ಗೈಡ್ ಬದಲಾವಣೆಗೆ ಅಸ್ತು; ಕಿರುಕುಳ ಪ್ರಕರಣ ಸುಖಾಂತ್ಯ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಡಿ.5
ಇಲ್ಲಿನ ಜ್ಞಾನಗಂಗೆ ಅರ್ಥಶಾಸ್ತ್ರ ವಿಭಾಗದಲ್ಲಿನ ಪಿಎಚ್ಡಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಕುಲಪತಿಗಳು ಮಧ್ಯಪ್ರವೇಶ ಮಾಡಿ ಎರಡೂ ಪಕ್ಷಗಳ ಹೇಳಿಕೆಗಳನ್ನಾಲಿಸಿ ದೂರು ನೀಡಿರುವ ವಿದ್ಯಾರ್ಥಿನಿ ಬೇಡಿಕೆಯಂತೆ ಗೈಡ್ ಬದಲಾವಣೆ ಮಾಡಿ ಕ್ರಮ ಜರುಗಿಸಿದ್ದಾರೆ.
ಮೂಲಗಳ ಪ್ರಕಾರ ತಮ್ಮ ಬ್ಯಾಂಕಾಕ್ ಪ್ರವಾಸದಿಂದ ಬುಧವಾರ ಗುಲ್ಬರ್ಗಕ್ಕೆ ಮರಳಿರುವ ಕುಲಪತಿ ಡಾ. ಈಟಿ ಪುಟ್ಟಯ್ಯ ಪ್ರಕರಣ ಮುಂದುವರಿಯುವುದು ಬೇಡ, ಇದರಿಂದ ವಿವಿ ಘನತೆಗೆ ಕುಂದು ಬರುತ್ತದೆಂದು ಹೇಳುವ ಮೂಲಕ ದೂರು ನೀಡಿರುವ ಪಿಎಚ್ಡಿ ವಿದ್ಯಾರ್ಥಿನಿ ಹಾಗೂ ಆಕೆಯ ಮಾರ್ಗದರ್ಶಕ ಪ್ರೊಫೆಸರ್ ಇಬ್ಬರನ್ನು ಕರೆದು ಚರ್ಚಿಸಿದ್ದಾರೆ. ವಿದ್ಯಾರ್ಥಿನಿಯ ಬೇಡಿಕೆಯಂತೆ ಮಾರ್ಗದರ್ಶಕರ ಬದಲಾವಣೆ ಮಾಡಿ ಗುರುವಾರ ಆದೇಶ ಹೊರಡಿಸಿದ್ದಾರೆಂದು ತಿಳಿದು ಬಂದಿದೆ.
ವಿಚಾರಣೆ ಪೊಲೀಸರು ಶುರು ಮಾಡುವ ಮುನ್ನವೇ: ತನ್ನ ಮಾರ್ಗದರ್ಶಕ ಮಾನಸಿಕವಾಗಿ ಕಿರುಕುಳ ನೀಡಿದ್ದರು ಎಂದು ಪಿಎಚ್ಡಿ ವಿದ್ಯಾರ್ಥಿನಿ ನೇರವಾಗಿ ಪೊಲೀಸ್ ಮೊರೆ ಹೋಗಿದ್ದರಿಂದ ಸದರಿ ಘಟನೆ ಹೊಸ ತಿರುವು ಪಡೆದಿತ್ತು. ಪ್ರಕರಣದ ವಿಚಾರಣೆ ಪೊಲೀಸರು ಶುರು ಮಾಡುವ ಮುನ್ನವೇ ವಿದ್ಯಾರ್ಥಿನಿಯ ಬೇಡಿಕೆಯಂತೆ ಗೈಡ್ ಬದಲಾವಣೆ ನಡೆದಿದ್ದರಿಂದ ಪ್ರಕರಣ ಮುಕ್ತಾಯ ಕಂಡಂತಾಗಿದೆ.
ತೀವ್ರತೆ ಪರಾಮರ್ಶಿಸಿ ತೀರ್ಮಾನ: ಮೂಲಗಳ ಪ್ರಕಾರ ಪಿಎಚ್ಡಿ ಮಾರ್ಗದರ್ಶಕರ ಬದಲಾವಣೆ ಮಾಡಲು ಅವಾಕಶವಿಲ್ಲ, ಒಂದುವೇಳೆ ಗೈಡ್ ಮರಣ ಹೊಂದಿದರೆ ಅಥವಾ ಗೈಡ್ಗೂ, ಸಂಶೋಧನಾ ವಿದ್ಯಾರ್ಥಿಗೂ ಮಧ್ಯೆ ಸಂಘರ್ಷ ಶುರುವಾಗಿ ಅದು ಬಗೆಹರಿಸಲಾರದಂತಹ ವಿಕೋಪಕ್ಕೆ ಹೋದಂತಹ ಸಂದರ್ಭದಲ್ಲಿ ಮಾತ್ರ ಪ್ರಕರಣದ ತೀವ್ರತೆ ಪರಾಮರ್ಶಿಸಿ ಕುಲಪತಿಗಳು ಮಾತ್ರ ಗೈಡ್ ಬದಲಾವಣೆಗೆ ಒಪ್ಪಬೇಕು.
ಅರ್ಥಶಾಸ್ತ್ರ ವಿಭಾಗದಲ್ಲಿನ ಈ ಪ್ರಕರಣದಲ್ಲಿ ಖುದ್ದು ಕುಲಪತಿಗಳೇ ವಿವಿ ಹಿತಾಸಕ್ತಿ ಕಾಪಾಡಲು ಮದ್ಯಪ್ರವೇಶಿಸಿದ್ದರಿಂದ ಹಾಗೂ ಎರಡೂ ಪಕ್ಷಗಳವರ ಅಭಿಪ್ರಾಯ ಕಲೆಹಾಕಿದ್ದರಿಂದ ತಕ್ಷಣ ಗೈಡ್ಶಿಪ್ ಬದಲಾವಣೆಯ ವಿದ್ಯಾರ್ಥಿನಿ ಬೇಡಿಕೆಗೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಆಂತರಿಕ ವಿಚಾರಣೆ: ಅರ್ಥಶಾಸ್ತ್ರ ವಿಭಾಗದಲ್ಲಿ ಸಂಭವಿಸಿರುವ ಕಿರುಕುಳದ ಈ ಪ್ರಕರಣವನ್ನು ವಿವಿ ಈಗಾಗಲೇ ತನ್ನಲ್ಲಿ ಹೊಂದಿರುವ ಟೀಚರ್ಸ್ ಮಾಲ್ ಪ್ರ್ಯಾಕ್ಟೀಸ್ ಕಮಿಟಿಗೆ ವಿಚಾರಣೆಗೆ ವಹಿಸಿಕೊಡಲಾಗುತ್ತಿದೆ. ಈ ಸಮಿತಿ ಸದರಿ ಪ್ರಕರಣದ ಸತ್ಯಾಸತ್ಯತೆಯನ್ನು ತನಿಖೆ ಮಾಡಿ ವರದಿ ಸಲ್ಲಿಸಲಿದೆ. ಈ ವರದಿಯನ್ನು ಸಿಂಡಿಕೇಟ್ ಗಮನಕ್ಕೆ ತಂದು ವಿವಿ ಕಾನೂನು ಪ್ರಕಾರ ತಪ್ಪಿತಸ್ಥರು ಎಂದು ಕಂಡು ಬರುವ ಶಿಕ್ಷಕರಿಗೆ ಯಾವುದೇ ಮುಲಾಜಿಲ್ಲದೆ ಶಿಕ್ಷೆ ವಿಧಿಸಲು ಜ್ಞಾನಗಂಗೆ ಆಡಳಿತ ಮಂಡಳಿ ಮುಂದಾಗಿದೆ.
ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಮಧ್ಯೆ ಅವಿನಾಭಾವ ಸಂಬಂಧಗಳಿರಬೇಕು ಎಂಬುದು ನಮ್ಮ ಬಯಕೆ. ಆದರೆ ಆ ಸಂಬಂಧಗಳು ಅನ್ಯ ರೂಪಗಳನ್ನು ಪಡೆದು ವಿವಿ ಹೆಸರಿಗೆ ಕಪ್ಪುಚುಕ್ಕೆ ಆಗುವ ಹಂತ ತಲುಪಿದರೆ ಅದನ್ನು ಸಹಿಸಲಾಗದು. ಬೋಧಕರೇ ಕಾಮರಾದರೆ ಅಂತಹವರಿಗೆ ಯಾವ ಕಾರಣಕ್ಕೂ ಕ್ಷಮಿಸಲಾಗದು ಎಂದು ವಿವಿ ಆಡಳಿತಾಂಗದ ಪ್ರಮುಖರೊಬ್ಬರು ಕನ್ನಡಪ್ರಭ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಸದರಿ ಕಿರುಕುಳ ಪ್ರಕರಣಕ್ಕೆ ಕಾರಣರಾಗಿರುವ ಶಿಕ್ಷಕರು ಯಾರೇ ಆಗಿರಲಿ, ಶಿಸ್ತು ಸಮಿತಿ ಶಿಫಾರಸು, ವರದಿಗಳನ್ನಾಧರಿಸಿ ಬರುವ ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು 'ಕನ್ನಡಪ್ರಭ'ಕ್ಕೆ ಸ್ಪಷ್ಟಪಡಿಸಿದ್ದಾರೆ.