ಹನುಮನ ಪಲ್ಲಕ್ಕಿ ಮುಂದೆ, ಭಕ್ತರು ಹಿಂದೆ...
ಶ್ರದ್ಧಾಭಕ್ತಿಯಿಂದ ನೆರವೇರಿಸದ ಕೊಂಚೂರ ಹನುಮಾನ ಗಂಗಾಸ್ನಾನ ಆಚರಣೆ
ಗುಲ್ಬರ್ಗ/ಶಹಾಬಾದ್: ಚಿತ್ತಾಪುರ ತಾಲೂಕಿನ ಕೊಂಚೂರ ಗ್ರಾಮದ ಸುಪ್ರಸಿದ್ಧ ಹನುಮಾನ ದೇವರು ಪಲ್ಲಕ್ಕಿಯಲ್ಲಿ ಕುಳಿತು ಗಂಗಾಸ್ನಾನಕ್ಕಾಗಿ ಚಾಮನೂರ ಭೀಮಾನದಿಯತ್ತ ಓಡುತ್ತಿದ್ದರೆ, ಭಕ್ತರು ಪಲ್ಲಕ್ಕಿಯ ಹಿಂದೆ ಓಡುತ್ತ ನದಿಗೆ ಹೋಗುವ ವಿಶಿಷ್ಟ ಉತ್ಸವ ವಿಜೃಂಭಣೆಯಿಂದ ನಡೆಯಿತು.
ವ್ಯಾಸರ ಆಜ್ಞೆಯಂತೆ ಉತ್ತರದ ಭದ್ರಿಕಾಶ್ರಮದಿಂದ ನದಿ ಮೂಲಕ ಚಾಮನೂರಕ್ಕೆ ಬಂದ ನೆನಪಿಗಾಗಿ ಚಾಮನೂರ ಬಳಿಯ ಭೀಮಾನದಿಗೆ ಗಂಗಾಸ್ನಾನಕ್ಕೆ ಹೋಗುವ ವಿಶಿಷ್ಟ ಕಾರ್ಯಕ್ರಮ ಪ್ರತಿವರ್ಷ ಛಟ್ಟಿ ಅಮವಾಸ್ಯೆ ದಿನ ನಡೆಯುತ್ತದೆ.
ಬೆಳಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆಯ ನಂತರ ಹನುಮಾನ ದೇವರ ಪಲ್ಲಕ್ಕಿಯನ್ನು ಓಡುತ್ತ ಚಾಮನೂರ ಭೀಮಾನದಿಯತ್ತ ಹೋಗಲಾಯಿತು. ಮಾರ್ಗಮಧ್ಯದ ಬಳವಡಗಿ ಗ್ರಾಮದ ಬಳಿ ಬಂದ ಪಲ್ಲಕ್ಕಿಗೆ ಗ್ರಾಮಸ್ಥರು ವಾದ್ಯವೃಂದದೊಂದಿಗೆ ಸ್ವಾಗತಿಸಿ, ಗ್ರಾಮದ ಹೊರಭಾಗಕ್ಕೆ ಬೀಳ್ಳೊಟ್ಟರು, ಅಲ್ಲಿಂದ ಓಡುತ್ತ ಚಾಮನೂರ ಗ್ರಾಮದ ಬಳಿ ಬಂದಾಗ ಗ್ರಾಮಸ್ಥರು ಸ್ವಾಗತಿಸಿ, ಬೀಳ್ಕೊಟ್ಟರು. ಅಲ್ಲಿಂದ ನದಿಯವರೆಗೆ ಪಲ್ಲಕ್ಕಿ ಹೊತ್ತು ಓಡುತ್ತ ನದಿಗೆ ತಲುಪಿದರು.
ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಚಾಮನೂರ, ನರಬೋಳಿ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ದೇವರ ಮೂರ್ತಿಯೊಂದಿಗೆ ನದಿಯಲ್ಲಿ ಮುಳುಗಿ ಕೃತಾರ್ಥರಾದರು. ನದಿಯಲ್ಲಿ ದೇವರಿಗೆ ವಿಶೇಷ ಪೂಜೆ ನಡೆದ ನಂತರ ನದಿ ತೀರದಲ್ಲಿ ನೆರೆದ ಸುಮಾರು 25 ಸಾವಿರಕ್ಕೂ ಹೆಚ್ಚು ಭಕ್ತರು ತಮ್ಮೊಂದಿಗೆ ತಂದ ಸಜ್ಜೆ, ರೊಟ್ಟಿ, ಜೋಳದ ರೊಟ್ಟಿ, ಎಣ್ಣೆ ಬದನೇಕಾಯಿ, ಹಿಂಡಿ ಪಲ್ಲ್ಯಾ, ಪುಂಡಿಪಲ್ಯಗಳ ಬುತ್ತಿಯನ್ನು ನದಿತೀರದಲ್ಲಿ ಸವಿದರು.
ಸಂಜೆ 4 ಗಂಟೆಗೆ ನದಿಯಿಂದ ಪಲ್ಲಕ್ಕಿಯೊಂದಿಗೆ ಓಡುತ್ತ ಚಾಮನೂರ ಅಲ್ಲಿಂದ ಬಳವಡಗಿ ಗ್ರಾಮಕ್ಕೆ ಬಂದ ಪಲ್ಲಕ್ಕಿಗೆ ಗ್ರಾಮಸ್ಥರು ಭವ್ಯ ಸ್ವಾಗತ ನೀಡಿ ಬೀಳ್ಕೊಟ್ಟರು. ಕೊಂಚೂರ ಗ್ರಾಮದಲ್ಲಿ ಸ್ವಾಗತಿಸಿ ದೇವಸ್ಥಾನಕ್ಕೆ ಕರೆದೊಯ್ಯಲಾಯಿತು.
--