ರಸ್ತೆ ಅಗಲೀಕರಣ: ನಿರಾಶ್ರಿತರ ಪರಿಹಾರಕ್ಕೆ ಒತ್ತಾಯ
ಚಿತ್ತಾಪುರ: ತಾಲೂಕಿನ ಶಾಂಪುರಹಳ್ಳಿಯಿಂದ ಕೊಲ್ಲೂರ ವರೆಗಿನ ರಸ್ತೆ ನಿರ್ಮಾಣಕ್ಕಾಗಿ ರೈತರಿಂದ ಜಮೀನು ಪಡೆದು ಅದಕ್ಕೆ ಇಲ್ಲಿಯವರೆಗೆ ಪರಿಹಾರ ನೀಡದೇ ಅನ್ಯಾಯ ಮಾಡಿದ್ದು, ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ಒದಗಿಸಬೇಕೆಂದು ರಾಂಪುರಹಳ್ಳಿ ಹಾಗೂ ಶಾಂಪುರಹಳ್ಳಿ ಗ್ರಾಮ ರೈತ ಹಿತರಕ್ಷಣ ವೇದಿಕೆ ಅಧ್ಯಕ್ಷ ಸಿದ್ದಣ್ಣ ನಿಡಾಲ್ ಒತ್ತಾಯಿಸಿದ್ದಾರೆ.
ರಸ್ತೆ ನಿರ್ಮಾಣಕ್ಕೆ 1971ರಲ್ಲಿ ಅಧಿಕಾರಿಗಳು ರೈತರಿಂದ ಜಮೀನು ಪಡೆದು ಪರಿಹಾರ ನೀಡಿರುವುದಿಲ್ಲ. ಆದರೆ ಈಗ ಮತ್ತೆ ರಸ್ತೆ ಅಗಲೀಕರಣಕ್ಕಾಗಿ ರಸ್ತೆ ಕೇಂದ್ರದ ಮಧ್ಯ ಭಾಗದಿಂದ 20 ಫೀಟ್ ಹೆಚ್ಚುವರಿ ಜಮೀನು ಪಡೆಯುತ್ತಿರುವುದರಿಂದ ರಸ್ತೆ ಬದಿಯ ರೈತರು 40 ಫೀಟ್ ಜಮೀನು ಕಳೆದುಕೊಳ್ಳುತ್ತಿರುವರು.
ಮಣ್ಣನ್ನು ರಸ್ತೆಯ ಬದಿಗೆ: ಅಲ್ಲದೇ ಸದರಿ ಜಮೀನುಗಳಲ್ಲಿ ರೈತರು ಶೇಂಗಾ, ಜೋಳ, ತೊಗರಿ ಸೇರಿದಂತೆ ಇತರೆ ಬೆಳೆಗಳು ಇದ್ದು, ರಸ್ತೆ ಗುತ್ತಿಗೆದಾರರು ಬೆಳೆಗಳನ್ನು ನಾಶ ಪಡಿಸಿ ಯಂತ್ರಗಳ ಮೂಲಕ ರಸ್ತೆಯ ಎರಡು ಬದಿಗಳಲ್ಲಿ ಕಾಲುವೆಯನ್ನು ತೆಗೆದು ಅದರ ಮಣ್ಣನ್ನು ರಸ್ತೆಯ ಬದಿಗೆ ಹಾಕುತ್ತಿದ್ದಾರೆ. ಇದರಿಂದ ಜಮೀನು ಮತ್ತು ಬೆಳೆ ಎರಡೂ ಕಳೆದುಕೊಂಡು ನಿರಾಶ್ರೀತರಾಗುತ್ತಿದ್ದಾರೆಂದು ಹೇಳಿದರು. ಒಂದು ವೇಳೆ ವಿಳಂಬ ನೀತಿ ಅನುಸರಿಸಿದಲ್ಲಿ ಪ್ರತಿಭಟನೆ ಮೂಲಕ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಶ್ರೀನಿವಾಸ ನಿಡಾಲ್, ಕೃಷ್ಣಪ್ಪ, ಸಣ್ಣ ಹಣಮಯ್ಯ ಕಲಾಲ್, ಲಕ್ಮಯ್ಯ ಕಲಾಲ್, ಮಂಜುನಾಥ ನಿಡಾಲ್, ಅಂಬಲಪ್ಪ ಸುರಪುರ, ಶರಣಪ್ಪ ಹಣಕೇರಿ, ಹಣಮಂತ ಸೈದಾಪುರ, ಶರಣಪ್ಪ ಕೆಂಭಾವಿ, ಭಂಗಾರೆಮ್ಮ, ಪದ್ಮವತಿ, ಸಣ್ಣ ಅಬ್ದುಲ್ಲ, ಖೀರು, ಅರ್ಜುನ ಸೇರಿದಂತೆ ರಾಂಪುರಹಳ್ಳಿ, ಶಾಂಪುರಹಳ್ಳಿ ರೈತರು ಮನವಿ ಪತ್ರ ಸಲ್ಲಿಸಿದರು.