ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಶಿಶು ಮರಣ ಮೃದಂಗಕ್ಕೆ ಸರ್ಕಾರ ಜಾಣ ಕಿವುಡು

Lingaraj Badiger
Updated On : 6 Dec 2013, 12:02 pm

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಡಿ.5
ಅಭಿವೃದ್ಧಿಯ ಎಲ್ಲ ರಂಗಗಳಲ್ಲಿ ಹಿಂದಿರುವ ರಾಜ್ಯದ ಈಶಾನ್ಯದ 7 ಜಿಲ್ಲೆಗಳಲ್ಲಿ ಶಿಶು ಮರಣ ಸಂಖ್ಯೆ ಮಾತ್ರ ಬೇರೆ ಜಿಲ್ಲೆಗಳಿಗಿಂತ ಮುಂದಿದೆ. ಆತಂಕ ಮೂಡಿಸುವಷ್ಟು ಈ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
  2013ರ ಕಳೆದ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಗುಲ್ಬರ್ಗ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ,   ಬಿಜಾಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಜನಿಸಿದ 1,28,927 ಶಿಶುಗಳಲ್ಲಿ 2,426 ಮೃತಪಟ್ಟಿವೆ.
  ಹಳೆ ಮೈಸೂರು, ಮುಂಬೈ ಕರ್ನಾಟಕ, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಇತರೆ ಯಾವ ಭಾಗದಲ್ಲಿಯೂ ನವಜಾತ ಶಿಶುಗಳ ಮರಣ ಪ್ರಮಾಣದಲ್ಲಿ ಹೆಚ್ಚಳ ಕಂಡಿಲ್ಲ.
ಆರೋಗ್ಯ ಸಿಬ್ಬಂದಿ ಕೊರತೆ: ಈ ಜಿಲ್ಲೆಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆಯೇ ನವಜಾತ ಶಿಶು ಮರಣಕ್ಕೆ ಮುಖ್ಯ ಕಾರಣ. ಜನನಿ ಸುರಕ್ಷಾ, ಮಡಿಲು, ಗರ್ಭಿಣಿಯರಿಗೆ ಐರನ್ ಸುಕ್ರೋಸ್ ನೀಡುವುದು ಸೇರಿದಂತೆ ಹಲವಾರು ಯೋಜನೆಗಳಿದ್ದರೂ ಹಳ್ಳಿಗಳಲ್ಲಿರುವ ಫಲಾನುಭವಿಗಳಿಗೆ ಕೊಂಡೊಯ್ಯಲು ಅಗತ್ಯ ಸಿಬ್ಬಂದಿಯೇ ಇಲ್ಲ.
  ಆರೋಗ್ಯ ಕೇಂದ್ರಗಳಡಿಯಲ್ಲಿ ಗರ್ಭಿಣಿಯರ ನಿಯಮಿತ ತಪಾಸಣೆಗೂ ಸೌಕರ್ಯಗಳಿಲ್ಲ. ಹೆರಿಗೆ ವೇಳೆ ಸೂಕ್ತ ಜಾಗರೂಕರಾಗಿರಲು ಇಲ್ಲಿ ಯಾವುದೇ ವ್ಯವಸ್ಥೆ ಇಲ್ಲ. ಆಸ್ಪತ್ರೆಗಳಲ್ಲಿಯೇ ಹೆರಿಗೆ ಮಾಡಿಸಿಕೊಳ್ಳುವಂತೆ ಜನ ಜಾಗೃತಿ ಮೂಡಿಸುವ ಕಾರ್ಯವೂ ಈ ಭಾಗದಲ್ಲಿ ಕೈಗೆತ್ತಿಕೊಳ್ಳುವ ಅವಶ್ಯಕತೆ ಇದೆ.
  90 ಆರೋಗ್ಯ ಕೇಂದ್ರಗಳಿರುವ ಗುಲ್ಬರ್ಗದಲ್ಲಿ 14 ವೈದ್ಯರು, 125ಕ್ಕೂ ಹೆಚ್ಚು ಆರೋಗ್ಯ ಸಹಾಯಕಿಯರು ಸೇರಿದಂತೆ 332 ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಬಹುತೇಕ ಇದೇ ಪರಿಸ್ಥಿತಿ ಉಳಿದ ಜಿಲ್ಲೆಗಳಲ್ಲಿಯೂ ಕಾಣಬಹುದು.  
  ಮೂಲ ಸಮಸ್ಯೆಗಳಿಗೆ ಸ್ಪಂದಿಸಲು ವಿಫಲವಾದ ಸರ್ಕಾರ ಇರುವ ವ್ಯವಸ್ಥೆಗೇ ತೇಪೆ ಹಚ್ಚುವ ಕಾರ್ಯದಲ್ಲಿ ಮುಳುಗಿದೆ. ದಿನದ 24 ಗಂಟೆ ಸೇವೆ ನೀಡುವ ಪಿಎಚ್‌ಸಿಗಳಲ್ಲಿರುವ ನವಜಾತ ಶಿಶುಗಳ ಆರೈಕೆ ಕೇಂದ್ರ, ಸಮುದಾಯ ಹಾಗೂ ತಾಲೂಕು ಆರೋಗ್ಯ ಘಟಕಗಳ ನವಜಾತ ಶಿಶುಗಳ ಅವಲೋಕನ ಘಟಕಗಳು, ಚಿಕಿತ್ಸಾ ಘಟಕಗಳು, ಜನನಿ ಸುರಕ್ಷಾ ಯೋಜನೆಗಳ ಬಗ್ಗೆ ಬಹುತೇಕ ಫಲಾನುಭವಿಗಳಿಗೆ ಮಾಹಿತಿಯೇ ಇಲ್ಲ.
ಮೂಗುದಾರ ಯಾವಾಗ?: ಹುಟ್ಟಿನಿಂದ ಬರುವ ಗಂಡಾಂತರ ಕಾಯಿಲೆಗಳಿಂದ ಶಿಶು ಮರಣ ಆದಲ್ಲಿ ಅದನ್ನು ತಪ್ಪಿಸಲು ಆಗುವುದಿಲ್ಲ. ಆದರೆ ಗರ್ಭಿಣಿ ಆರೈಕೆಯಲ್ಲಿನ ಲೋಪಗಳು, ಸೀಸೆರಿಯನ್‌ನಂಥ ಹೆರಿಗೆಯಲ್ಲಿ ಸಮಯಕ್ಕೊದಗದ ಆರೋಗ್ಯ ಸವಲತ್ತುಗಳಿಂದ ಶಿಶು ಮರಣವಾದಲ್ಲಿ ಅದಕ್ಕೆ ವ್ಯವಸ್ಥೆಯೇ ಹೊಣೆಯಲ್ಲವೆ?
  ಸಿಬ್ಬಂದಿ ಇಲ್ಲದೆ ಭಣಗುಡುತ್ತಿರುವ ಆಸ್ಪತ್ರೆಗಳಲ್ಲಿ ಮೊದಲು ತಜ್ಞರು, ಅರ್ಹರ ನೇಮಕಕ್ಕೆ ಸರ್ಕಾರ ಒತ್ತು ನೀಡದ ಹೊರತು ಶಿಶು ಮರಣ ಮೃದಂಗದ ಸದ್ದು ನಿಲ್ಲಿಸಲಾಗದು.
-ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement