ಅಪರಾಧ ಸುದ್ದಿಗಳು
ಇಂದು ಗಾನ ಶ್ರದ್ಧಾಂಜಲಿ
ಗುಲ್ಬರ್ಗ: ಅಫಜಲ್ಪುರ ತಾಲೂಕಿನ ಗೊಬ್ಬೂರ (ಬಿ) ಗ್ರಾಮದ ಖ್ಯಾತ ಆಕಾಶವಾಣಿ ಕಲಾವಿದ, ರಾಜ್ಯ ಪ್ರಶಸ್ತಿ ವಿಜೇತ ಲಿಂ. ಚನ್ನವೀರ ಗವಾಯಿಗಳ ಶ್ರದ್ಧಾಂಜಲಿ ಕಾರ್ಯಕ್ರಮದ ಅಂಗವಾಗಿ ಅವರ ಅಭಿಮಾನಿಗಳು ಡಿ.11 ರಂದು ರಾತ್ರಿ 9ಕ್ಕೆ ಗೊಬ್ಬೂರ (ಬಿ) ಗ್ರಾಮದ ಮೌನೇಶ್ವರ ದೇವಸ್ಥಾನದ ಆವರಣದಲ್ಲಿ ಸಂಗೀತ ಕಚೇರಿ ನಡೆಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಹಲವಾರು ಚನ್ನವೀರ ಗವಾಯಿಗಳ ಅಭಿಮಾನಿಗಳು ಪಾಲ್ಗೊಂಡು ಸಂಗೀತ ಸೇವೆ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು, ಸಾರ್ವಜನಿಕರು ಭಾಗವಹಿಸಬೇಕೆಂದು ಗವಾಯಿಗಳ ಅಭಿಮಾನಿಗಳಾದ ರಾಚಪ್ಪ ಜಿ. ಹುಮನಾಬಾದ್, ಬಸವರಾಜ ಪಡಶೆಟ್ಟಿ, ಆನಂದ ರ್ಯಾಕಾ, ಬಸವರಾಜ ಬಟ್ಟರಕಿ, ರವಿಶಂಕರ ಕುಲಾಲಿ, ಸಂತೋಷ ವಿಶ್ವಕರ್ಮ, ವೀರೇಶ ಪೋದ್ದಾರ ಕೋರಿದ್ದಾರೆ.
ಮನೆ ಹಂಚಲು ಆಗ್ರಹ
ಜೇವರ್ಗಿ: ತಾಲೂಕಿನ ಯಡ್ರಾಮಿ ಗ್ರಾಮದಲ್ಲಿ ಅರ್ಹ ಫಲಾನುಭವಿಗಳಿಗೆ ಇಂದಿರಾ ಆವಾಸ್ ಯೋಜನೆಯಡಿಯಲ್ಲಿ ಮನೆಗಳನ್ನು ವಿತರಿಸಬೇಕೆಂದು ಕರ್ನಾಟಕ ಕನ್ನಡ ಸೇನೆಯ ತಾಲೂಕು ಘಟಕದ ಅಧ್ಯಕ್ಷ ರಾಜು ನಾಯಕ ಶಿರವಾಳ ಒತ್ತಾಯಿಸಿದ್ದಾರೆ. ಅವರು ಈ ವಿಷಯವಾಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಗ್ರಾಮ ಸಭೆಯಲ್ಲಿ ಆಯ್ಕೆ ಮಾಡಿದ ಮನೆಗಳನ್ನು ಮರು ಪರಿಶೀಲನೆ ಮಾಡಿ, ಅರ್ಹ ಫಲಾನುಭವಿಗಳಿಗೆ ಇಂದಿರಾ ಆವಾಸ್ ಮನೆಗಳನ್ನು ಹಂಚಿಕೆ ಮಾಡಬೇಕೆಂದು ಅವರು ಮನವಿ ಪತ್ರದ ಮೂಲಕ ಆಗ್ರಹಿಸಿದ್ದಾರೆ.
ನಾಳೆ ಅಭಿಯಾನ
ಗುಲ್ಬರ್ಗ: ಹೈದ್ರಬಾದ್ ಕರ್ನಾಟಕ ಮುಸ್ಲಿಂ ಫೋರಂ ಜಿಲ್ಲಾ ಘಟಕದ ವತಿಯಿಂದ ಡಿ.12ರಂದು ಬೆ.10ಕ್ಕೆ ನಗರದ ಜಾಮಾ ಮಸೀದಿ ಫಂಕ್ಷನ್ ಹಾಲ್‌ನಲ್ಲಿ ಸಂವಿಧಾನದ 371(ಜೆ)ನೇ ಕಲಂ ಕುರಿತು ತಿಳಿವಳಿಕೆ ಹಾಗೂ ಜನಜಾಗೃತಿ ಅಭಿಯಾನದ ಸಾರ್ವಜನಿಕ ಸಭೆ ಕರೆಯಲಾಗಿದೆ. ಮಾಜಿ ಸಚಿವ ಸಿ.ಗುರುನಾಥ, ಶಹಾಬಾದ್ ನಗರಸಭೆ ಅಧ್ಯಕ್ಷ ಗಿರೀಶ ಕಮನೂರ, ಹೈ.ಕ. ಜನಪರ ಸಂಘರ್ಷ ಸಮಿತಿಯ ಅಧ್ಯಕ್ಷ ಲಕ್ಷ್ಮಣ ದಸ್ತಿ, ಡಾ. ಅಬ್ದುಲ್ ರಝಾಕ್, ಶಹಾಬಾದ್ ಪೌರಾಯುಕ್ತ ಗುರುಲಿಂಗಪ್ಪ, ಸರ್ಕಲ್ ಇನ್ಸ್‌ಪೆಕ್ಟರ್ ವಿಜಯಕುಮಾರ್, ಅಂಜುಮನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಹೀಂ ಮರ್ಚಂಟ್, ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯ ಜನಪರ, ಪ್ರಗತಿಪರರು, ಕನ್ನಡಪರ, ದಲಿತ, ಹಿಂದುಳಿದ, ಅಲ್ಪಸಂಖ್ಯಾತರ, ರೈತ, ಕಾರ್ಮಿಕ, ವಿದ್ಯಾರ್ಥಿ ಪರ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮಹ್ಮದ್ ಉಬೇದುಲ್ಲಾ ತಿಳಿಸಿದ್ದಾರೆ.