ನಾಳೆ ವಾಲ್ಮೀಕಿ ಜಯಂತ್ಯುತ್ಸವ
ಜೇವರ್ಗಿ: ನಾಯಕ ಜನಾಂಗದ ಪ್ರಥಮ ಸ್ವಾಭಿಮಾನಿ ಬೃಹತ್ ಸಮಾವೇಶ ಹಾಗೂ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವವನ್ನು ಡಿ.15ರಂದು ಪಟ್ಟಣದ ಪಪೂ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ತಾಲ್ಲೂಕಾಧ್ಯಕ್ಷ ಹಣಮಂತರಾಯ ಹವಾಲ್ದಾರ ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೈವ ಭಕ್ತಿಗೆ ರಾಮಾಯಣ, ಗುರು ಭಕ್ತಿಗೆ ಬೆರಳು, ಶಿವ ಭಕ್ತಿಗೆ ಕಣ್ಣು ಕೊಟ್ಟದ್ದು ವಾಲ್ಮೀಕಿ ಸಮಾಜ. ಇಂತಹ ಸಮಾಜದ ಪ್ರಥಮ ಸ್ವಾಭಿಮಾನಿ ಸಮಾವೇಶವನ್ನು ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಉದ್ಘಾಟಿಸುವರು. ರಾಜನಳ್ಳಿಯ ಸಂಸ್ಥಾನ ಮಠದ ಪ್ರಸನ್ನಾಂದಪುರಿ ಸ್ವಾಮೀಜಿ, ಸೊನ್ನದ ಶಿವಾನಂದ ಸ್ವಾಮೀಜಿ, ಸಿದ್ದರಾಮನಂದ ಪುರಿ ಸ್ವಾಮೀಜಿ, ವರದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಸಚಿವ ಸತೀಶ ಜಾರಕಿಹೊಳಿ ಅಧ್ಯಕ್ಷತೆ, ಸಂಸದ ಧರ್ಮಸಿಂಗ್ ಜ್ಯೋತಿ ಬೆಳಗಿಸುವರು. ಶಾಸಕ ಡಾ. ಅಜಯಸಿಂಗ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಸುರಪುರ ಸಂಸ್ಥಾನದ ರಾಜಾ ವೆಂಕಟಪ್ಪ ನಾಯಕ ತಾತಾನವರು ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಿದ್ದಾರೆ. ಮಾಜಿ ಸಚಿವ ಶ್ರೀರಾಮುಲು ಧ್ವಜಾರೋಹಣ ನೆರವೇರಿಸಲಿದ್ದು, ಸಚಿವ ಬಾಬುರಾವ ಚಿಂಚನಸೂರ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಎಂಎಲ್ಸಿ ಅಲ್ಲಂಪ್ರಭು ಪಾಟೀಲ್, ಅಮರನಾಥ ಪಾಟೀಲ್ ಅವರು ಸಾಧನೆಗೈದ ನಾಯಕರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಲಿದ್ದಾರೆ.
ಜಿಲ್ಲೆ ಹಾಗೂ ರಾಜ್ಯದ ಮಾಜಿ ಸಚಿವರು, ಶಾಸಕರು ಹಾಗೂ ಹಾಲಿ ಶಾಸಕರು ಸೇರಿದಂತೆ ಜಿಪಂ, ತಾಪಂ ಸದಸ್ಯರು ಅನೇಕರು ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.