ಕೋಮು ಹಿಂಸೆ ತಡೆ ಮಸೂದೆಗೆ ಆಗ್ರಹ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಡಿ.6
ಇತ್ತೀಚೆಗೆ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರಕ್ಕಾಗಿ ತೆರಳಿದ್ದ ಪೌರಾಡಳಿತ, ಅಲ್ಪಸಂಖ್ಯಾತರ ಸಚಿವ ಖಮರುಲ್ ಇಸ್ಲಾಂ ಅವರು ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಖುರ್ಷಿದ್ ಅಹ್ಮದ್ ಸಯಿದ್ ಅವರನ್ನು ಭೇಟಿಯಾಗಿ ಕೋಮು ಹಿಂಸೆ ತಡೆ ಬಿಲ್ ಜಾರಿಗೆ ತರಲು ಒತ್ತಾಯಿಸಿದರು.
ಚಳಿಗಾಲದ ಅಧಿವೇಶನದಲ್ಲಿ ಕೋಮು ಹಿಂಸೆ ತಡೆ ವಿಧೇಯಕ ಮಂಡಿಸಿ ಜಾರಿಗೆ ತರುವ ನಿಟ್ಟಿನಲ್ಲಿ ದೇಶಾದ್ಯಂತ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಘಟಕಗಳ ಜವಾಬ್ದಾರಿಯುತ ಪದಾಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ಒಂದು ಸಾಲಿನ ನಿರ್ಣಯ ಅಂಗೀಕರಿಸಿ ಅದನ್ನು ಎಐಸಿಸಿ ಅಧ್ಯಕ್ಷರು, ಪ್ರಧಾನಮಂತ್ರಿಗಳು, ರಾಷ್ಟ್ರೀಯ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ನಡುವಳಿಯ ಪ್ರತಿ ಸಲ್ಲಿಸಿ ಪಕ್ಷದ ಹಾಗೂ ಜಾತ್ಯತೀತ ಮನೋಭಾವನೆಯ ಎಲ್ಲ ಸಂಸದರಿಗೆ ಇದರ ಸಾಧಕಬಾಧಕಗಳ ಬಗ್ಗೆ ಮನದಟ್ಟು ಮಾಡಿಕೊಟ್ಟು ಚಳಿಗಾಲದ ಅಧಿವೇಶನದಲ್ಲಿ ಈ ವಿಧೇಯಕ ಜಾರಿಗೆ ತರಲು ತಾವು ಪ್ರಮುಖ ಪಾತ್ರ ವಹಿಸಬೇಕು ಎಂದು ಮನವಿ ಮಾಡಿದರು.
ಗುಲ್ಬರ್ಗ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಸಗರ್ ಚುಲಬುಲ್, ಉಪಾಧ್ಯಕ್ಷ ಅಬ್ದುಲ್ ರಹಿಂ ಮಿರ್ಚಿ ಸೇಟ್, ಅಬ್ದುಲ್ ಅಜಿಂ, ಪ್ರಧಾನ ಕಾರ್ಯದರ್ಶಿ ಆದಿಲ್ ಸುಲೇಮಾನ್, ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾದ ಮಹ್ಮದ್ ಜಾಹೇದ್, ನಜುಮುಲ್ ಇಸ್ಲಾಂ ಅಹ್ಮದ್, ಹೈದರ್ ಪಾಶಾ ಖಾದ್ರಿ ಉಪಸ್ಥಿತರಿದ್ದರು.