ತನಿಖಾ ತಂಡ ಆಗಮನ
ಶಹಾಪುರ: ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ವಿಶೇಷ ಆಯುಕ್ತ ಸುಭಾಷ್ಚಂದ್ರ ನೇತೃತ್ವದ ತಂಡ ಎರಡು ದಿನಗಳಿಂದ ತಾಲೂಕಿನಲ್ಲಿ ಬೀಡು ಬಿಟ್ಟಿದೆ. ಹೊಸಕೇರಾ, ಚಾಮನಾಳ, ಹೋತಪೇಠ ಸೇರಿದಂತೆ ಇತರೆ ಗ್ರಾಪಂ ವ್ಯಾಪ್ತಿ ನಡೆದ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕೈಗೆತ್ತಿಕೊಳ್ಳಲಾದ ಕಾಮಗಾರಿ ಬಗ್ಗೆ ಕಡತ ಹಾಗೂ ಸ್ಥಳ ಪರಿಶೀಲನೆ ನಡೆಸುತ್ತಿದೆ.
ಶಾಸಕರಿಂದ ದೂರು: ಖಾತ್ರಿ ಯೋಜನೆಯಲ್ಲಿ ವ್ಯಾಪಕ ಅವ್ಯವಹಾರ ನಡೆದ ಬಗ್ಗೆ ತನಿಖೆಗೆ ಸ್ವತಃ ಶಾಸಕ ಗುರು ಪಾಟೀಲ್ ಶಿರವಾಳ ಸರ್ಕಾರಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ತಂಡ ಬಂದಿದ್ದು, ತಾಲೂಕಿನ ಹೊಸಕೇರಾ, ಉಕ್ಕಿನಾಳ, ಚಾಮನಾಳ, ಹೋತಪೇಟ ಗ್ರಾಮ ಪಂಚಾಯತಿಗಳಿಗೆ ತಂಡ ಭೇಟಿನೀಡಿ ಕಾಮಗಾರಿ ಪರಿಶೀಲಿಸುತ್ತಿದೆ. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಡೆಸಲಾದ ಚೆಕ್ಡ್ಯಾಂ, ಬದು ನಿರ್ಮಾಣ, ರಾಶಿ ಕಣ, ಜಲಾನಯನ ಇಲಾಖೆಯಡಿಯಲ್ಲಿ ನಿರ್ಮಿಸಿದ ನಾನಾ ಕಾಮಗಾರಿ ಕುರಿತು ತನಿಖಾ ತಂಡ ಸೂಕ್ತ ದಾಖಲೆಗಳನ್ನು ಕಲೆ ಹಾಕುತ್ತಿದೆ.
ಸಂಚಲನ: ನಿಯಮದ ಪ್ರಕಾರ ಕಾಮಗಾರಿ ನಡೆದಿದೆಯೋ ಇಲ್ಲವೋ ಎಂಬ ಬಗ್ಗೆ ಭಾವಚಿತ್ರ ಸಮೇತ ಸಮಗ್ರ ವರದಿ ತಯಾರಿಸಿ ಸರ್ಕಾರಕ್ಕೆ ಒಪ್ಪಿಸಲಾಗುವುದು ಎಂದು ತಂಡದ ಸದಸ್ಯರೊಬ್ಬರು ತಿಳಿಸಿದರು. ಹೀಗಾಗಿ ಆಯಾ ಗ್ರಾ.ಪಂ. ವ್ಯಾಪ್ತಿಯ ಜನರಲ್ಲಿ ಹೊಸ ಸಂಚಲನ ಮೂಡಿಸಿದೆ. ನಾಗರಿಕರು ಅವ್ಯವಹಾರ ನಡೆದ ಬಗ್ಗೆ ನಾನಾ ದೂರುಗಳನ್ನು ವಿಶೇಷ ಆಯುಕ್ತರಿಗೆ ಸಲ್ಲಿಸುತ್ತಿದ್ದು, ಕಾಮಗಾರಿ ಕುರಿತು ಪರಿಶೀಲಿಸುವ ಭರವಸೆಯನ್ನು ಆಯುಕ್ತರು ನೀಡುತ್ತಿದ್ದಾರೆ. ಅಲ್ಲದೆ ಹೊಸಕೇರಾ ಗ್ರಾಪಂಗೆ ತಂಡ ಭೇಟಿ ನೀಡಿದಾಗ ಹಲವರು ಸಮಸ್ಯೆ, ಅಕ್ರಮ ಕುರಿತು ತಿಳಿಸುತ್ತಿದ್ದಂತೆ, ಇನ್ನೂ ಕೆಲವರು ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಈ ಸಮಯದಲ್ಲಿ ಆಯಾ ರಾಜಕಿಯ ಪಕ್ಷದ ಕಾರ್ಯಕರ್ತರ ನಡುವೆ ಜಟಾಪಟಿ ನಡೆದ ಘಟನೆಯು ಜರುಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಬಹುತೇಕ ಕಡೆಗಳಲ್ಲಿ ಕ್ರಿಯಾಯೋಜನೆಗೂ ಕಾಮಗಾರಿಗೂ ಹೊಂದಾಣಿಕೆ ಕಂಡುಬರುತ್ತಿಲ್ಲ. ಕೆಲವು ಕಾಮಗಾರಿಗಳಲ್ಲಿ ಫಲಾನುಭವಿಗಳ ಹೆಸರಿಲ್ಲ. ಗ್ರಾಮಸಭೆಗಳು ಹೆಸರಿಗೆ ಮಾತ್ರ ನಡೆದಿದ್ದು, ಅದರ ಪ್ರಕಾರ ಆಯ್ಕೆ ನಡೆದಿಲ್ಲವೆಂಬುದು ಕಂಡುಬಂದಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.