಬಿ. ಅಲ್ಲಾಪುರ, ಇಕ್ಕಳಕಿ ಶಾಲೆಗಳಿಗೆ ಹಣ ಬಿಡುಗಡೆಯಾಗಿಲ್ಲ. ಬಿಸಿಯೂಟದಲ್ಲಿ ಆಹಾರ ಕಡಿತಮಾಡಲಾಗಿದೆ ಎಂದರು.
ಸಭೆಯಲ್ಲಿ ಜಿಪಂ ಎಇಇ ಅಬ್ದುಲ್ ಸಲಾಂ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಶಾಂಕ ಶಹಾ ಇತರರು ವರದಿ ಮಂಡಿಸಿದರು.
ಉಪಾಧ್ಯಕ್ಷ ಲಕ್ಷ್ಮಣ ಬೀಳಗಿ, ಸದಸ್ಯ ಮಲ್ಲಣ್ಣ ನಾಗೂರೆ, ಬಾಯಮ್ಮ ಪಾಟೀಲ್, ಸುಮಿತ್ರಾ ವಾಡೆ, ಆಕಾಶ ಪಾಟೀಲ್, ಶಿವುಪುತ್ರಪ್ಪ ಕೊಟ್ಟರಗಿ, ಮಲ್ಲಿಕಾರ್ಜುನ ಮೊದಲಿ, ಕುಶಪ್ಪಗೌಡ ಪಾಟೀಲ್, ಲಕ್ಷ್ಮೀಪುತ್ರ ಯಂಕಂಚಿ, ಅಧಿಕಾರಿ ರಮೇಶ ಬಾಬು, ತಾಪಂ ಯೋಜನಾಧಿಕಾರಿ ಗುರುನಾಥ ಗೌಡಪ್ಪನವರು, ವ್ಯವಸ್ಥಾಪಕ ಬಸವರಾಜ ಪಾಟೀಲ್, ಎಂಜಿನಿಯರ್ ಕೆ.ಟಿ.ಮಾದಶೆಟ್ಟಿ ಹಾಜರಿದ್ದರು.
ಸಾಮಾನ್ಯ ಸಭೆಯಲ್ಲಿ ಸದಸ್ಯರ ನಡುವೆ ಮಾತಿನ ಗೊಂದಲ ಉಂಟಾಗಿ, ಒಬ್ಬರ ಮಾತು ಇನ್ನೊಬ್ಬರಿಗೆ ಕೇಳಿಸದ ಸ್ಥಿತಿ, ಹಲವರ ಮೊಬೈಲ್ ರಿಂಗಣ, ಸದಸ್ಯರ ಮತ್ತು ಅಧಿಕಾರಿಗಳ ಹೊರ, ಒಳಗೆ ಎಡತಾಕಿ ನಡುವೆ ಸಭೆಯುದ್ದಕ್ಕೂ ಕಾಲಹರಣ ಮಾಡಿದ್ದು ವಿಶೇಷವಾಗಿತ್ತು. ಸಭೆಯಲ್ಲಿ ಪ್ರಮುಖ, ಗಂಭೀರ ವಿಷಯಗಳ ಬಗ್ಗೆ ಚರ್ಚೆಗೆ ಮಹತ್ವ ನೀಡಲೇ ಇಲ್ಲ.