ಅನ್ನಭಾಗ್ಯ' ಸರ್ಕಾರದ ಐತಿಹಾಸಿಕ ಹೆಜ್ಜೆ: ಸೌಮ್ಯ
ಗುಲ್ಬರ್ಗ: ದೇಶದಲ್ಲಿ ಎಲ್ಲ ಬಡವರು ಹಾಗೂ ದುರ್ಬಲ ವರ್ಗದವರಿಗೆ ಆಹಾರ ಒದಗಿಸಲು ತಿಂಗಳಿಗೆ ಗರಿಷ್ಠ 30 ಕೆಜಿ ಅಕ್ಕಿ ವಿತರಿಸುವ ಅನ್ನಭಾಗ್ಯ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದ ನಿಟ್ಟಿನಲ್ಲಿ ಒಂದು ಐತಿಹಾಸಿಕ ಹೆಜ್ಜೆ ಇಟ್ಟಿದೆ ಎಂದು ಜಿಪಂ ಸದಸ್ಯೆ ಸೌಮ್ಯ ಆರ್. ಪಾಟೀಲ್ ಅಭಿಪ್ರಾಯಪಟ್ಟರು.
ಭಾರತ ಸರ್ಕಾರ ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಗುಲ್ಬರ್ಗ ಸಮಗ್ರ ಶಿಸು ಅಭಿವೃದ್ಧಿ ಯೋಜನೆ (ಗ್ರಾಮಾಂತರ) ಕಿರಣ ರೂರಲ್ ರಿ-ಕನ್ಸ್ಟ್ರಕ್ಷನ್ ಸೊಸೈಟಿ ಗುಲ್ಬರ್ಗ ಹಾಗೂ ಗ್ರಾಪಂ ಸಾವಳಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಸಾವಳಗಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾಪಂ ಸದಸ್ಯೆ ವಿಜಯಲಕ್ಷ್ಮಿ ಮಲ್ಲಿಕಾರ್ಜುನ, ಗುಲ್ಬರ್ಗ ಗ್ರಾಮಾಂತರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪಾಪಮ್ಮ ಹಾಬಳಾಕರ್, ಪಿಡಿಒ ಕೃಷ್ಣ ಮೂಗರೆ, ಗ್ರಾಪಂ ಅಧ್ಯಕ್ಷೆ ಗುಂಡಮ್ಮ ಗುಂಡಪ್ಪ ಪಾಟೀಲ್, ಉಪಾಧ್ಯಕ್ಷ ಸೂರ್ಯಕಾಂತ ಹುಚ್ಚನ್, ಮುಖ್ಯೋಪಾಧ್ಯಾಯ ಸೂರ್ಯಕಾಂತ ಬಳ್ಳಾರಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಗ್ರಾಮೀಣ ಕ್ರೀಡಾ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ವಿಜೇತರಿಗೆ ಕ್ಷೇತ್ರ ಪ್ರಚಾರ ವತಿಯಿಂದ ಬಹುಮಾನಗಳನ್ನು ವಿತರಿಸಲಾಯಿತು.
ಕ್ಷೇತ್ರ ಪ್ರಚಾರ ಸಹಾಯಕ ಎನ್. ರಾಮಕೃಷ್ಣ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಕಿರಣ ರೂರಲ್ ರಿಕನ್ಸ್ಟ್ರಕ್ಷನ್ ಸೊಸೈಟಿ ಕಾರ್ಯದರ್ಶಿ ಎಂ.ಎಂ. ಶಿರಹಟ್ಟಿ ನಿರೂಪಿಸಿ ವಂದಿಸಿದರು.