ನಾಲವಾರ ಪ.ಪಂ.ಗೆ ಅನುಮೋದನೆ
ಗುಲ್ಬರ್ಗ/ಶಹಾಬಾದ್: ನಾಲವಾರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯತಿಯನ್ನಾಗಿ ಮೇಲ್ದರ್ಜೆಗೆ ಏರಿಸುವ ಸರ್ವ ಸದಸ್ಯರ ಅಭಿಪ್ರಾಯ ಪಡೆಯಲು ಗ್ರಾಪಂ ಕಾರ್ಯಾಲಯದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಸರ್ವ ಸಮ್ಮತಿಯ ಅನುಮೋದನೆ ಪಡೆಯಲಾಯಿತು.
ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ವೀರಣ್ಣಗೌಡ ಪರಸರೆಡ್ಡಿ ಮಾತನಾಡಿ, ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ, ಒಳಚರಂಡಿ, ಗ್ರಾಮದ ಸ್ವಚ್ಛತೆ, ವಿವಿಧ ಯೋಜನೆ ಅಡಿಯಲ್ಲಿ ಬಡ ಜನರಿಗೆ ವಸತಿ ಕಲ್ಪಿಸುವುದು ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಕರ ವಸೂಲಿಗಾರರು ನಿಗದಿತ ಸಮಯಕ್ಕೆ ಬಾರದೆ ಇರುವುದು, ಅಭಿವೃದ್ಧಿ ಅಧಿಕಾರಿಗಳ ಕಾರ್ಯ ವೈಖರಿಗೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ಸಿಬ್ಬಂದಿಯನ್ನು ಹದ್ದು ಬಸ್ತಿನಲ್ಲಿ ಇರಿಸಿಕೊಳ್ಳದೆ ಗ್ರಾಮದ ಅಭಿವೃದ್ಧಿ ಕಾರ್ಯಗಳು ನಡೆಯುವುದಿಲ್ಲ ಎಂದೂ ಎಚ್ಚರಿಸಿದರು.
ಸರ್ಕಾರದಿಂದ ಅನುದಾನ: ಪಕ್ಷಬೇಧ ಮರೆತು ಎಲ್ಲ ಸದಸ್ಯರು ಒಗ್ಗೂಡಿ ಗ್ರಾಮವನ್ನು ಸುಂದರ ಗ್ರಾಮವನ್ನಾಗಿ ರೂಪಿಸಬೇಕೆಂದು ಕರೆ ನೀಡಿದ ಅವರು, ನಾಲವಾರ ಗ್ರಾಪಂನ್ನು ಪಟ್ಟಣ ಪಂಚಾಯಿತಿಯಾಗುವುದಕ್ಕೆ ಬಹುದಿನಗಳಿಂದ ಕಾಯುತ್ತಿದ್ದು, ಈಗ ಕಾಲ ಕೂಡಿ ಬಂದಿದ್ದು, ಸರ್ಕಾರದಿಂದ ಹೆಚ್ಚಿನ ಅನುದಾನ ಹರಿದು ಬರಲಿದ್ದು, ಗ್ರಾಮದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಅಂಗೀಕಾರ: ಸರ್ವ ಸದಸ್ಯರು ನಾಲವಾರ ಗ್ರಾಪಂನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಲು ಸರ್ವಾನುಮತದಿಂದ ಅಂಗೀಕಾರ ನೀಡಲಾಯಿತು. ಗ್ರಾಮದ ಮುಖಂಡರಾದ ಲಿಂಗಾರೆಡ್ಡಿ ಬಾಸರೆಡ್ಡಿ, ಗುರುಗೌಡ ಇಟಗಿ, ಶರಣಗೌಡ ಇಟಗಿ, ಗ್ರಾಪಂ ಅಧ್ಯಕ್ಷ ಈರಣ್ಣಗೌಡ ಬಿರಾಳ, ಪಿಡಿಒ ಗುರುನಾಥ, ಸದಸ್ಯರಾದ ಶಿವರಡ್ಡಿಗೌಡ ಸೋಮರೆಡ್ಡಿ, ಮನ್ಸೂರ ಅಲಿ, ಸಿದ್ದರಾಜ ಮದ್ರಕಿ, ಈರಣ್ಣ ಲೇವಡಿ, ರಹೀಮ್ ನಯಾಘರ್, ತಿಪ್ಪಣ್ಣ ಸೊಂತಿ, ಮಾರುತಿ ಸುಗ್ಗಾ, ಕರವೇ ಅಧ್ಯಕ್ಷ ಶಿವುಕುಮಾರ ಸುಣಗಾರ, ಗ್ರಾಪಂ ಸದಸ್ಯರು ಪಾಲ್ಗೊಂಡಿದ್ದರು.