ಜಾತಿಪತ್ರ ವಿಳಂಬ ಖಂಡಿಸಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಚಿಂಚೋಳಿ, ಡಿ.5
ತಾಲೂಕಿನಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಗೊಂಡ ಮತ್ತು ಕಾಡು ಕುರುಬ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಕಂದಾಯ ಅಧಿಕಾರಿಗಳ ನಿರ್ಲಕ್ಷತನ ಮತ್ತು ವಿಳಂಬ ಧೋರಣೆ ಖಂಡಿಸಿ ಮತ್ತು ಗೊಂಡ, ಕಾಡು ಕುರುಬ ಜಾತಿಯ ಪರಿಶಿಷ್ಟ ಜಾತಿ ಪ್ರಮಾಣ ನೀಡುವಂತೆ ಒತ್ತಾಯಿಸಿ ತಾಲೂಕು ಗೊಂಡ ಸಂಘರ್ಷ ಸಮಿತಿಯಿಂದ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ಮತ್ತು ಧರಣಿ ಸತ್ಯಾಗ್ರಹ ನಡೆಸಿ ತಹಸೀಲ್ದಾರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ತಾಲೂಕು ಗೊಂಡ ಸಂಘರ್ಷ ಸಮಿತಿ ಅಧ್ಯಕ್ಷ ಮಲಕಪ್ಪ ಬಿರಾಪುರ ಮಾತನಾಡಿ, ಜಿಲ್ಲೆಯಲ್ಲಿ ಅನಾದಿ ಕಾಲದಿಂದಲೂ ಪರಿಶಿಷ್ಟ ಜಾತಿ ಪಂಗಡಕ್ಕೆ ಸೇರಿದ ಗೊಂಡ ಮತ್ತು ಕಾಡು ಕುರುಬ ಜನಾಂಗದವರು ವಾಸಿಸುತ್ತಿದ್ದು, ಹಲವಾರು ವರ್ಷಗಳಿಂದ ಸರ್ಕಾರದ ಎಲ್ಲ ಸೌಲಭ್ಯಗಳು ಪಡೆಯುತ್ತಿದ್ದಾರೆ. ಅನೇಕರು ಚುನಾವಣೆಗೆ ಸ್ಪರ್ಧಿಸಿದ್ದು ಮತ್ತು ಕೆಲವರು ಸರ್ಕಾರಿ ಸೇವೆಯಲ್ಲಿದ್ದಾರೆ. ಅನೇಕರ ಮಕ್ಕಳು ಶಾಲಾ -ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ, ಚಿಂಚೋಳಿ ತಹಸೀಲ್ದಾರ್ ಜಗನ್ನಾಥರೆಡ್ಡಿ ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿ ಸಂವಿಧಾನಬದ್ಧವಾಗಿ ನಮ್ಮ ಜನಾಂಗಕ್ಕೆ ಸಿಗಬೇಕಾದ ಹಕ್ಕುಗಳನ್ನು ಕಿತ್ತಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಗೊಂಡ ಜಾತಿ ಪ್ರಮಾಣಪತ್ರ ನೀಡುವಂತೆ ಸರ್ಕಾದ ಆದೇಶ ಮತ್ತು ಸುತ್ತೋಲೆಗಳ ದಾಖಲಾತಿಗಳೊಂದಿಗೆ ಅನೇಕ ಸಲ ಮನವಿ ಸಲ್ಲಿಸಿದರು. ಅವುಗಳು ಪರಿಶೀಲಿಸದೇ ನಮ್ಮ ಜನಾಂಗದವರಿಗೆ ಗೊಂಡ ಮತ್ತು ಕಾಡು ಕುರುವ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನ ಕಾರ್ಯದರ್ಶಿ ರೇವಣಸಿದ್ದಪ್ಪ ಅಣಕಲ್, ಹಣಮಂತ ಪೂಜಾರಿ, ರಾಮಚಂದ್ರ ಬಿರಾಪುರ, ಜಗನ್ನಾಥ ಮಾಡಗಿ, ತಾಪಂ ಮಾಜಿ ಉಪಾಧ್ಯಕ್ಷ ನರಸಪ್ಪ ಪೂಜಾರಿ, ಮಲ್ಲಿಕಾರ್ಜುನ ಇತರರು ಮಾತನಾಡಿದರು.
ಗೊಂಡ ಸಮಿತಿಯಿಂದ ವಿವಿಧ ಬೇಡಿಕೆಗಳ ಮನವಿ ಪತ್ರ ತಹಸೀಲ್ದಾರ್ ಮೋಹನ ಜೋಶಿ ಸ್ವೀಕರಿಸಿ, ವರದಿ ಜಿಲ್ಲಾಧಿಕಾರಿ ಗಮನಕ್ಕೆ ತರುವ ಎಂದು ಭರವಸೆ ನೀಡಿದರು.
ರೇವಣಸಿದ್ದಪ್ಪ ಅಣಕಲ್, ಹಣಮಂತ ಪೂಜಾರಿ, ಸಿದ್ದಪ್ಪ ಪೂಜಾರಿ, ರಾಜೂ ಪೂಜಾರಿ ಎಂಪಳ್ಳಿ, ರಾಜಕುಮಾರ ಎಲಮಡಗಿ, ರವೀಂದ್ರ ಪೂಜಾರಿ, ರಾಜೇಂದ್ರ ದೇಗಲಮಡಿ, ರವಿ ಕುಂಚಾವರಂ, ಮೊಗಲಪ್ಪ ಕರಕಟ್ಟಿ, ಅಮೃತ ಪೂಜಾರಿ, ರಾಮಣ್ಣ ಪೂಜಾರಿ, ಸುರೇಶ ವೈದರಾಜ್, ಶರಣಪ್ಪ ಪೂಜಾರಿ, ಶಿವರಾಯ ಪೂಜಾರಿ, ಬಕ್ಕಪ್ಪ ಪೂಜಾರಿ, ಶಿವಪ್ಪ ಪೂಜಾರಿ, ರಾಜೇಂದ್ರ ಲೋಳಕಿ ಇತರರಿದ್ದರು.