ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕಡಗಂಚಿ ಎಸ್ಬಿಐ ಬ್ಯಾಂಕ್ ದರೋಡೆಗೆ ಮತ್ತೆ ಪ್ರಯತ್ನ

Rashmi Kasaragodu
Updated On : 13 Dec 2013, 11:11 am

ಗುಲ್ಬರ್ಗ/ಆಳಂದ: ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಎಸ್ಬಿಐ ಬ್ಯಾಂಕ್ ದರೋಡೆಗೆ ಮತ್ತೊಮ್ಮೆ ಯತ್ನ ನಡೆದಿದೆ. ಕಳೆದ ಒಂದೂವರೆ ವರ್ಷದ ಹಿಂದೆ ಬ್ಯಾಂಕಿನ ಹಿಂಬಾಗಿಲು ಮುರಿದು 1.50 ಕೋಟಿ ಮೌಲ್ಯದ ನಗ- ನಾಣ್ಯ ಲೂಟಿ ಮಾಡಲಾಗಿತ್ತು. ಈ ಪ್ರಕರಣ ನೆನಪಿನಂಗಳದಿಂದ ಮರೆಮಾಚುವ ಮುನ್ನವೇ ಗುರುವಾರ ಬೆಳಗಿನ ಜಾವ ಮತ್ತೆ ಬ್ಯಾಂಕ್ ದರೋಡೆಗೆ ಯತ್ನಿಸಿದ್ದು, ಆಡಳಿತ ವರ್ಗಕ್ಕೆ ಬ್ಯಾಂಕಿನ ಸುರಕ್ಷತೆಯ ಬಗೆಗಿರುವ ನಿಷ್ಕಾಳಜಿಯನ್ನು ಎತ್ತಿ ತೋರಿಸಿದಂತಾಗಿದೆ.
ಸರಳು ಮುರಿದು ಒಳನುಗ್ಗಿದ ಕಳ್ಳರು: ದರೋಡೆಕೋರರು ಬ್ಯಾಂಕಿನ ಹಿಂದಿನ ಕಿಟಕಿಯ ಸರಳುಗಳನ್ನು(ಸಲಾಕೆ) ಮಣಿಸಿ ಬ್ಯಾಂಕಿನ ಒಳನುಗ್ಗಿ ಸೈರನ್ ವೈರ್ ಕತ್ತರಿಸಿದ್ದಾರೆ. ಸಿಸಿ ಟಿವಿ ಕ್ಯಾಮರಾ ಒಡೆದು ಹಾಕಿದ್ದಾರೆ. ಹ್ಯಾಂಡ್ ಸೇಫ್ನ್ನು ಒಡೆಯಲು ಯತ್ನಿಸಿದ್ದಾರೆ. ಬ್ಯಾಂಕಿನ ಹಾಲ್ನಲ್ಲಿಟ್ಟಿದ್ದ ತಿಜೋರಿ(ಅಲ್ಮೇರಾ) ಒಡೆದಿದ್ದಾರೆ. ಸ್ಟ್ರಾಂಗ್ ರೂಮ್ ಒಡೆಯಲು ವಿಫಲ ಯತ್ನ ನಡೆಸಿದ್ದಾರೆ. ಬ್ಯಾಂಕಿನ ಹಾಲ್ನಲ್ಲಿಟ್ಟಿದ್ದ ತಿಜೋರಿಯಲ್ಲಿ ಬ್ಯಾಂಕಿಗೆ ಸಂಬಂಧಿಸಿದ ದಾಖಲೆ ಪತ್ರಗಳಿದ್ದವು ಎಂದು ತಿಳಿದು ಬಂದಿದೆ. ಈ ಹಿಂದೆ ಇದೇ ಬ್ಯಾಂಕ್ ದರೋಡೆ ನಡೆಸಿ ಈಗ ಮತ್ತೆ ದರೋಡೆಗೆ ಯತ್ನಿಸಿದ್ದು, ಬ್ಯಾಂಕ್ ದರೋಡೆಯಾದರೂ ಸುರಕ್ಷತೆಗೆ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುವುದನ್ನು ಈ ಪ್ರಕರಣ ಸಾಬೀತು ಪಡಿಸಿದೆ.
ಮರುಕಳಿಸುತ್ತಿರುವ ದರೋಡೆ: ಇತ್ತೀಚೆಗೆಷ್ಟೇ ನಗರದ ಹೃದಯ ಭಾಗವಾದ ಹುಮನಾಬಾದ್ ಬೇಸ್ನಲ್ಲಿರುವ ಮುತ್ತೂಟ್ ಫಿನ್ ಕಾರ್ಪ್ನಲ್ಲಿ ಹಾಡಹಗಲೇ ದರೋಡೆ ನಡೆಸಿ ಸುಮಾರು 2 ಕೋಟಿಗೂ ಅಧಿಕ ಮೌಲ್ಯದ ನಗ- ನಾಣ್ಯ ದೋಚಿಕೊಂಡು ಹೋಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳನ್ನು ಕೇಂದ್ರವಾಗಿಟ್ಟುಕೊಂಡು ದರೋಡೆಕೋರರು ದರೋಡೆ ಮತ್ತು ದರೋಡೆಗೆ ಯತ್ನಿಸುತ್ತಿದ್ದು, ಇದು ಪೊಲೀಸ್ ಇಲಾಖೆಯ ವೈಫಲ್ಯವೋ ಅಥವಾ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳ ನಿರ್ಲಕ್ಷ್ಯವೋ ಎಂಬ ಜಿಜ್ಞಾಸೆ ಮೂಡಿಸಿದೆ. ಸುದ್ದಿ ತಿಳಿದು ಐಜಿಪಿ ವಜೀರ್ ಅಹ್ಮದ್, ಎಸ್ಪಿ ಅಮೀತಸಿಂಗ್, ಆಳಂದ ಡಿಎಸ್ಪಿ ಎಸ್.ಎಲ್. ಝಂಡೇಕರ್, ಸಿಪಿಐ ಕರಿಯಪ್ಪ ಹಟ್ಟಿ, ನರೋಣ ಪಿಎಸ್ಐ ಎಂ.ಎಚ್ ದೊರೆ, ಸಿಬ್ಬಂದಿ, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement