ಪಾಳು ಬಿದ್ದ ಬೀಜೋತ್ಪಾದನೆ ಕೇಂದ್ರ
ಶಹಾಪುರ: ತಾಲೂಕಾ ಕೇಂದ್ರದಿಂದ ಕೇವಲ 12 ಕಿ.ಮೀ. ಅಂತರದಲ್ಲಿ ಬೀದರ್- ಬೆಂಗಳೂರ ರಾಜ್ಯ ಹೆದ್ದಾರಿಗೆ ಬರುವ ಹತ್ತಿಗೂಡೂರ ಗ್ರಾಮಕ್ಕೆ ಹೊಂದಿಕೊಂಡಿರುವ ಸರ್ಕಾರದ ಕೃಷಿ ಇಲಾಖೆಯ 52 ಎಕರೆ ಪ್ರದೇಶದ ಬೀಜೋತ್ಪಾದನಾ ಕೇಂದ್ರ ಸಂಪೂರ್ಣ ಕಳಾಹೀನವಾಗಿ ಕಂಡವರ ಲಗ್ನದಲ್ಲಿ ಉಂಡವನೇ ಜಾಣ ಎಂಬಂತಹ ಸ್ಥಿತಿಯಾಗಿದ್ದು, ಯಾವ ಉದ್ದೇಶದಿಂದ ಬೀಜೋತ್ಪಾದನಾ ಕೇಂದ್ರ ಪ್ರಾರಂಭವಾಗಿದೆ.
ಅದನ್ನು ಬೆಳೆಸುವ ದಿಸೆಯಲ್ಲಿ ಇಡೀ ಭೂಮಿ ಹೆಸರಿಗೆ ಮಾತ್ರವೆಂಬಂತಾಗಿದ್ದು, ಹಾಳುಬಿದ್ದ ವಾತಾವರಣ ನಿರ್ಮಾಣವಾಗಿದೆ. ಹತ್ತಿಗೂಡೂರ ಪ್ರಸ್ತುತವಾಗಿ ಕೃಷ್ಣಾಮೇಲ್ದಂಡೆ ಯೋಜನೆ ನೀರಾವರಿಯಿಂದ ಕೃಷಿಯಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತಿದ್ದು, ಇಲ್ಲಿನ ರೈತರು ಆರ್ಥಿಕವಾಗಿ ಸಧೃಢರಾಗಲು ಉತ್ತಮ ಇಳುವರಿ ಬೀಜ ದೊರಕುವಂತಾಗಬೇಕು. ಸ್ವಾವಲಂಬಿ ಬದುಕು ಕಂಡುಕೊಂಡು ಗ್ರಾಮಗಳ ಅಭಿವೃದ್ಧಿ ಯಾಗಬೇಕು. ದೂರದೃಷ್ಟಿಯಿಂದ 1952 ರಲ್ಲಿ ಅಂದಿನ ಹತ್ತಿಗೂಡೂರದ ಧೀಮಂತನಾಯಕರಾಗಿದ್ದ ಸಾವೂರು ಶಿವಣ್ಣ ಬೀಜೋತ್ಪಾದನಾ ಕೇಂದ್ರಕ್ಕೆ 52 ಎಕರೆ ಭೂಮಿಯನ್ನು ಕೃಷಿ ಇಲಾಖೆಗೆ ದೊರಕಿಸಿಕೊಟ್ಟು ರೈತರ ಮುಂದಿನ ಭವಿಷ್ಯದ ಭದ್ರವಾಗಲೆಂದು ಬಯಸಿದ್ದರು.
ಫಲವತ್ತತೆಗೆ ತಕ್ಕಂತೆ ಬೆಳೆಯಿಲ್ಲ: ಬಹುತೇಕ ಭೂಮಿ ಬೀಳು ಬಿದ್ದಿದ್ದು, ಕಾಟಾಚಾರಕ್ಕೆ ತೊಗರಿ, ಬಿಳಿಜೋಳ, ಕಡಲೆ ಬಿತ್ತನೆ ಮಾಡಿದ್ದು ಭೂಮಿಯ ಫಲವತ್ತತೆಗೆ ತಕ್ಕಂತೆ ಬೆಳೆಯುತ್ತಿಲ್ಲ. ಕಾಟಾಚಾರಕ್ಕೆ ಲೆಕ್ಕ ತೋರಿಸುವ ಕೆಲಸ ನಡೆದಿದ್ದು, ಬೀಜೋತ್ಪಾದನೆಯ ಸಾರ್ಥಕವಾದ ಉದ್ದೇಶ ನೆರವೇರಿಲ್ಲ. ಕೃಷಿ ಇಲಾಖೆಯ ವತಿಯಿಂದ ಸಾಗುವಳಿ ಮಾಡಲು ಇರುವ ಸಲಕರಣೆಗಳು ತುಕ್ಕು ಹಿಡಿದಿವೆ ನೀರು ಸರಬರಾಜಿಗೆ ಪೈಪ್ಲೈನ್ ಮಾಡದೆ, ಕಾಲುವೆ ನೀರು ಅಥವಾ ಮಳೆಯನ್ನೆ ಅವಲಂಬಿಸಿದಂತಾಗಿದೆ. ಹತ್ತಿಗೂಡೂರ ಸುತ್ತಲಿನ ರೈತರಿಗಂತು ಇದು ಬೀಜೋತ್ಪಾದನಾ ಕೇಂದ್ರವೆನಿಸದೆ, ಯಾರೋ ಪಾಲಿಗೆ ಮಾಡುತ್ತಿರುವ ಹೊಲವೆಂಬಂತಾಗಿದೆ. ಈ ಭಾಗದ ಜನಪ್ರತಿನಿಧಿಗಳು ಬೀಜೋತ್ಪಾದನಾ ಕೇಂದ್ರದ ಬಗ್ಗೆ ಕಾಳಜಿ ವಹಿಸುವುದು ಸೂಕ್ತವಾಗಿದೆ.
ಆಗಬೇಕಾದ ಕಾರ್ಯಗಳು: ಜಲಾನಯನ ಇಲಾಖೆಯ ಮುಖಾಂತರ ಈಗಿರುವ ವಿಸ್ತಾರ ಪ್ರದೇಶದಲ್ಲಿ ಕೃಷಿ ಹೊಂಡಗಳ ನಿರ್ಮಾಣ ಸಮೀಪದ ರಸ್ತಾಪುರ ಹಳ್ಳದಿಂದ ಪೈಪಲೈನ್ ಜೋಡಣೆ ಮೂಲಕ ನೀರು ಸರಬರಾಜು ಕಾಲುವೆ ಮೂಲಕ ಸಮರ್ಪಕ ನೀರು ಬಳಸಿಕೊಳ್ಳುವಂತೆ ಮಾಡಬೇಕಾಗಿದೆ. ಹಿಂದಿನ ನಾಯಕರು ಸಾಕಷ್ಟು ಮುಂದಾಲೋಚನೆಯಿಂದ ಮಾಡಿರುವ ಉದ್ದೇಶಿತ ಬೀಜೋತ್ಪಾದನಾ ಕೇಂದ್ರಕ್ಕೆ ಹೊಸ ಸ್ವರೂಪ ನೀಡುವುದು ಅಗತ್ಯತೆಗಳಲ್ಲಿ ಒಂದಾಗಿದೆ.
ಶೂನ್ಯ ಸಾಧನೆ
1965ರಲ್ಲಿ ಅಧಿಕೃತವಾಗಿ ಕೃಷಿ ಇಲಾಖೆ ವತಿಯಿಂದ ಬೀಜೋತ್ಪಾದನಾ ಕೇಂದ್ರಕ್ಕೆ ಭೂಮಿ ಹಸ್ತಾಂತರವಾದ ನಂತರ ಈ ವರೆಗೂ ಸಾಧಿಸಿದ್ದು ಶೂನ್ಯ. ಹತ್ತಿಗೂಡೂರ ಗ್ರಾಮಕ್ಕೆ ಹೊಂದಿಕೊಂಡಿರುವಂತೆ ಕೊಂಗಂಡಿ, ರಸ್ತಾಪುರ, ಯಕ್ಚಿಂತಿ, ಹೈಯಾಳ, ಗೌಡೂರು, ಟೊಣ್ಣೂರ, ಕೊಳ್ಳೂರ, ಅನಕಸುಗೂರ, ಮುನಮುಟಗಿ, ಬಿರ್ನೂರ, ಸಆವೂರ, ಇನ್ನಿತರ ಕನಿಷ್ಠ ನಲವತ್ತು ಗ್ರಾಮಗಳಿಗೆ ಈ ಬೀಜೋತ್ಪಾದನಾ ಕೇಂದ್ರದಿಂದ ಉಪಯೋಗವಾಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.