ಶ್ರದ್ಧಾಂಜಲಿಗೇ ಸೀಮಿತವಾಯ್ತು ಸಾಮಾನ್ಯ ಸಭೆ
ಗುಲ್ಬರ್ಗ/ಶಹಾಬಾದ್: ವಾಡಿ ಪುರಸಭೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯನ್ನು ಅಧ್ಯಕ್ಷೆ ಹಸೀನಾಬೇಗಂ ಖುರೇಶಿ ಅನಾವಶ್ಯಕವಾಗಿ ಮುಂದೂಡಿದ್ದನ್ನು ಪ್ರತಿಭಟಿಸಿದ ಪ್ರತಿಪಕ್ಷವಾದ ಬಿಜೆಪಿ ಹಾಗೂ ಆಡಳಿತ ಪಕ್ಷದ ಕೆಲ ಸದಸ್ಯರು ಅಧ್ಯಕ್ಷರ ಧೋರಣೆಗೆ ಸೆಡ್ಡಿ ಹೊಡೆದು, ಪ್ರತಿಭಟನೆ ನಡೆಸಿ, ಸ್ಥಾಯಿ ಸಮಿತಿ ಅಧ್ಯಕ್ಷ ನೇತೃತ್ವದಲ್ಲಿ ಸಾಮಾನ್ಯ ಸಭೆ ನಡೆಸಿದ ಘಟನೆ ನಡೆಯಿತು.
ಬೆಳಗ್ಗೆ ಸಭೆ ಆರಂಭವಾಗುತ್ತಿದ್ದಂತೆ ಇತ್ತೀಚೆಗೆ ಮೃತಪಟ್ಟ ದಕ್ಷಿಣ ಆಫ್ರಿಕಾದ ಮುಖಂಡ ನೆಲ್ಸನ್ ಮಂಡೆಲಾ, ಕೋಲಿ ಸಮಾಜದ ಮುಖಂಡ ವಿಠ್ಠಲ್ ಹೆರೂರ್‌ರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ನಂತರ ಸಾಮಾನ್ಯ ಸಭೆಯನ್ನು ಮುಂದೂಡಲಾಗಿದೆ ಎಂದು ಹೇಳಿ, ಅಧ್ಯಕ್ಷ, ಉಪಾಧ್ಯಕ್ಷರು, ಆಡಳಿತ ಪಕ್ಷದ ಕೆಲ ಸದಸ್ಯರು ಸಭೆಯಿಂದ ಹೊರ ನಡೆದರು.
ಪ್ರತಿಭಟನೆ: ಇದನ್ನು ಪ್ರತಿಭಟಿಸಿದ ಪ್ರತಿಪಕ್ಷವಾದ ಬಿಜೆಪಿ ಸದಸ್ಯರು, ಕೆಲ ಕಾಂಗ್ರೆಸ್ ಸದಸ್ಯರು ಸಭೆಯ ವಿಷಯ ಸೂಚಿಯಂತೆ ಸಭೆಯನ್ನು ನಡೆಸಲು ಆಗ್ರಹಿಸಿ ಮುಖ್ಯಾಧಿಕಾರಿ ರಮೇಶ ಪಟ್ಟೇದಾರವರ ಮುಂದೆ ನೆಲದ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು.
ಅಡ್ಡ ಮಲಗಿದ ಸದಸ್ಯರು: ಒಂದು ಹಂತದಲ್ಲಿ ಅಧ್ಯಕ್ಷರ, ಮುಖ್ಯಾಧಿಕಾರಿಗಳ ವಿರುದ್ಧ ಘೋಷಣೆ ಕೂಡಿ ಸಭಾಂಗಣದ ಬಾಗಿಲ ಬಳಿ ಸದಸ್ಯರಾದ ಹರಿ ಜಾಧವ, ಅಶೋಕ ಬಾಜಿರಾವ ನೆಲದ ಮೇಲೆ ಮಲಗಿ ಸಭೆ ನಡೆಸದೆ ಇದ್ದಲ್ಲಿ ನಮ್ಮ ಮೇಲಿಂದ ದಾಟಿ ಹೋಗಿ ಎಂದು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್ ಸದಸ್ಯ ವಿಜಯ ನಾಯಕ ಸಮಜಾಯಿಷಿ ನೀಡಲು ಪ್ರಯತ್ನಿಸಿದರು. ಒಪ್ಪದೆ ಪ್ರತಿಭಟನೆ ಮುಂದುವರೆಸಿ, ಸಭೆ ನಡೆಸಲು ಆಗ್ರಹಿಸಿದರು.
ಹಂಗಾಮಿ ಅಧ್ಯಕ್ಷರನ್ನಾಗಿ ಆಯ್ಕೆ: ಸಭೆ ಮುಂದುವರೆಸಲು ಕಾನೂನು ತೊಡಕಿನ ಬಗ್ಗೆ ಸದಸ್ಯರ ಹಾಗೂ ಮುಖ್ಯಾಧಿಕಾರಿಗಳ ನಡುವೆ ಕಾನೂನಿನ ತೊಡಕಿನ ಬಗ್ಗೆ ಕೆಲ ಕಾಲ ಜಿಜ್ಞಾಸೆ, ತೀವ್ರ ಚರ್ಚೆ ನಡೆದು ಕೊನೆಗೆ ಬಿಜೆಪಿ 9ಜನ ಸದಸ್ಯರು, ಕಾಂಗ್ರೆಸ್ ಪಕ್ಷದ ಏಳು ಜನ ಸದಸ್ಯರು ಸೇರಿ, ಕೋರಂ ಇರುವುದರಿಂದ ಸ್ಥಾಯಿ ಸಮಿತಿ ಅಧ್ಯಕ್ಷತೆ ರಕ್ಷಿತಾ ಸಾಹೇಬಗೌಡರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಸಭೆ ನಡೆಸಿದರು.
ರಕ್ಷಿತಾ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಅಸಹಕಾರದ ನಡುವೆ ಆಶ್ರಯ ಮನೆಗಾಗಿ ಭೂಮಿ ಖರೀದಿಸಲು, ಪಟ್ಟಣದ ಪ್ರಮುಖ ಚೌಕಗಳಲ್ಲಿ ಮೂತ್ರಾಲಯ ನಿರ್ಮಿಸಲು, ಮುಖ್ಯಾಧಿಕಾರಿಗಳನ್ನು ವರ್ಗಾವಣೆ ಮಾಡಲು ಸೇರಿದಂತೆ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಸಭೆಯ ನಿರ್ಣಯವನ್ನು ಓದಿ ಹೇಳಲಾಯಿತು. ಮುಖ್ಯಾಧಿಕಾರಿಗಳು ಸಭೆಯ ನಿರ್ಣಯಕ್ಕೆ ರುಜು ಮಾಡದೆ ಇರುವುದರಿಂದ ಸಭೆಯ ನಿರ್ಣಯ ಪ್ರತಿಯನ್ನು ಮುಖ್ಯಾಧಿಕಾರಿಗಳಿಗೆ ನೀಡಿ, ಪ್ರತಿ ತಲುಪಿದ ಕುರಿತು ಸಹಿ ಪಡೆದರು.