ನಾಳೆ ಬೃಹತ್ ಏಕತಾ ಓಟ
ಗುಲ್ಬರ್ಗ: ಗುಜರಾತ್ನ ನರ್ಮದಾ ಜಿಲ್ಲೆಯ ಕೇವಾಡಿಯಾದಲ್ಲಿರುವ ಸರ್ದಾರ್ ಸರೋವರ ಅಣೆಕಟ್ಟಿನ ಹತ್ತಿರ ಸಾಧು ಬೇಟ್ ದ್ವೀಪದಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲರ 182 ಮೀ ಎತ್ತರದ ಲೋಹದ ಪ್ರತಿಮೆ ನಿರ್ಮಿಸುತ್ತಿರುವ ಹಿನ್ನೆಲೆಯಲ್ಲಿ ಭಾರತದ 6.50 ಲಕ್ಷ ಹಳ್ಳಿಗಳ ರೈತರು ಈ ಕಾರ್ಯದಲ್ಲಿ ಸಹಭಾಗಿಗಳಾಗುವಂತೆ ರೈತರು ಕೃಷಿಗೆ ಬಳಸಿದ ಕಬ್ಬಿಣದ ಸಲಕರಣೆಗಳನ್ನು ಸಂಗ್ರಹಿಸಲಾಗುವ ಲೋಹ ಸಂಗ್ರಹ ಅಭಿಮಾನ ಹಮ್ಮಿಕೊಳ್ಳಲಾಗಿದೆ.
ಲೋಹ ಸಂಗ್ರಹ ಅಭಿಯಾನದ ಪೂರಕವಾಗಿ ಸರ್ದಾರ್ ವಲ್ಲಭಭಾಯ್ ಪಟೇಲರ ಪುಣ್ಯತಿಥಿ ದಿನವಾದ ಡಿ.15ರಂದು ದೇಶದ ಎಲ್ಲ 550 ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲಕ್ಕೆ ಪ್ರತಿಯೊಬ್ಬ ಭಾರತೀಯನ ಒಗ್ಗಟ್ಟಿನ ಓಟ ಆಯೋಜಿಸಲಾಗಿದೆ ಎಂದು ಲೋಹ ಸಂಗ್ರಹಣಾ ಸಮಿತಿ ಜಿಲ್ಲಾ ಸಂಚಾಲಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಸಹ ಸಂಚಾಲಕ ವಿದ್ಯಾಸಾಗರ ಕುಲಕರ್ಣಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೃಹತ್ ಏಕತಾ ಓಟ: ಡಿ.15ರಂದು ಗುಲ್ಬರ್ಗದ ಸೂಪರ್ ಮಾರ್ಕೆಟ್ನಿಂದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದವರೆಗೆ ಬೃಹತ್ ಒಗ್ಗಟ್ಟಿನ ಓಟ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು, ನಗರದ ಗಣ್ಯರು ಈ ಓಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಈ ಕಾರ್ಯಕ್ರಮ ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ. ಎಲ್ಲ ಪಕ್ಷಗಳ ಮುಖಂಡರು ಇದರಲ್ಲಿ ಸಕ್ರಿಯವಾಗಿ ಭಾಗವಹಿಸಿ ಹೈ.ಕ. ವಿಮೋಚನೆ ಮಾಡಿದ ಧೀಮಂತ ನಾಯಕ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರಿಗೆ ಗೌರವಪೂರ್ವಕ ನಮನ ಸಲ್ಲಿಸಬೇಕೆಂದು ಮನವಿ ಮಾಡಿದರು.
ಜ.15ರಿಂದ ಲೋಹ ಸಂಗ್ರಹ ಅಭಿಯಾನ: ಜಿಲ್ಲಾ ಮಟ್ಟದಲ್ಲಿ ಲೋಹ ಸಂಗ್ರಹಣಾ ಸಮಿತಿಗಳನ್ನು ರಚಿಸಲಾಗಿದ್ದು, ಈ ಸಮಿತಿ ಜಿಲ್ಲೆಯ ಎಲ್ಲ ತಾಲೂಕು, ಗ್ರಾಪಂ ಮಟ್ಟದಲ್ಲಿ ಬರುವ ಜ.15ರಿಂದ 26ರವರೆಗೆ ಲೋಹ ಸಂಗ್ರಹ ಅಭಿಯಾನ ನಡೆಸಲಿದೆ. ರೈತರು ಕೃಷಿಗೆ ಬಳಸಿದ ಕಬ್ಬಿಣವನ್ನು ಪ್ರತಿಮೆಗೆ ಬಳಸಿಕೊಳ್ಳಲಾಗುವುದು ಎಂದರು. ಇದರ ಅಂಗವಾಗಿ ಶಾಲಾ ಕಾಲೇಜುಗಳಲ್ಲಿ ಪಟೇಲರ ಕುರಿತು ಭಾಷಣ, ಪ್ರಬಂಧ, ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗುವುದು. ಏತಿಹಾಸಿಕ ಸ್ಥಳಗಳಿಂದ ಮಣ್ಣನ್ನು ಸಂಗ್ರಹಿಸಿ ಕಳಿಸಲಾಗುವುದು ಎಂದರು.