62 ವಿದ್ಯಾರ್ಥಿಗಳಿಗೆ ಸಹಾಯಧನ ಚೆಕ್ ವಿತರಣೆ
ಕನ್ನಡಪ್ರಭ ವಾರ್ತೆ ಚಿತ್ತಾಪುರ ಡಿ.9
ಪುರಸಭೆಯ ಸಾಮಾನ್ಯ ಅನುದಾನದಲ್ಲಿ 2.17 ಲಕ್ಷ ಹಣವನ್ನು ಪುರಸಭೆ ವ್ಯಾಪ್ತಿಯ 62 ಬಡ ವಿವಿಧ ಕೋರ್ಸಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮೆರಿಟ್ ಅಧಾರದ ಮೇಲೆ ಸಹಾಯಧನ ಚೆಕ್ ವಿತರಿಸಲಾಗಿದೆ ಎಂದು ಪುರಸಭೆ ಅಧ್ಯಕ್ಷ ಶಿವಕಾಂತ ಬೆಣ್ಣೂರಕರ್ ಹೇಳಿದರು.
ಪುರಸಭೆ ಕಚೇರಿಯಲ್ಲಿ ವಿದ್ಯಾರ್ಥಿಗಳಿಗೆ ಚೆಕ್ ವಿತರಿಸಿ ಮಾತನಾಡಿದ ಅವರು, ಆರ್ಥಿಕ ಪರಿಸ್ಥಿತಿಯಿಂದ ಬಡ ವಿದ್ಯಾರ್ಥಿಗಳಿಗೆ ಓದಿಗೆ ಬೇಕಾಗುವ ಪುಸ್ತಕ ಹಾಗೂ ಇತರೆ ವಸ್ತುಗಳನ್ನು ಖರೀದಿಸಲು ತೊಂದರೆಯಾಗುವುದು. ಇಂತಹ ವಿದ್ಯಾರ್ಥಿಗಳಿಗೆ ಪುರಸಭೆಯಿಂದ ಆರ್ಥಿಕ ಸಹಾಯ ಮಾಡಿದಲ್ಲಿ ಅವರ ಓದಿಗೆ ಅನುಕೂಲವಾಗುವದೆಂಬ ಉದ್ದೇಶದಿಂದ ಸಹಾಯಧನದ ಚೆಕ್ ನೀಡುತ್ತಿದ್ದು, ಇದರ ಸದುಪಯೋಗ ಪಡೆದ ವಿದ್ಯಾರ್ಥಿಗಳು ಒಳ್ಳೆಯ ಅಂಕ ಪಡೆದುಕೋಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು.
ಎಸ್ಸೆಸ್ಸೆಲ್ಸಿಯ 18 ಮಕ್ಕಳಿಗೆ 2000, ಪಿಯುಸಿಯ 19 ಮಕ್ಕಳಿಗೆ 3000, ಬಿಎ ಪಾಸಾದ 20 ಮಕ್ಕಳಿಗೆ 4000, ಪಿಜಿಯಿಂದ 4 ಮಕ್ಕಳಿಗೆ 6000 ಹಾಗೂ ಎಂಫಿಲ್‌ನಿಂದ ಒಬ್ಬ ವಿದ್ಯಾರ್ಥಿಗೆ 20 ಸಾವಿರ ಹೀಗೆ ಹೆಚ್ಚಿನ ಅಂಕ ಪಡೆದ ಒಟ್ಟು 62 ವಿದ್ಯಾರ್ಥಿಗಳಿಗೆ 2.17 ಲಕ್ಷದ ಚೆಕ್ ವಿತರಿಸಲಾಗಿದೆ ಎಂದು ಪುರಸಭೆ ಅಧ್ಯಕ್ಷ ಶಿವಕಾಂತ ಬೆಣ್ಣೂರಕರ್ ತಿಳಿಸಿದರು. ಪುರಸಭೆ ಉಪಾಧ್ಯಕ್ಷ ನಾಗರಾಜ ಕಡಬೂರ, ಮಾಜಿ ಅಧ್ಯಕ್ಷ ನಾಗರಾಜ ಬಂಕಲಗಾ, ಸದಸ್ಯ ಸುರೇಶ ಬೆನಕನಹಳ್ಳಿ, ಪ್ರತಾಪ ಮುಕ್ತೆದಾರ, ಅಬ್ದುಲ್ ಸಲಿಂ, ವಿಷ್ಣು ಜಿತುರೆ, ಯೋಜನಾಧಿಕಾರಿ ವೆಂಕಟೇಶ ಗುತ್ತೇದಾರ, ಪ್ರದಸ ಮಲ್ಲಿಕಾರ್ಜುನ ಇದ್ದರು.
---