ಮಕ್ಕಳ ವಿಜ್ಞಾನ ಮೇಳದಲ್ಲಿ ವಿಜೃಂಭಿಸಿದ ತಂತ್ರಜ್ಞಾನ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಡಿ.9
ಇಲ್ಲಿನ ವಿಜ್ಞಾನ ಕೇಂದ್ರದ ಅಂಗಳ ಸೋಮವಾರ ಮಕ್ಕಳು ಹಾಗೂ ಅವರು ಮಾಡಿರುವ ತರಹೇವಾರಿ ವಿಜ್ಞಾನ- ಗಣಿತ ವಿಷಯಗಳ ಪ್ರಾತ್ಯಕ್ಷಿಕೆಗಳಿಂದಲೇ ತುಂಬಿ ಹೋಗಿತ್ತು. ತಾಲೂಕಿನಿಂದ ಬಂದಿದ್ದ ನೂರಾರು ಮಕ್ಕಳು ತಮ್ಮೊಂದಿಗೆ ಕೃಷಿ, ಶಕ್ತಿ, ಸಂಪನ್ಮೂಲ ಬಳಕೆ, ಪರಿಸರ ಜಾಗೃತಿ, ಕೃಷಿ ಸಂಸ್ಕೃತಿಯಂತಹ ಹತ್ತು ಹಲವು ಶೀರ್ಷಿಕೆಗಳನ್ನು ಆಧಾರವಾಗಿಟ್ಟುಕೊಂಡು ಪ್ರದರ್ಶಿಸಿದ್ದ ಪ್ರಾತ್ಯಕ್ಷಿಕೆಗಳು ಸಾರ್ವಜನಿಕರ ಗಮನ ಸೆಳೆದವು.
ಪ್ರತಿ ತಾಲೂಕಿನಿಂದ 6 ತಂಡಗಳಂತೆ ನೂರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿದ್ದ ಮಕ್ಕಳು ಅರಳು ಹುರಿದಂತೆ ಮಾಹಿತಿ ನೀಡುತ್ತ ತಮ್ಮ ಪ್ರತಿಭೆ ಮೆರೆದರು. 48 ತಂಡಗಳು ಬರಬೇಕಿತ್ತು. ಬಂದದ್ದು 42 ತಂಡಗಳು. ತಂಡಗಳಲ್ಲಿನ ಭಾಗವಹಿಸುವ ಆಸಕ್ತಿ ಅದಮ್ಯ. ಇದರಿಂದ ಮಕ್ಕಳಲ್ಲಿನ ವಿಜ್ಞಾನ ಪ್ರತಿಭೆ, ಆಸಕ್ತಿ ಇಮ್ಮಡಿಯಾಗಿದೆ ಎಂದು ಹೇಳಬಹುದು ಎನ್ನುತ್ತಾರೆ ಜಿಲ್ಲಾ ವಿಜ್ಞಾನಾಧಿಕಾರಿ ಸಿಎನ್ ಲಕ್ಷ್ಮೀನಾರಾಯಣ.
ವಿಜ್ಞಾನ- ತಂತ್ರಜ್ಞಾನ ಮೇಲು: ಪ್ರತಿ ಶಿಕ್ಷಣ ಬ್ಲಾಕ್ನಿಂದ 6 ತಂಡಗಳಂತೆ ಮಕ್ಕಳು, ಶಿಕ್ಷಕರು ಭಾಗವಹಿಸಿದ್ದಾರೆ. ಜಿಲ್ಲೆಯಲ್ಲಿನ ಮಕ್ಕಳಲ್ಲಿನ ವಿಜ್ಞಾನ- ತಂತ್ರಜ್ಞಾನ ಜಾಣತನ ಪ್ರದರ್ಶನಕ್ಕೆ ಈ ಮೇಳ ವೇದಿಕೆ ಎಂದು ಕಮಲಾಪುರ ಡಯಟ್ ಪ್ರಾಚಾರ್ಯರಾಗಿರುವ ಮೆಹರುನ್ನಿಸಾ ಬೇಗಂ ಹೇಳಿದ್ದಾರೆ.
ಕಮಲಾಪುರ ಡಯಟ್ ಹಾಗೂ ಜಿಲ್ಲಾ ವಿಜ್ಞಾನ ಕೇಂದ್ರದ ಸಹಯೋಗದಲ್ಲಿನ ಈ ವಿಜ್ಞಾನ ಮೇಳ ವಿಜ್ಞಾನ ಕೇಂದ್ರದ ಅಂಗಳದಲ್ಲಿ ಮಂಗಳವಾರ ಇಡೀ ದಿನ ನೋಡಲು ಲಭ್ಯವಿರುತ್ತದೆ. ಗುಲ್ಬರ್ಗ ಶಿಕ್ಷಣಾಯುಕ್ತಾಲಯದ ಹೆಚ್ಚುವರಿ ಆಯುಕ್ತ ರಾಧಾಕೃಷ್ಣರಾವ ಮದನಕರ್ ಉದ್ಘಾಟಿಸಿದ ಮೇಳದಲ್ಲಿ ಮಟೇರಿಯಲ್ ಸೈನ್ಸ್ ವಿಭಾಗ ಮುಖ್ಯಸ್ಥ ಡಾ. ಅಂಬಿಕಾ ಪ್ರಸಾದ್, ಕಮಲಾಪುರ ಡಯಟ್ ಪ್ರಾಚಾರ್ಯೆ ಮೆಹರುನ್ನೀಸಾ ಬೇಗಂ, ಜಿಲ್ಲಾ ವಿಜ್ಞಾನಾಧಿಕಾರಿ ಲಕ್ಷ್ಮೀನಾರಾಯಣ ಭಾಗವಹಿಸಿದ್ದರು.
ಇಂದು ಸಮಾರೋಪ: ಡಿ.10ರ ಸಂಜೆ 4 ಗಂಟೆಗೆ ಪಾರಿತೋಷಕ ವಿತರಣೆ ಸಮಾರಂಭ ನಡೆಯಲಿದ್ದು, ಶಿಕ್ಷಣಾಯುಕ್ತಾಲಯದ ಜಂಟಿ ನಿರ್ದೇಶಕ ಸಿ.ವಿ. ಹಿರೇಮಠ, ಗಣಿತ ವಿಭಾಗದ ಪ್ರೊಫೆಸರ್ ಡಾ. ನಡವಿನಮನಿ, ಕಮಲಾಪುರ ಡಯಟ್ ಪ್ರಾಚಾರ್ಯರಾದ ಮೆಹರುನ್ನೀಸಾ ಬೇಗಂ ಭಾಗವಹಿಸುತ್ತಿದ್ದಾರೆ. ಬೆಳಗಿನ 9ರಿಂದ ಸಂಜೆ 6ರ ವರೆಗೂ ವಿಜ್ಞಾನ ಮೇಳ, ಪ್ರದರ್ಶಿಕೆಗಳನ್ನು ನೋಡಲು ಅವಕಾಶ ಕಲ್ಪಿಸಲಾಗಿದೆ ಎಂದು ವಿಜ್ಞಾನ ಕೇಂದ್ರದ ಪ್ರಕಟಣೆ ತಿಳಿಸಿದೆ.
ಈ ಬಾರಿಯ ಮೇಳದಲ್ಲಿ ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಸಂಶೋಧನೆಯ ಸಂಗತಿಗಳ ಬಗ್ಗೆ ಪ್ರಾತ್ಯಕ್ಷಿಕೆಗಳನ್ನು ಮಕ್ಕಳು ಸಿದ್ಧಪಡಿಸಿ ಭಾಗವಹಿಸುತ್ತಿರುವುದು ವಿಶೇಷ. ಭಾಗವಹಿಸಿರುವ 42 ತಂಡಗಳಲ್ಲಿ ನಗದು ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ನೀಡುವ ಮೂಲಕ ಬೆನ್ನು ತೆಟ್ಟಲಾಗುತ್ತದೆ ಎಂದು ಕಮಲಾಪುರ ಡಯಟ್ನ ಮೆಹರುನ್ನೀಸಾ ಬೇಗಂ ಹೇಳಿದ್ದಾರೆ.