ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಛಲದಂಕ ಮಲ್ಲರಿವರು...

Rashmi Kasaragodu
Updated On : 13 Dec 2013, 11:12 am

ಕನ್ನಡಪ್ರಭ ವಾರ್ತೆ  ಕೆಂಭಾವಿ  ಡಿ.12
ಅಂಗವಿಕಲತೆ ಶಾಪವಲ್ಲ, ಅದು ಕೇವಲ ದೈಹಿಕ ನ್ಯೂನತೆ ಮಾತ್ರ. ಹುಟ್ಟಿಸಿದ ದೇವರು ಹುಲ್ಲು ಮೇಯಿಸದೇ ಇರನು ಎಂಬ ನಾಣ್ನುಡಿಯಂತೆ ಸಾಧಿಸುವ ಮನಸ್ಸೊಂದಿದ್ದರೆ ಜೀವನದಲ್ಲಿ ಏನಾದರೂ ಮಾಡಿ ಬದುಕಬಹುದು.
ಓದಿದ್ದು ಕಡಿಮೆ: ಅಂಗವಿಕಲ ಏನು ಮಾಡಬಹುದು ಎಂದು ಕೈ ಕಟ್ಟಿ ಕುಳಿತರೆ ಏನನ್ನೂ ಸಾಧಿಸಲು ಆಗದು. ಬದುಕಲು ನೂರೆಂಟು ದಾರಿಗಳಿವೆ ಎಂದು ಛಲದಿಂದ ಸ್ವಂತ ಕೆಲಸ ಮಾಡಿ ಜೀವನ ಸಾಗಿಸುವ ಮೂಲಕ ಅಂಗವೈಕಲ್ಯವನ್ನು ಮೆಟ್ಟಿ ನಿಂತಿರುವ ಕೆಂಭಾವಿಯ ಕಾಸಿಂ ಸಾಬ್ ನಾಸಿ, ಮಹಿಬೂಬ್ ನಾಸಿ ಸಹೋದರರು ಹುಟ್ಟು ಮೂಗರು ಹಾಗೂ ಕಿವುಡರು.
  ಅವರು ಕೆಲಸ ಮಾಡುತ್ತಿರುವುದನ್ನು ಗಮನಿಸಿದ ಯಾರಿಗೂ ಅವರಿಗೆ ಕಿವಿ ಕೇಳುವುದಿಲ್ಲ ಮಾತು ಬರುವುದಿಲ್ಲ ಎಂದು ಅನಿಸುವುದೇ ಇಲ್ಲ. ಮಹಿಬೂಬ್ 5ನೇ ತರಗತಿ ಓದಿದ್ದು, ಕಾಸಿಮ್ 1ನೇ ತರಗತಿ ಓದಿದ್ದಾನೆ.
ಆತ್ಮವಿಶ್ವಾಸ: ಪಟ್ಟಣದ ಹೊರವಲಯದಲ್ಲಿ ಹುಣಸಗಿ ರಸ್ತೆಯಲ್ಲಿ ಸೈಕಲ್, ಮೋಟಾರ್ ಬೈಕ್ಗಳಿಗೆ ಪಂಚರ್ ಹಾಕುವ ಅಂಗಡಿಯನ್ನಿಟ್ಟುಕೊಂಡು ತಮ್ಮ ಉಪಜೀವನ ಸಾಗಿಸುತ್ತಿರುವ ಈ ಸಹೋದರರು ನಿರುದ್ಯೋಗಿಗಳಿಗೆ ಮಾದರಿಯಾಗಿದ್ದಾರೆ. ಹುಟ್ಟಿನಿಂದಲೂ ಅಂಗವಿಕಲರಾಗಿರುವ ಇವರ ಸಹೋದರಿಯೂ ಇವರಂತೆಯೇ ಇದ್ದಾರೆ. ಆದರೂ ದುಡಿದು ಜೀವನ ಸಾಗಿಸುತ್ತೇವೆ ಎಂಬ ಆತ್ಮವಿಶ್ವಾಸಕ್ಕೆ ಇವರಲ್ಲಿ ಬರವಿಲ್ಲ. ಮಾನಸಿಕವಾಗಿ ನಾವು ಸ ದೃಢವಾಗಿದ್ದೇವೆ. ಯಾವುದೇ ಕೆಲಸವಿದ್ದರೂ ಮಾಡಬಲ್ಲೆವು ಎಂಬ ಅವರ ಛಲ ಮಾತ್ರ ಮೆಚ್ಚುವಂತಹುದು.
ದುಡಿಮೆಗೆ ದಾರಿ ನೂರು: ಚಿಕ್ಕವರಿದ್ದಾಗ ಶಾಲೆಗೆ ಹೋಗುತ್ತಿದ್ದೆವು ಆದರೆ ಕಿವಿಗಳು ಕೇಳಿಸದ ಕಾರಣ ಶಾಲೆ ಬಿಟ್ಟೆವು ಎಂದು ಮೂಕ ಮಾತುಗಳಿಂದ ಹೇಳುವಾಗ ಅವರ ಕಣ್ಣಲ್ಲಿ ನೀರು ಬಂದವು. ಆದರೂ ನಾವು ಯಾರಿಗಿಂತಲೂ ಕಮ್ಮಿ ಇಲ್ಲ, ಓದು ಬರದಿದ್ದರೇನಾಯಿತು ದುಡಿಯಲು ನೂರು ದಾರಿಗಳಿವೆ ಎಂದು ಛಲ ಬಿಡದ ಸಹೋದರ ತನ್ನ ಅಣ್ಣನಿಗೆ ಪಂಚರ್ ಅಂಗಡಿ ನೋಡಿಕೊಳ್ಳಲು ಬಿಟ್ಟು, ಇನ್ನೊಬ್ಬ ಮನೆಕಟ್ಟುವ ಸೆಂಟ್ರಿಂಗ್ ಕೆಲಸ ಸೇರಿ, ಈಗ ಮನೆಕಟ್ಟುವ ಗೌಂಡಿ ಕೆಲಸ ಮಾಡುತ್ತಿದ್ದಾನೆ.
 ಸರ್ಕಾರದ ಮಾಸಾಶನ ಪಡೆಯುತ್ತಿರುವುದು ಬಿಟ್ಟರೆ ಇನ್ನಿತರ ಯಾವುದೇ ಸವಲತ್ತುಗಳು ಇವರಿಗೆ ದೊರೆತಿಲ್ಲ. ಸರ್ಕಾರ ಅಂಗವಿಕಲರಿಗೆ ಆಶ್ರಯ ಮನೆಗಳನ್ನು ನೀಡುತ್ತಿದೆಯಾದರೂ, ಇದುವರೆಗೂ ಇವರಿಗೆ ಆ ಭಾಗ್ಯ ಕೂಡಿ ಬಂದಿಲ್ಲ. ತಮಗೆ ಸರ್ಕಾರ ಧನಸಹಾಯ ಮಾಡಿದರೆ ಅನುಕೂಲವಾಗುತ್ತದೆ. ಹೆಚ್ಚು ಉತ್ಸಾಹದಿಂದ ಉದ್ಯೋಗ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳುತ್ತಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement