ಬಲಭೀಮಸೇನ ರಥೋತ್ಸವಕ್ಕೆ ಧರಂ ಚಾಲನೆ
ಜೇವರ್ಗಿ: ತಾಲೂಕಿನ ಸುಕ್ಷೇತ್ರ ರಾಸಣಗಿ ಬಲಭೀಮಸೇನ ದೇವರ ಕಾರ್ತೀಕೋತ್ಸವ ಉತ್ಸವ ಶನಿವಾರ ವೈಭವದಿಂದ ಜರುಗಿತು. ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಹಾಗೂ ಅವರ ಧರ್ಮಪತ್ನಿ ಪ್ರಭಾವತಿ ರಥೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.
ಛಟ್ಟಿ ಉತ್ಸವದ ನಿಮಿತ್ತ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಾಜಿ ಸಿಎಂ ಧರಂಸಿಂಗ್ ಹಾಗೂ ಅವರ ಪತ್ನಿ ಬಲಭೀಮಸೇನ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ದರುಶನ ಪಡೆದರು. ಛಟ್ಟಿ ಉತ್ಸವದ ನಿಮಿತ್ತ ಬೆ.7ಕ್ಕೆ ಸುಪ್ರಭಾತ, 8ಕ್ಕೆ ವಾಯುಸ್ತುತಿ ಪುನಶ್ಚರಣ, 11ಕ್ಕೆ ಪಂಚಾಮೃತ ಅಭಿಷೇಕ, ಮ.1ಕ್ಕೆ ಬಲಭೀಮಸೇನ ದೇವರಿಗೆ ವಿಶೇಷ ಪೂಜೆ, ಅಲಂಕಾರ, ನೈವೇದ್ಯ ಹಾಗೂ ಮಹಾಮಂಗಳಾರತಿ ನಡೆಯಿತು.
ಅನೇಕ ಕಡೆಗಳಿಂದ ಬಂದ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಂಜೆ ವಿವಿಧ ಸಂಗೀತ ಕಲಾವಿದರಿಂದ ಸಂಗೀತ ಸೇವೆ ನಡೆಯಿತು.
ಅನ್ನಸಂತರ್ಪಣೆ: ಛಟ್ಟಿ ಉತ್ಸವದ ನಿಮಿತ್ತ ದಿ. ರಂಗಾಚಾರ್ಯ ಹರವಾಳಕರ್ ಅವರ ಪುತ್ರ ವೆಂಕಟೇಶ ಹರವಾಳ, ಅನಂತ ಹರವಾಳ ಅವರು ಅನ್ನ ಸಂತರ್ಪಣೆ ಮಾಡಿದರು. ಎಂಎಲ್ಸಿ ಅಲ್ಲಂಪ್ರಭು ಪಾಟೀಲ್, ರಾಜಕೀಯ ಮುಖಂಡರಾದ ನಿಂಗಣ್ಣ ನೇರಡಗಿ, ಸಿದ್ರಾಮಪ್ಪಗೌಡ ಹರನೂರ, ರಾಜಶೇಖರ ಸೀರಿ, ಕಾಶಿರಾಯಗೌಡ ಯಲಗೋಡ, ಸುಧೀಂದ್ರ ವಕೀಲ್, ರಾಘವೇಂದ್ರ ವಕೀಲ್, ಚಂದ್ರಶೇಖರ ಪುರಾಣಿಕ, ನೀಲಕಂಠ ಅವಟಿ, ಶರಣಬಸಪ್ಪ ಜೋಗೂರ, ಸುಧೀಂದ್ರ ಜೋಷಿ ಇದ್ದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಭೀಮಸೇನರಾವ ಮಾಡ್ಯಾಳಕರ್, ರಾಮಾಚಾರ್ಯ ಹರವಾಳಕರ್, ಶಂಕರಗೌಡ ಪಾಟೀಲ್, ಭೀಮಸೇನರಾವ ಹರವಾಳ, ಪ್ರಲ್ಹಾದ ಹರವಾಳಕರ್, ಕೃಷ್ಣಾಚಾರ್ಯ ಹರವಾಳಕರ್ ಉಪಸ್ಥಿತರಿದ್ದರು.
ಭಾನುವಾರ ಮರು ಛಟ್ಟಿ ಉತ್ಸವ ನಡೆಯಲಿದೆ.