ನಾಳೆ ಕೆಸೆಟ್ ಪರೀಕ್ಷೆ
ಗುಲ್ಬರ್ಗ: ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆಗೆ ದಿನಗಣನೆ ಶುರುವಾಗಿದ್ದು, ಈ ಪರೀಕ್ಷೆಗಳನ್ನು ಸಂಘಟಿಸಲು ಗುಲ್ಬರ್ಗ ವಿಶ್ವವಿದ್ಯಾಲಯ ಸರ್ವ ಸಿದ್ಧತೆ ಮಾಡಿಕೊಂಡಿದೆ.
ಡಿ. 8ರಂದು ಬೆ.9ರಿಂದ ಸಂಜೆ 4ರವರೆಗೆ ನಡೆಯಲಿರುವ ಪರೀಕ್ಷೆಯಲ್ಲಿ ವಿವಿ ವ್ಯಾಪ್ತಿಯಲ್ಲಿ ಸುಮಾರು 8,542 ಪರೀಕ್ಷಾರ್ಥಿಗಳು ಪರೀಕ್ಷೆ ನೀಡಲಿದ್ದಾರೆ. ಇದರಲ್ಲಿ ವಿವಿ 32 ವಿಷಯಗಳಿಗೆ ಸಂಬಂಧಿಸಿದ ವಿದ್ಯಾರ್ಥಿಗಳು ಇದ್ದಾರೆ. ಗುಲ್ಬರ್ಗದಲ್ಲಿ ಪರೀಕ್ಷೆ ನಡೆಸುವುದಕ್ಕಾಗಿ ಆಯಾ ವಿಷಯಗಳಿಗೆ ಬೇರೆ ಬೇರೆ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ.
ನಗರದ 6 ಕಾಲೇಜುಗಳನ್ನು ಇದಕ್ಕಾಗಿ ಆಯ್ಕೆ ಮಾಡಲಾಗಿದೆ. ಗುವಿವಿ ಆವರಣದಲ್ಲಿ ಎಂಬಿಎ, ಎಸಿಎ, ಕಾಮರ್ಸ್, ಕನ್ನಡ, ಉರ್ದು, ಇಂಗ್ಲಿಷ್, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಸಮಾಜ ಕಾರ್ಯ, ಇತಿಹಾಸ, ಅರ್ಥಶಾಸ್ತ್ರ, ಅಪ್ಲೈಡ್ ಎಲೆಕ್ಟ್ರಾನಿಕ್ಸ್, ಭೌತಶಾಸ್ತ್ರ, ಸಸ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಗಣಿತ, ರಾಸಾಯನ ಶಾಸ್ತ್ರ ವಿಷಯಗಳ ಪರೀಕ್ಷೆ ನಡೆಯಲಿವೆ.
ನೂತನ ವಿದ್ಯಾಲಯ, ಸರ್ಕಾರಿ ಪದವಿ ಕಾಲೇಜು, ಎಸ್.ಬಿ. ಕಾಲೇಜು, ಡಾ. ಅಂಬೇಡ್ಕರ್ ಕಾಲೇಜು, ಮಿಲಿಂದ ಪಿಯು ಕಾಲೇಜು, ನ್ಯಾಷನಲ್ ಕಾಲೇಜುಗಳಲ್ಲಿ ಪರೀಕ್ಷೆಗಳು ನಡೆಯಲಿವೆ.
ಸಿದ್ಧತೆ: ಪರೀಕ್ಷೆಗಳಿಗೆ ಬೇಕಾದ ಅಧಿಸೂಚನೆಗಳನ್ನು ಕೆ- ಸೆಟ್ ವೆಬ್ಸೈಟ್ನಲ್ಲಿ ಹೊರಡಿಸಲಾಗಿದ್ದು, ಸಂಬಂಧಪಟ್ಟ ವಿವಿಗಳಿಗೆ ಬಗ್ಗೆ ಸ್ಪಷ್ಟ ಮಾಹಿತಿಗಳನ್ನು ನೀಡಲಾಗಿದೆ. ಈಗಾಗಲೇ ಗುಲ್ಬರ್ಗದ 6 ಕಾಲೇಜುಗಳಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ. ಅಭ್ಯರ್ಥಿಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿರುವುದರಿಂದ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದಕ್ಕಾಗಿ 400- 500 ಜನ ಪರೀಕ್ಷಾ ಸಿಬ್ಬಂದಿ ನೇಮಕ ಮಾಡಲಾಗಿದ್ದು, ಅವರು ಪರೀಕ್ಷಾ ಕೊಠಡಿ ಮತ್ತಿತರ ಅವಶ್ಯಕತೆ ಇರುವಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಒಂದು ವೇಳೆ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲು ಕಡ್ಡಾಯವಾಗಿ ಬೇಕಾದ ಪ್ರವೇಶ ಚೀಟಿಯನ್ನು ಕಳೆದುಕೊಂಡಲ್ಲಿ ಅಥವಾ ಇಲ್ಲವಾದ್ದಲ್ಲಿ ಕೂಡಲೇ ಗುಲ್ಬರ್ಗ ವಿವಿಯ ಕೆ- ಸೆಟ್ ನೋಂದಣಿ ಅಧಿಕಾರಿಗೆ ಸಂಪರ್ಕಿಸಬಹುದಾಗಿದೆ. ಇದಕ್ಕಾಗಿ ಈ ಹಿಂದೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ ಬಗ್ಗೆ ದಾಖಲೆ ಹಾಗೂ ಗುರುತಿನ ಚೀಟಿಯ ಅವಶ್ಯಕತೆ ಇರುತ್ತದೆ. ಹೀಗಾಗಿ ಸಂಬಂಧಪಟ್ಟ ದಾಖಲೆಗಳನ್ನು ತೋರಿಸಿ ನಕಲು ಪ್ರತಿಯನ್ನು ಪಡೆಯಬಹುದು. ಯಾವ ಕಾರಣಕ್ಕೂ ಅಭ್ಯರ್ಥಿಗಳು ಪ್ರವೇಶ ಚೀಟಿ ರಹಿತವಾಗಿ ಪರೀಕ್ಷಾ ಕೊಠಡಿಗೆ ಬರಲು ಅವಕಾಶ ಇರುವುದಿಲ್ಲ.