ಸೆಮಿಸ್ಟರ್ ಪದ್ಧತಿ ಹಠಾವೋ
ಗುಲ್ಬರ್ಗ: ಇದೇ ಶೈಕ್ಷಣಿಕ ವರ್ಷದಿಂದ ಪ್ರಾರಂಭವಾಗುವಂತೆ ಐಟಿಐ ವಿದ್ಯಾರ್ಥಿಗಳಿಗೆ ಡಿಜಿಇಟಿಯಿಂದ ಜಾರಿ ಮಾಡಲು ಹೊರಟಿರುವ ಸೆಮಿಸ್ಟರ್ ಪದ್ಧತಿಯು ಅತ್ಯಂತ ಅಪ್ರಜಾತಾಂತ್ರಿಕ ಹಾಗೂ ವಿದ್ಯಾರ್ಥಿ ವಿರೋಧಿ ಕ್ರಮವಾಗಿದೆ. ಇದನ್ನು ಈ ಕೂಡಲೇ ಕೈ ಬಿಡಬೇಕೆಂದು ಆಗ್ರಹಿಸಿ ಎಐಡಿವೈಒ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುಲ್ಬರ್ಗದಲ್ಲಿ ಪ್ರತಿಭಟನೆ ನಡೆಸಿದರು.
ಒಂದು ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಯಾವುದೇ ಒಂದು ಹೊಸ ಶಿಕ್ಷಣ ಪದ್ಧತಿ ಜಾರಿಗೊಳಿಸುವ ಮೊದಲು ಎಲ್ಲ ಕಡೆಗಳಿಂದಲೂ ಅಂದರೆ, ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳು, ಕಾಲೇಜು ಉಪನ್ಯಾಸಕರ ಮಧ್ಯೆ ವ್ಯಾಪಕ ಚರ್ಚೆ ನಡೆಸಿ ಸಲಹೆ ಅಭಿಪ್ರಾಯಗಳನ್ನು ಸಂಗ್ರಹಿಸಬೇಕು. ಆದರೆ, ಇದೀಗ ಸರ್ಕಾರ ಇವೆಲ್ಲವನ್ನೂ ಗಾಳಿಗೆ ತೂರಿ ಏಕಾಏಕಿ ಐಟಿಐ ವಿದ್ಯಾರ್ಥಿಗಳ ಮೇಲೆ ಸೆಮಿಸ್ಟರ್ಗಳನ್ನು ತಂದು ಹೇರಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಇದರಿಂದ ಒಂದೆಡೆ ವಿದ್ಯಾರ್ಥಿಗಳನ್ನು ಪರೀಕ್ಷೆಯ ಗುಂಗಿನಲ್ಲಿ ಇರಿಸಿ ಅವರಲ್ಲಿ ಸೃಜನಶೀಲತೆ, ಜ್ಞಾನಕ್ಕಾಗಿನ ಹಂಬಲ, ವಿಷಯವನ್ನು ಆಳವಾಗಿ ಅರಿತುಕೊಳ್ಳುವಿಕೆ ಸಾಮರ್ಥ್ಯ ಕುಗ್ಗಿ ಹೋಗುತ್ತದೆ. ಇನ್ನೊಂದೆಡೆ ತರಬೇತಿ ಅಧಿಕಾರಿಗಳನ್ನು ಪರೀಕ್ಷೆ, ಮೌಲ್ಯಮಾಪನದ ಒತ್ತಡದಲ್ಲಿ ಸಿಲುಕಿಸಿ ಉತ್ತಮವಾದ ತರಬೇತಿ ನೀಡಲು ಕಷ್ಟಸಾಧ್ಯವಾಗಿ ಬರೀ ಸೆಲೆಬಸ್ ಮುಗಿಸಬೇಕೆಂಬ ಶಾಸ್ತ್ರದ ಬೋಧನೆಯಾಗಿ ಮಾರ್ಪಡುತ್ತದೆ. ಇಂತಹ ವಿದ್ಯಾರ್ಥಿ ವಿರೋಧಿ ಪದ್ಧತಿಯನ್ನು ಕೂಡಲೇ ಕೈಬಿಡಬೇಕು ಎಂದರು.
ರಾಜ್ಯದಲ್ಲಿ ಒಟ್ಟು 1472ಕ್ಕಿಂತ ಹೆಚ್ಚು ಕಾಲೇಜುಗಳಿವೆ. ಪ್ರತಿವರ್ಷ ಸುಮಾರು 30 ಸಾವಿರ ವಿದ್ಯಾರ್ಥಿಗಳು ತರಬೇತಿ ಪಡೆದು ಹೊರಬರುತ್ತಾರೆ. ಇವರೆಲ್ಲ ಉತ್ತಮ ತರಬೇತಿ ಹೊಂದಿದವರೇ ಆಗಿರುತ್ತಾರೆ. ಆದರೆ, ಈಗ ಸರ್ಕಾರ ಸೆಮಿಸ್ಟರ್ ಪದ್ಧತಿಯನ್ನು ಜಾರಿಗೊಳಿಸಿರುವುದರಿಂದ ವಿದ್ಯಾರ್ಥಿಗಳು ಕೇವಲ ಅಂಕಗಳಿಸಿದ ತರಬೇತಿದಾರರಾಗುತ್ತಾರೆಯೇ ವಿನಹ ಉತ್ತಮ ತರಬೇತಿ ಪಡೆದವರಾಗಲಾರರು. ಸರ್ಕಾರ ಈ ಕೂಡಲೇ ಸೆಮಿಸ್ಟರ್ ಪದ್ಧತಿಯನ್ನು ಕೈಬಿಟ್ಟು ಮುಂಚೆ ಇರುವಂತೆ ಮುಂದುವರಿಸಬೇಕು. ನಿರುದ್ಯೋಗಿ ತರಬೇತಿದಾರರಿಗೆ ಉದ್ಯೋಗ ಒದಗಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಮಹೇಶ ನಾಡಗೌಡ ಸೇರಿದಂತೆ ಸಂಘಟನೆಯ ಹಲವಾರು ಪದಾಧಿಕಾರಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.