ಆರಕ್ಷಕರಿಗೆ ರಕ್ಷಣೆ ಇಲ್ಲ..!
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಕೆಂಭಾವಿ ಡಿ.10
ಎಲ್ಲರ ರಕ್ಷಣೆ ಹೊಣೆ ಹೊತ್ತ ಆರಕ್ಷಕರಿಗೆ ಸೂಕ್ತ ರಕ್ಷಣೆ ಇಲ್ಲವಾಗಿದ್ದು, ಪಟ್ಟಣದ ಪೊಲೀಸ್ ಠಾಣೆ ಸಿಬ್ಬಂದಿಗಳಿಗೆಂದು ಮೂರು ದಶಕಗಳ ಹಿಂದೆ ನಿರ್ಮಿಸಲಾಗಿದ್ದ ವಸತಿ ನಿಲಯ ಸಂಪೂರ್ಣ ಶಿಥಿಲಗೊಂಡಿದೆ.
ಇಲ್ಲಿನ ವರ್ತುಲ ರಸ್ತೆಯಲ್ಲಿರುವ ಕಾಡಾ ಕ್ಯಾಂಪ್ ಬಳಿಯ ಪೊಲೀಸ್ ವಸತಿ ನಮಿಲಯಕ್ಕೆ ನೀರು ಬಾರದೇ ಅಲ್ಲಿ ವಾಸಿಸುವ ಪೊಲೀಸರು ತೊಂದರೆ ಅನುಭವಿಸುವಂತಾಗಿದೆ. ಪ್ರತಿ ಮನೆಗೊಂದು ನಲ್ಲಿ ಕೂಡಿಸಲಾಗಿದ್ದರೂ ನೀರು ಮಾತ್ರ ಬರುವುದಿಲ್ಲ. ಯಾವಾಗಲೋ ಒಮ್ಮೆ ಬಂದರೆ ಅದು ಎರಡು ಮೂರು ಕೊಡ ಮಾತ್ರ...!
ನರಕ ಯಾತನೆ: ಒಂದು ಕಡೆ ಸಂಪೂರ್ಣ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳು, ಇನ್ನೊಂದೆಡೆ ಕುಡಿಯುವ ನೀರಿನ ಸಮಸ್ಯೆ ಇವುಗಳ ನಡುವೆ ಇಲ್ಲಿ ವಾಸಿಸುತ್ತಿರುವವರ ಬದುಕು ಒಂದು ನರಕವಾದಂತಾಗಿದೆ. ಕಳೆದ ವರ್ಷ ಅಲ್ಪಸ್ವಲ್ಪ ದುರಸ್ತಿ ಮಾಡಿಸಲಾಗಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ ಮಳೆ ಬಂತೆದರೆ ಪೂರ್ತಿ ಮನೆಯೇ ಸೋರುತ್ತದೆ ಎನ್ನುತ್ತವೆ ಹಲವು ಪೊಲೀಸ್ ಕುಟುಂಬ.
1978ರಲ್ಲಿ ವಸತಿ ನಿಲಯ ನಿರ್ಮಿಸಲಾಗಿದ್ದು, ಇಲ್ಲಿ ವಾಸ ಮಾಡುವ ನಿವಾಸಿಗಳಲ್ಲಿ ಭಯ ಹುಟ್ಟಿಸಿವೆ. ಮಾಳಿಗೆ ಸಿಮೆಂಟ್ ಕಿತ್ತುಹೋಗಿದ್ದು, ತುಕ್ಕು ಹಿಡಿದ ರಾಡ್ ಬಾವಲಿಯಂತೆ ತೂಗಾಡುತ್ತಿವೆ. ಅಲ್ಲಲ್ಲಿ ಬಿರುಕು ಬಿಟ್ಟರುವ ಗೋಡೆಗಳು ಭಯ ಹುಟ್ಟಿಸುವಂತಿವೆ. ಹಿಂದೆ ಹಲವಾರು ಬಾರಿ ಸಿಮೆಂಟ್ ಕಿತ್ತು ಬಿದ್ದಿದ್ದು, ಹಲವರಿಗೆ ಗಾಯಗಳೂ ಆಗಿವೆ.
ಮಳೆ ಬಂತೆಂದರೆ ಸಾಕು ಮನೆಯಲ್ಲಿ ನೀರೋ ನೀರು. ರಾತ್ರಿ ಸಮಯದಲ್ಲಿ ಮಳೆ ಬಂದರೆ ಇವರ ಗತಿ ದೇವರೆ ಬಲ್ಲ. ಇಂತಹ ಪರಿಸ್ಥಿತಿ ಇದ್ದರೂ ಇಲ್ಲಿಯೇ ವಾಸಿಸುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಹೆಸರು ಹೇಳದ ಸಿಬ್ಬಂದಿ.
17 ಸಿಬ್ಬಂದಿ ಸಾಮರ್ಥ್ಯ: ಪಿಎಸ್ಐ ಸೇರಿ 17 ಜನ ಸಿಬ್ಬಂದಿ ವಾಸಿಸುವಂತೆ 1978 ರಲ್ಲಿ ಈ ವಸತಿ ನಿಲಯ ನಿರ್ಮಿಸಲಾಗಿತ್ತು. ಆದರೆ ಠಾಣೆಯಲ್ಲಿ 1 ಪಿಎಸ್ಐ, 3 ಎಎಸ್ಐ, 10 ಜಮಾದಾರ, 27 ಜನ ಪೊಲೀಸ್ ಸಿಬ್ಬಂದಿ ಇದ್ದು, ಇಂತಹ ಕಟ್ಟಡದಲ್ಲಿ ವಾಸಿಸುವುದು ಪೈಪೋಟಿ ಇದೆ.
ಇದಕ್ಕೆ ಇಲ್ಲಿ ಇನ್ನೊಂದು ಕಾರಣವೂ ಇದೆ ಕೆಂಭಾವಿ ಪಟ್ಟಣದಲ್ಲಿ ಮನೆ ಬಾಡಿಗೆ ಪಡೆಯ ಬೇಕೆಂದರೆ ರು. 2,000 ದಿಂದ ರು. 3,000 ಬಾಡಿಗೆ ನೀಡಬೇಕಾಗುತ್ತದೆ. ಆದ್ದರಿಂದ ಸಿಬ್ಬಂದಿ ಅನಿವಾರ್ಯವಾಗಿ ಇತಹ ಶಿಥಿಲ ಕಟ್ಟಡದಲ್ಲಿ ವಾಸಿಸುವಂತಾಗಿದೆ.
ಮೇಲಧಿಕಾರಿಗಳು ಪೊಲೀಸ್ ಠಾಣೆಗೆ ಭೇಟಿ ನೀಡಿದಾಗೊಮ್ಮೆ ವಸತಿ ನಿಲಯದ ಶಾಶ್ವತ ದುರಸ್ತಿ ಮಾಡಲಾಗುವುದು ಎಂದು ಆಶ್ವಾಸನೆ ನೀಡಿ ಹೋಗಿದ್ದಾರೆ ಹೊರತು ಇದುವರೆಗೂ ಶಾಶ್ವತ ದುರಸ್ತಿ ಮಾತ್ರ ಮಾಡಿಲ್ಲ.
ಕಳೆದ ವರ್ಷ ಮಾಡಲಾದ ದುರಸ್ತಿ ಅಷ್ಟಕ್ಕಷ್ಟೇ ಆಗಿದ್ದು, ಮತ್ತೆ ಎಂದಿನಂತೆ ಮುಂದುವರೆದಿದೆ. ನಮ್ಮಕಷ್ಟ ಯಾರಿಗೆ ಹೇಳಿಕೊಳ್ಳಬೇಕು ಎಂದು ಸಿಬ್ಬಂದಿ ಕುಟುಬಂ ವರ್ಗದವರು ಕೈಕಟ್ಟಿ ಕುಳಿತಿದ್ದಾರೆ. ವಸತಿ ನಿಲಯವನ್ನು ಶಾಶ್ವತ ದುರಸ್ತಿ ಮಾಡಿ ಇಲ್ಲಿರುವ ಸಿಬ್ಬಂದಿಗಳಿಗೆ ಅನುಕೂಲ ಮಾಡಿಕೊಡಬೇಕು ಎನ್ನುತ್ತಾರೆ ಸ್ಥಳೀಯರು.