29 ರಂದು ದೆಹಲಿಯಲ್ಲಿ ರ್ಯಾಲಿ
ಕ.ಪ್ರ.ವಾರ್ತೆ, ಗುಲ್ಬರ್ಗ, ಡಿ. 11
ದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಎಐಎಂಎಸ್ಎಸ್, ಎಐಡಿಎಸ್ವೈಒ ಮತ್ತು ಎಐಡಿಎಸ್ಒ ಮೂರು ಸಂಘಟನೆಗಳು ಡಿ.29 ರಂದು ದೆಹಲಿಯಲ್ಲಿ ರಾಷ್ಟ್ರಮಟ್ಟದ ಪ್ರತಿಭಟನಾ ರ್ಯಾಲಿ ಮತ್ತು ಸಮಾವೇಶ ಸಂಘಟಿಸಲು ನಿರ್ಧರಿಸಿವೆ.
ಅಂದು ನಡೆಯುವ ಸಮಾವೇಶವನ್ನು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಉದ್ಘಾಟಿಸುವರು. ನಿವೃತ್ತ ಲೋಕಾಯುಕ್ತ ಸಂತೋಷ ಹೆಗಡೆ, ಬಾಂಬೆ ಹೈಕೋರ್ಟ್ ನ್ಯಾ. ಸುರೇಶ ಹೊಸಬೆಟ್, ಚಿತ್ರನಟಿ, ಸಾಮಾಜಿಕ ಕಾರ್ಯಕರ್ತೆ ದೀಪ್ತಿ ನವಾಲ್ ಮುಂತಾದ ನ್ಯಾಯವಾದಿಗಳು, ಕಲಾವಿದರು, ಶಿಕ್ಷಣ ತಜ್ಞರು, ಯುವಜನರು, ಮಹಿಳೆಯರು ಪಾಲ್ಗೊಳ್ಳಲಿದ್ದಾರೆಂದು ಎಐಡಿಎಸ್ಒ ರಾಜ್ಯ ಕಾರ್ಯದರ್ಶಿ ಡಾ. ಪ್ರಮೋದ ಎನ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ, ದೆಹಲಿಯಲ್ಲಿ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ನಿರ್ಭಯ 6 ಜನರಿಂದ ಘೋರ ಅತ್ಯಾಚಾರಕ್ಕೆ ಒಳಗಾಗಿ ಕಳೆದ ಡಿ.29 ರಂದು ಕೊನೆಯುಸಿರೆಳೆದಳು.
ನವದೆಹಲಿಯಲ್ಲಿ ನಡೆದ ಹೋರಾಟದ ಫಲವಾಗಿ ಕೇಂದ್ರ ಸರ್ಕಾರ ನ್ಯಾಯಮೂರ್ತಿ ವರ್ಮಾ ನೇತೃತ್ವದಲ್ಲಿ ಆಯೋಗ ರಚಿಸಿತು. ಆದರೆ, ಆಯೋಗದ ಅನೇಕ ಶಿಫಾರಸ್ಸುಗಳು ಇದುವರೆಗೂ ಅಂಗೀಕಾರವಾಗಿಲ್ಲ ಎಂದು ಆರೋಪಿಸಿದರು.
ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಡಿ.17 ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಸಮಾವೇಶ ಸಂಘಟಿಸಲು ನಿರ್ಧರಿಸಲಾಗಿದ್ದು, ಜ್ಞಾನಪೀಠ ಪುರಸ್ಕೃತ ಡಾ. ಯು.ಆರ್. ಅನಂತಮೂರ್ತಿ ಸಮಾವೇಶ ಉದ್ಘಾಟಿಸಲಿದ್ದಾರೆಂದು ಡಾ. ಪ್ರಮೋದ ಹೇಳಿದರು.
ಹಿರಿಯ ಸಾಹಿತಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ, ಎಐಎಂಎಸ್ಎಸ್ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಎಚ್.ಜಿ. ಜಯಲಕ್ಷ್ಮೀ, ಹಿರಿಯ ಲೇಖಕಿ ಹೇಮಲತಾ ಮಹಿಷಿ, ಹಿರಿಯ ಸಿನಿಮಾ ವಿಮರ್ಶಕ ಗಂಗಾಧರ ಮೊದಲಿಯಾರ್, ಎಐಡಿವೈಒ ರಾಜ್ಯಾಧ್ಯಕ್ಷ ರಾಮಾಂಜನಪ್ಪ ಆಲ್ದಳ್ಳಿ, ಎಐಡಿಎಸ್ಒ ರಾಜ್ಯಾಧ್ಯಕ್ಷ ವಿ.ಎನ್. ರಾಜಶೇಖರ ಭಾಗವಹಿಸಲಿದ್ದಾರೆ ಎಂದರು.
ಎಐಎಂಎಸ್ಎಸ್ ರಾಜ್ಯ ಕಾರ್ಯದರ್ಶಿ ಅಪರ್ಣಾ ಬಿ.ಆರ್. ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಮಟ್ಟದಲ್ಲೂ ಮತ್ತು ಕಾಲೇಜು ಮಟ್ಟದಲ್ಲೂ ಸಮಾವೇಶಗಳನ್ನು ಸಂಘಟಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಸ್.ಎಂ. ಶರ್ಮಾ, ಮಹೇಶ ನಾಡಗೌಡ, ಡಾ. ಸೀಮಾ ದೇಶಪಾಂಡೆ, ಮಹೇಶ ಎಸ್. ಬಿ, ಭಾಗಣ್ಣ ಬುಕ್ಕಾ, ಶಂಕರ ಹುಗಾರ, ಅಶ್ವಿನಿ, ಸ್ನೇಹಾ ಕಟ್ಟಿಮನಿ ಇತರರು ಉಪಸ್ಥಿತರಿದ್ದರು.