ಯೋಗಾಸನ: ರಾಷ್ಟ್ರಮಟ್ಟಕ್ಕೆ ಅರವಿಂದ
ಶಹಾಪುರ: ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲಾ ವಿದ್ಯಾರ್ಥಿ ಕುಮಾರ ಅರವಿಂದ ರುದ್ರಪ್ಪ ಕುಂಬಾರ 9ನೇ ತರಗತಿ ರಾಜ್ಯಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಇತ್ತೀಚೆಗೆ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಡೆದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರೌಢಶಾಲಾ ವಿಭಾಗ ಸ್ಪರ್ಧೆಯಲ್ಲಿ ಗೆದ್ದು, ಶಹಾಪುರ ಸರ್ಕಾರಿ ಬಾಲಕರ ಪ್ರೌಢಶಾಲಾ ವಿದ್ಯಾರ್ಥಿ ಅರವಿಂದ ರುದ್ರಪ್ಪ ಕುಂಬಾರ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. ಜ. 15ರಂದು ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆ ಗುಜರಾತ್ನ ಅಹ್ಮದಾಬಾದ್ನಲ್ಲಿ ನಡೆಯಲಿವೆ. ಈ ವಿದ್ಯಾರ್ಥಿಗೆ ಲಕ್ಷ್ಮಣ, ಸುಧಾಕರ ಗುಡಿ ತರಬೇತಿ ನೀಡಿದ್ದರು. ಮುಖ್ಯಗುರು ನಿಂಗಣ್ಣ ಸಿಂಪಿ, ಸಿಬ್ಬಂದಿ ಅಭಿನಂದಿಸಿದ್ದಾರೆ.
ಯುವಜನೋತ್ಸವ;
ರಾಜ್ಯಮಟ್ಟಕ್ಕೆ ಆಯ್ಕೆ
ಶಹಾಪುರ: ಯಾದಗಿರಿಯಲ್ಲಿ ನಡೆದ ಯುವ ಜನ ಕ್ರೀಡಾ ಮತ್ತು ಸೇವಾ ಇಲಾಖೆ ಹಾಗೂ ಜಿಪಂ ಯಾದಗಿರಿ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಯುವಜನೋತ್ಸವದಲ್ಲಿ ಶಹಾಪುರ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ಬಿ.ಎ. ಪದವಿ ವಿದ್ಯಾರ್ಥಿ ಬೂದಯ್ಯ ಹಿರೇಮಠ ಸಂಗೀತದ ಹಾರ್ಮೋನಿಯಂ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. 14, 15, 16 ಡಿಸೆಂಬರ್ 2013ರಂದು ಮಂಡ್ಯದಲ್ಲಿ ನಡೆಯುವ ರಾಜ್ಯ ಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಯಾದಗಿರಿ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾನೆ. ್ತು ಬಿ.ಎಸ್ಸಿ. ಪ್ರಥಮ ವರ್ಷದ ಪದವಿ ವಿದ್ಯಾರ್ಥಿನಿ ಸ್ವಾತಿ ಭಕ್ತ ಪ್ರಹ್ಲಾದ ಸಂಗೀತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಪ್ರಾಚಾರ್ಯ ಪ್ರೊ. ಆನಂದಕುಮಾರ ಜೋಷಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಅಧಿಕಾರಿ ಚನ್ನಾರಡ್ಡಿ ತಂಗಡಗಿ ಮುಂತಾದವರು ಅಭಿನಂದಿಸಿಸಿದ್ದಾರೆ.
ದಿ. ಹೇರೂರ್ಗೆ ಶ್ರದ್ಧಾಂಜಲಿ
ಶಹಾಪುರ: ಕರ್ನಾಟಕ ಕಂಡ ಅಪ್ರತಿಮ ಹೋರಾಟಗಾರ, ನೇರ ನಡೆ ನುಡಿಯ ನಿಷ್ಠೂರವಾದಿ ವಿಠ್ಠಲ ಹೇರೂರ್ ಆಗಿದ್ದರು. ಅವರು ಶೋಷಿತ ಸಮುದಾಯಗಳ ಗಟ್ಟಿ ಧ್ವನಿ. ಅವರ ಶ್ರದ್ದಾಂಜಲಿ ಸಮರ್ಪಣೆ ಹಾಗೂ ನುಡಿನಮನ ಕಾರ್ಯಕ್ರಮವನ್ನು ತಾಲೂಕಿನಾದ್ಯಂತ ಹಮ್ಮಿಕೊಳ್ಳಲಾಗುವುದು ಎಂದು ತಾಲೂಕು ಕೋಲಿ ಸಮಾಜದ ಪ್ರಧಾನ ಕಾರ್ಯದರ್ಶಿ ನಾಗೇಂದ್ರಪ್ಪ ಇಟಗಿ ತಿಳಿಸಿದ್ದಾರೆ. ನಿಜಶರಣ ಅಂಬಿಗರ ಚೌಡಯ್ಯನವರ ಮಠ ಹಳಿಸಗರದಲ್ಲಿ ಹಮ್ಮಿಕೊಂಡು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಡಿ. 20ರಂದು ಶಹಾಪೂರ ಪಟ್ಟಣದಲ್ಲಿ ಬೆಳಿಗ್ಗೆ 11 ಗಂಟೆಗೆ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ವಿಠ್ಠಲ ಹೇರೂರ ಅಭಿಮಾನಿಗಳು ಪ್ರಗತಿಪರ ಚಿಂತಕರು, ವಿಚಾರವಾದಿಗಳು ಸಮಾಜ ಬಾಂಧವರು ವಿವಿಧ ಸಂಘಟನೆಗಳು ಭಾಗವಹಿಸುವಂತೆ ನಾಗೇಂದ್ರಪ್ಪ ಇಟಗಿ ಕೋರಿದ್ದಾರೆ.