ಹಿಪ್ಪರಗಾ ಪಿಡಿಒ 'ಲೋಕಾ' ಬಲೆಗೆ
ಜೇವರ್ಗಿ: ಬಿಲ್ ಪಾವತಿಸಲು 28 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ತಾಲೂಕಿನ ಹಿಪ್ಪರಗಾ(ಎಸ್.ಎನ್) ಗ್ರಾಪಂ ಅಭಿವೃದ್ಧಿ ಅಧಿಕಾರಿ ವಾಚಪ್ಪ ಕೇಶಪ್ಪ ಲಮಾಣಿ ಸೋಮವಾರ ಸಂಜೆ ಪಟ್ಟಣದ ಬಿಜಾಪುರ ರಸ್ತೆಯಲ್ಲಿರುವ ಜ್ಯೋತಿ ಹೊಟೇಲ್ನಲ್ಲಿ ಲೋಕಾಯುಕ್ತರು ಬೀಸಿರುವ ಬಲೆಗೆ ಸಿಲುಕಿದ್ದಾನೆ.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ತಾಲೂಕಿನ ಹಿಪ್ಪರಗಾ ಗ್ರಾಪಂ ಕಾಂಪೌಂಡ್ ನಿರ್ಮಿಸಲು ಸರ್ಕಾರ 2.80 ಲಕ್ಷ ಮಂಜೂರು ಮಾಡಿತ್ತು. ಅದರಂತೆ ಕಾಮಗಾರಿ ಪೂರ್ಣಗೊಂಡ ನಂತರ ಬಿಲ್ ಪಾವತಿಸಲು ಕಾಮಗಾರಿ ಪಡೆದ ವ್ಯಕ್ತಿಗೆ ಒಟ್ಟು ಮೊತ್ತದ ಶೇ.10ರಷ್ಟು ಹಣವನ್ನು ಲಂಚದ ರೂಪದಲ್ಲಿ ನೀಡಬೇಕೆಂದು ಗ್ರಾಪಂ ಅಧ್ಯಕ್ಷೆ ಹಾಗೂ ಅಭಿವೃದ್ಧಿ ಅಧಿಕಾರಿ ಬೇಡಿಕೆ ಇಟ್ಟಿದ್ದರು.
ಅದರಂತೆ ಹಿಪ್ಪರಗಾ ನಿವಾಸಿ ಹಾಜಿ ಮಲಂಗ್ ಅಬ್ದುಲ್ಸಾಬ್ ಮಲ್ಲಾಬಾದಿ ಎಂಬುವವರಿಂದ ಲಂಚ ಸ್ವೀಕರಿಸುತ್ತಿದ್ದಾಗ ಅಭಿವೃದ್ಧಿ ಅಧಿಕಾರಿ ವಾಚಪ್ಪ ಅವರನ್ನು ಬಂಧಿಸಲಾಗಿದೆ. ಲಂಚದ ಬೇಡಿಕೆ ಇಟ್ಟ ಗ್ರಾಪಂ ಅಧ್ಯಕ್ಷೆ ಜೈಬನ್ಬಿ ಖಾಸಿಂಪಟೇಲ್ ಯಾಳವಾರ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಲೋಕಾಯುಕ್ತ ಡಿವೈಎಸ್ಪಿ ಮರಿಬಾಶೆಟ್ಟಿ ನೇತೃತ್ವದ ದಾಳಿಯಲ್ಲಿ ಇನ್ಸಪೆಕ್ಟರ್ಗಳಾದ ಜೇಮ್ಸ್, ತಮ್ಮರಾಯ ಹಾಗೂ ಸಿಬ್ಬಂದಿ ಅನೀಲ್, ಪ್ರಹ್ಲಾದ್, ಪ್ರದೀಪ್, ಫಹೀಮ್, ಲಿಂಗಣ್ಣ ಪಾಲ್ಗೊಂಡಿದ್ದರು.
--