ಸುರಪುರ: ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆ
ಸುರಪುರ: ಇಲ್ಲಿಯ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಹಲವು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ವೇಣುಗೋಪಾಲ ನಾಯಕ ಜೇವಗರ್ ಮಾತನಾಡಿ, ಬೆಲೆ ಏರಿಕೆ ಮತ್ತು ಭಯೋತ್ಪಾದನೆ ತಡೆಯುವಲ್ಲಿ ಕೇಂದ್ರದ ಯುಪಿಎ ಸರ್ಕಾರ ಸಂಪೂರ್ಣ ವಿಫಲಗೊಂಡಿದೆ. ಹೀಗಾಗಿ ನಾಲ್ಕು ರಾಜ್ಯಗಳಲ್ಲಿ ಜನತೆ ಬಿಜೆಪಿ ಬೆಂಬಲಿಸಿದ್ದಾರೆ ಎಂದರು. ರಾಷ್ಟ್ರ ಮತ್ತು ರಾಜ್ಯದಲ್ಲಿ ಈಗಾಗಲೇ ಅನೇಕ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಇದರಂತೆ ತಾಲೂಕಿನಲ್ಲಿ ಅನೇಕರು ಬಿಜೆಪಿಗೆ ಬಂದಿದ್ದಾರೆ. ಇದರಿಂದ ಪಕ್ಷಕ್ಕೆ ಆನೆಬಲ ಬಂದಿದೆ ಎಂದು ತಿಳಿಸಿದರು. ಬಿಜೆಪಿ ಘಟಕದ ತಾಲೂಕು ಅಧ್ಯಕ್ಷ ಮಲ್ಲೇಶಿ ಪಾಟೀಲ್ ಮಾತನಾಡಿದರು. ಸೇರ್ಪಡೆಯಾದವರಿಗೆ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು. ಪಕ್ಷದ ಹೋರಾಟ ಮತ್ತು ಬೆಳವಣಿಗೆ ಬಗ್ಗೆ ತಿಳಿಸಿದರು. ಬಿಜೆಪಿ ತಾಲೂಕು ಕಾರ್ಯದರ್ಶಿ ಗೋಪಾಲನಾಯಕ, ನಾರಾಯಣರಾವ್ ಬಳಗಾನೂರ, ನಾಗರಾಜ ಪ್ರಧಾನಿ, ಅನೀಲ ಗುತ್ತೇದಾರ್ ಇದ್ದರು.