ನೂತನ ಕೃಷಿ ನೀತಿ ರದ್ದುಪಡಿಸಲು ಒತ್ತಾಯ
ಗುಲ್ಬರ್ಗ: ಕೃಷಿ ನೀತಿಯಿಂದ ರೈತ ವರ್ಗದ ಮತ್ತು ಭೂಮಿಯ ಮೇಲೆ ವ್ಯತಿರಿತ್ತ ಪರಿಣಾಮ ಬಿರುತ್ತಿದ್ದು, ಕೂಡಲೇ ಈ ಹೊಸ ಕೃಷಿ ನೀತಿ ರದ್ದುಪಡಿಸುವಂತೆ ಒತ್ತಾಯಿಸಿ ಶೀಘ್ರವೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವ ಮೂಲಕ ಕಾನೂನು ಸಮರ ಸಾರಲು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಉಪಾಧ್ಯಕ್ಷ ಬಸವರೆಡ್ಡಿ ಕರೆಡ್ಡಿ ನಿರ್ಧರಿಸಿದ್ದಾರೆ.
ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಕೃಷಿ ನೀತಿಯಲ್ಲಿ ವಿದೇಶ ಕಂಪನಿಗಳು ನೇರ ಬಂಡವಾಳ ಹೂಡಿ ಕೃಷಿ ಚಟುವಟಿಕೆಗಳು ನಡೆಸುತ್ತಿರುವುದರಿಂದ ರೈತರ ಫಲವಾತ್ತಾದ ಭೂಮಿ ಹಾಳಾಗುವುದರ ಜತೆಗೆ ವಿಷಾಹಾರ ಸೇವಿಸಿ ಜನತೆ ಆರೋಗ್ಯ ಹದಗೆಡುತ್ತಿದೆ. ಹೀಗಾಗಿ ಈ ಕೃಷಿ ನೀತಿ ರದ್ದುಪಡಿಸುವುದು ಅಗತ್ಯವಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೃಷಿ ಕ್ಷೇತ್ರ ಕೈಬಿಡಿ: ಇಂಡೋನೇಷ್ಯಾದ ಬಾಲಿ ಎಂಬಲ್ಲಿ ಈಗಾಗಲೇ ಆರಂಭವಾಗಿ ಡಿ.9ರವರೆಗೆ ನಡೆಯುವ 9ನೇ ಶೃಂಗ ಸಭೆಯಲ್ಲಿ ದೇಶದ ಪ್ರತಿನಿಧಿಯಾಗಿ ಪಾಲ್ಗೊಂಡಿರುವ ಕೈಗಾರಿಕಾ ಸಚಿವ ಆನಂದ ಶರ್ಮಾ ಅವರು ವಿಶ್ವ ವ್ಯಾಪಾರ ಒಪ್ಪಂಧಕ್ಕೆ ಸಹಿ ಹಾಕುವಾಗ ಕನಿಷ್ಠ ಪಕ್ಷ ಕೃಷಿ ಕ್ಷೇತ್ರವನ್ನು ಕೈಬಿಡಬೇಕೆಂದು ಒತ್ತಾಯಿಸಿದರು.
ಕೃಷಿ ಉತ್ಪನ್ನಗಳ ಆಮದು ನಿಲ್ಲಿಸಬೇಕು, ರಫ್ತಿಗೆ ಅವಕಾಶ ಕಲ್ಪಿಸಬೇಕು. ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಕೃಷಿ ಕ್ಷೇತ್ರವನ್ನು ಸೇರಿಸಬಾರದು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ನೀಡಿ ಆಗ್ರಹಿಸಲಾಗುವುದು ಎಂದರು.
ಪ್ರತಿ ಕ್ವಿಂಟಲ್ ತೊಗರಿಗೆ ಸರ್ಕಾರ ಘೋಷಣೆ ಮಾಡಲು ಹೊರಟಿರುವ ಬೆಂಬಲ ಬೆಲೆ ಸಾಕಾಗುವುದಿಲ್ಲ. ಹೀಗಾಗಿ ಸರ್ಕಾರ 9,500 ಬೆಂಬಲ ನೀಡಿದಾಗ ಮಾತ್ರ ರೈತನ ಬದುಕು ನಡೆಯಲು ಸಾಧ್ಯ. ಸರ್ಕಾರ ನೀಡುವ ಬೆಂಬಲ ಬೆಲೆ ಉತ್ಪಾದನೆ ವೆಚ್ಚಕ್ಕಿಂತ ಕಡಿಮೆಯಾಗಲಿದ್ದು, ಸರ್ಕಾರ ಪರಿಶೀಲಿಸಿ 9,500 ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ನರಸಿಂಗರಾವ ಕುಲಕರ್ಣಿ, ಮಲ್ಲಣ್ಣ ವಾಡದ್ ಉಪಸ್ಥಿತರಿದ್ದರು.