ಸಿಎಂ ತಾತ್ಕಾಲಿಕ ಪ್ರವಾಸ ಕಾರ್ಯಕ್ರಮ
ಗುಲ್ಬರ್ಗ: ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು ಡಿ.11ರಂದು ಬೆ.12.30ಕ್ಕೆ ಚಿಂಚೋಳಿ ತಾಲೂಕಿನ ಸೋನ್ಯಾಲಗಿರಿ ಹೆಲಿಪ್ಯಾಡಿಗೆ ಆಗಮಿಸಿ, ಮ.1ಕ್ಕೆ ಸೋನ್ಯಾಲಗಿರಿ ಪಂಗರಗಾದಲ್ಲಿ ಬಂಜಾರ ಜನಾಂಗದ ಧಾರ್ಮಿಕ ಗುರು ಪಂಚಾಕ್ಷರಿ ಪರ್ವತಲಿಂಗ ಪರಮೇಶ್ವರ ಮಹಾರಾಜರ ಲೋಕ ಕಲ್ಯಾಣ ಅನುಷ್ಠಾನ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮ.2.45ಕ್ಕೆ ಹೆಲಿಕಾಪ್ಟರ್ ಮೂಲಕ ಬಳ್ಳಾರಿ ಜಿಲ್ಲೆಯ ಜಿಂದಾಲ್ ಏರ್ಸ್ಟ್ರಿಪ್ ತೋರಣಗಲ್ಲಿಗೆ ಪ್ರಯಾಣಿಸುವರು.
ಜವಳಿ ಸಚಿವರ ಪ್ರವಾಸ
ಜವಳಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಬಾಬುರಾವ್ ಚಿಂಚನಸೂರ ಡಿ.11ರಂದು ಗುಲ್ಬರ್ಗಕ್ಕೆ ಆಗಮಿಸಲಿದ್ದು, ಅಂದು ಸಚಿವರ ಕಾರ್ಯಕ್ರಮ ಕಾಯ್ದಿರಿಸಲಾಗಿದೆ. ಅಂದು ಬೆ.9ಕ್ಕೆ ಗುಲ್ಬರ್ಗದಿಂದ ಚಿಂಚೋಳಿ ತಾಲೂಕಿನ ಸುಕ್ಷೇತ್ರ ಸೋನ್ಯಾಲಗಿರಿಗೆ ಪ್ರಯಾಣಿಸಿ ಅಲ್ಲಿ ಜರುಗುವ ಮಹಾತಪಸ್ವಿ ಪಂಚಶ್ರೀ ಪರ್ವತಲಿಂಗ ಪರಮೇಶ್ವರ ಮಹಾರಾಜ ಅವರ ತಪಸ್ಸಿನ ಮುಕ್ತಾಯ ಸಮಾರಂಭದಲ್ಲಿ ಭಾಗವಹಿಸುವರು. ಮ.3ಕ್ಕೆ ಅಲ್ಲಿಂದ ಗುಲ್ಬರ್ಗಕ್ಕೆ ಆಗಮಿಸಿ ರಾತ್ರಿ 9ಕ್ಕೆ ಬೆಂಗಳೂರಿಗೆ ಪ್ರಯಾಣಿಸುವರು.
ಇಂದು ಸಮಾವೇಶ
ಗುಲ್ಬರ್ಗ: ಭಾರತ ಸೇನೆಯ 1ನೇ ಜಾಕ್ ಎಲ್ಐನ ಒಂದು ತಂಡ ಪಿಂಚಣಿ ತಾರತಮ್ಯವಿರುವ ಮಾಜಿ ಸೈನಿಕರ ಮತ್ತು ಅವರ ಅವಲಂಬಿತರ ಸಮಾವೇಶವನ್ನು ಡಿ.10ರಂದು ಬೆ.11ಕ್ಕೆ ನಗರದ ಮಿನಿ ವಿಧಾನಸೌಧದಲ್ಲಿರುವ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿ ಹಮ್ಮಿಕೊಂಡಿದೆ. ಬೀದರ, ಗುಲ್ಬರ್ಗ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ಮಾಜಿ ಸೈನಿಕರು ಮತ್ತು ಅವಲಂಬಿತರು ತಮ್ಮ ಪಿಂಚಣಿಗೆ ಸಂಬಂಧಿಸಿದಂತೆ ತಾರತಮ್ಯವಿದ್ದಲ್ಲಿ ಸಮಾವೇಶಕ್ಕೆ ಆಗಮಿಸಿ ಸರಿಪಡಿಸಿಕೊಳ್ಳಬೇಕೆಂದು ಕೋರಿದ್ದಾರೆ.
ಮೊಗ್ಗು, ಹೂವು ಉದುರುವಿಕೆ: ಸಲಹೆ
ಗುಲ್ಬರ್ಗ: ಜಿಲ್ಲೆಯಲ್ಲಿ ಇತ್ತೀಚಿಗೆ ತಂಪಾದ ಗಾಳಿಯಿಂದ ಹಾಗೂ ಇಬ್ಬನಿಯಿಂದ ತೊಗರಿ ಮತ್ತು ಕಡಲೆ ಬೆಳೆಯಲ್ಲಿ ಮೊಗ್ಗು ಮತ್ತು ಹೂವು ಉದುರುವಿಕೆ ಕಂಡು ಬಂದಿದೆ. ಮುಂಜಾಗ್ರತಾ ಕ್ರಮವಾಗಿ ರೈತರು ಮೊಗ್ಗು ಮತ್ತು ಹೂವು ಉದುರುವಿಕೆ ತಡೆಗೆ ನ್ಯಾಪ್ತಲೀನ್ ಅಸಿಟಿಕ ಅಸಿಡ್ ಆಮ್ಲವನ್ನು (ಪ್ಲಾನೋಪಿಕ್ಸ) ಪ್ರತಿ ಲೀಟರ್ ನೀರಿಗೆ 0.5 ಮಿ.ಲೀ. ಬೆರೆಸಿ ಸಿಂಪಡಿಸುವಂತೆ ಗುಲ್ಬರ್ಗ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಪ್ರತಿಭಾ ಕಾರಂಜಿ
ಗುಲ್ಬರ್ಗ: ಶಹಾಬಜಾರದ ಚನ್ನಮಲ್ಲೇಶ್ವರ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಿಇಒ ಭರತರಾಜ ಸಾವಳಗಿ ಕಾರ್ಯಕ್ರಮ ಉದ್ಘಾಟಿಸಿದರು. ಸಿದ್ರಾಮಪ್ಪ, ದೇಶಮುಖ, ಚನ್ನಮಲ್ಲಯ್ಯ ಹಿರೇಮಠ, ಚನ್ನಮಲ್ಲ ಶಿವಾಚಾರ್ಯರು, ಲಗಮಣ, ನಾಗನಾಥ, ಅಂಬಣ್ಣ, ಸಿದ್ದಲಿಂಗ ಕುಲಕರ್ಣಿ, ಪ್ರಭುಲಿಂಗ, ಶಂಕ ಬನಶೆಟ್ಟಿ, ಲಕ್ಷ್ಮೀದೇವಿ, ವಿದ್ಯಾರ್ಥಿಗಳಿದ್ದರು.