ನಿವೃತ್ತ ಪಶುವೈದ್ಯರಿಗೆ ಮತ್ತೆ ಸೇವೆಭಾಗ್ಯ: ಸಚಿವ ಜಯಚಂದ್ರ
ಗುಲ್ಬರ್ಗ: ರಾಜ್ಯ ಸರ್ಕಾರ ಪಶುವೈದ್ಯರ ಬರ ನೀಗಿಸಲು ನಿವೃತ್ತರಿಗೆ ಮತ್ತೆ ಸೇವೆ ಭಾಗ್ಯ ಕಲ್ಪಿಸಲು ಮುಂದಾಗಿದೆ. ಪಶುಪಾಲನಾ ಇಲಾಖೆಯಲ್ಲಿ 700ಕ್ಕೂ ಹೆಚ್ಚು ಪಶು ವೈದ್ಯರ ಕೊರತೆ ಇದೆ. ಇದನ್ನು ನೀಗಿಸಲು ಆದಷ್ಟು ಶೀಘ್ರ ಸೇವಾ ನಿವೃತ್ತ ಪಶುವೈದ್ಯರ ಯಾದಿ ಸಿದ್ಧಪಡಿಸಿ ಅವರನ್ನು ಗುತ್ತಿಗೆ ಆಧಾರದ ಮೇಲೆ ಪುನಃ ಸೇವೆಗೆ ನಿಯೋಜಿಸಲು ಅಗತ್ಯ ಕ್ರಮ ಜರುಗಿಸಲಾಗುತ್ತದೆ ಎಂದು ಪಶುಸಂಗೋಪನಾ ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ. ಗುಲ್ಬರ್ಗದಲ್ಲಿ ಶನಿವಾರದಿಂದ ಆರಂಭವಾಗಿರುವ 2 ದಿನಗಳ ಪಶು ವೈದ್ಯರ ರಾಜ್ಯ ತಾಂತ್ರಿಕ ಸಮಾವೇಶಕ್ಕೆ ಜ್ಯೋತಿ ಬೆಳಗಿಸಿ ಚಾಲನೆ ನೀಡಿದ ಅವರು ವೈದ್ಯರ ಕೊರತೆಯಿಂದಾಗಿ ಇಲಾಖೆ ಜಾನುವಾರು ಆರೋಗ್ಯ ಸಂರಕ್ಷಣೆಯಲ್ಲಿ ತುಸು ಏರುಪೇರು ಆಗುತ್ತಿದೆ ಎಂದರು. ಈಗಾಗಲೇ ನಿವೃತ್ತರಿಗೆ ಸೇವಾಭಾಗ್ಯ ನೀಡುವ ವಿಚಾರವಾಗಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದರು.
ಜ್ಞಾನಗಂಗೆ ಪೋಲಿ ಪ್ರೊಫೆಸರ್ ಪೊಲೀಸ್ ಅತಿಥಿ
ಗುಲ್ಬರ್ಗ: ಪಿಎಚ್ಡಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊತ್ತು ಕಳೆದೊಂದು ವಾರದಿಂದ ತಲೆಮರೆಸಿಕೊಂಡಿದ್ದ ಗುಲ್ಬರ್ಗ ವಿಶ್ವವಿದ್ಯಾಲಯ ಅರ್ಥಶಾಸ್ತ್ರ ವಿಭಾಗದ ಪ್ರೊಫೆಸರ್ ಡಾ. ದಶರಥ ನಾಯಕ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾರೆ. ಗುಲ್ಬರ್ಗ ವಿವಿ ಕುಲಪತಿ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದ ಡಾ. ದಶರಥ ನಾಯಕ ತಾಂಡಾಗಳಲ್ಲಿ ತಲೆಮರೆಸಿಕೊಂಡಿದ್ದರು. ಪ್ರಕರಣದ ತನಿಖೆ ಹೊಣೆ ಹೊತ್ತಿದ್ದ ಎಎಸ್ಪಿ, ಗುಲ್ಬರ್ಗ ಗ್ರಾಮೀಣ ಡಿಎಸ್ಪಿ ಸಂತೋಷ ಬಾಬು ನೇತೃತ್ವದಲ್ಲಿ 3 ತಂಡಗಳನ್ನು ರಚಿಸಿ ನಾಯಕ ಬಂಧನಕ್ಕೆ ಜಾಲ ಬೀಸಲಾಗಿತ್ತು. ನಾಯಕನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ ಪೊಲೀಸರು ಕೊನೆಗೂ ಅವರನ್ನು ನಾಂದೇಡ್ ಬಳಿಯ ಹಿಂಗೊಳ್ಳಿ ತಾಂಡಾದಲ್ಲಿ ಶನಿವಾರ ಬೆಳಗಿನ ಹೊತ್ತು ಬಂಧಿಸಿದ್ದಾರೆ. ಗುಲ್ಬರ್ಗದಿಂದ 500 ಕಿಮೀ ದೂರದಲ್ಲಿದೆ ಹಿಂಗೊಳ್ಳಿ ತಾಂಡಾ. ಅಲ್ಲಿಂದ ಡಾ. ನಾಯಕರನ್ನು ಗುಲ್ಬರ್ಗಕ್ಕೆ ಕರೆತರಲಾಗುತ್ತಿದೆ. ಭಾನುವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದೆ ಎಂದು ಪ್ರಕರಣದ ವಿಚಾರಾಣಾಧಿಕಾರಿ ಸಂತೋಷ ಬಾಬು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಹೆಚ್ಚಿನ ಅನುದಾನದ ಭರವಸೆ: ಶಾಸಕ ಜಾಧವ
ಚಿಂಚೋಳಿ: ತಾಲೂಕಿನ ಕುಂಚಾವರಂ ಗಡಿಭಾಗದಲ್ಲಿರುವ ಗ್ರಾಮ- ತಾಂಡಾಗಳ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ನಲ್ಲಿ ರಸ್ತೆ, ಕುಡಿವ ನೀರು, ಸಿಮೆಂಟ್ ರಸ್ತೆ, ವಿದ್ಯುತ್, ಸಾರಿಗೆ ಸೌಲಭ್ಯಗಳನ್ನು ನೀಡುವುದಕ್ಕಾಗಿ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದೆಂದು ಶಾಸಕ ಡಾ. ಉಮೇಶ ಜಾಧವ ಭರವಸೆ ನೀಡಿದರು. ತಾಲೂಕಿನ ಕುಂಚಾವರಂ ಗಡಿಪ್ರದೇಶದ ಶಿವರೆಡ್ಡಿಪಳ್ಳಿ ಗೋಪು ನಾಯಕ ತಾಂಡಾ, ಶಿವರಾಮಪುರ, ಧರ್ಮಾಸಾಗರ ಗ್ರಾಮದಲ್ಲಿ 2013-14ನೇ ಸಾಲಿನ ರಾಷ್ಟ್ರಿಯ ಗ್ರಾಮೀಣ ಕುಡಿವ ನೀರು ಪೂರೈಕೆ ಯೋಜನೆ ಅಡಿಯಲ್ಲಿ ಒಟ್ಟು 80 ಲಕ್ಷ ವೆಚ್ಚದ ಕುಡಿವ ನೀರು ಸರಬರಾಜು ಯೋಜನೆ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ಸಮಾರಂಭ ನೆರವೇರಿಸಿ ಮಾತನಾಡಿದರು. ಕಡು ಬಡವರಿಗೆ ಮನೆಗಳು ಸಿಗುತ್ತಿಲ್ಲ, ಕೆಲವರು ಹಣ ಪಡೆದು ಮನೆಗಳನ್ನು ನೀಡುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಅಂತಹವರ ವಿರುದ್ಧ ದೂರು ಸಲ್ಲಿಸಿ ಕ್ರಮ ಕೈಕೊಳ್ಳಲಾಗುವುದು ಎಂದರು.
ಲೋಕಾಯುಕ್ತರಿಂದ ಅಹವಾಲು ಸ್ವೀಕಾರ
ಗುಲ್ಬರ್ಗ: ಗುಲ್ಬರ್ಗ ವಿಭಾಗದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಜಿಲ್ಲೆಯ ವಿವಿಧ ತಾಲೂಕುಗಳಿಗೆ ಡಿ.16, 18 ಮತ್ತು 19ರಂದು ಭೇಟಿ ನೀಡಿ ಬೆಳಗಿನ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಸಾರ್ವಜನಿಕರಿಂದ ಕುಂದುಕೊರತೆಗಳನ್ನು ಸ್ವೀಕರಿಸಿ, ಅವರ ಅಹವಾಲುಗಳನ್ನು ಆಲಿಸಲಿದ್ದಾರೆ. ಜೇಮ್ಸ್ ಲಾಯ್ ಕ್ಸೇವಿಯರ್ ಮಿನೇಜೆಸ್ ಪಿ.ಐ ಕ.ಲೋ ಗುಲ್ಬರ್ಗ, ಅಫಜಲ್ಪುರ-16 ರಂದು ಲೋಕೋಪಯೋಗಿ ಪ್ರವಾಸಿ ಮಂದಿರ ಅಫಜಲ್ಪುರ ಹಾಗೂ ಜೇವಗಿ ಡಿ.19 ರಂದು ಲೋಕೋಪಯೋಗಿ ಪ್ರವಾಸಿ ಮಂದಿರ ಜೇವರ್ಗಿ. ತಮ್ಮರಾಯ ಪಾಟೀಲ್, ಪಿ.ಐ ಕ.ಲೋ. ಗುಲ್ಬರ್ಗ, ಚಿತ್ತಾಪುರ-16ರಂದು ಲೋಕೋಪಯೋಗಿ ಪ್ರವಾಸಿ ಮಂದಿರ ಚಿತ್ತಾಪುರ ಹಾಗೂ ಸೇಡಂ- ಡಿ.18 ರಂದು ಪ್ರವಾಸಿ ಮಂದಿರ ಸೇಡಂ. ಶಾಂತಿನಾಥ ಕ.ಲೋ. ಗುಲ್ಬರ್ಗ, ಚಿಂಚೋಳಿ-ಡಿ.18 ರಂದು ಲೋಕೋಪಯೋಗಿ ಹಳೆ ಪ್ರವಾಸಿ ಮಂದಿರ ಚಿಂಚೋಳಿ. ಜಿ.ಜಿ. ಮರಿಬಾ ಶೆಟ್ಟಿ, ಡಿ.ಎಸ್.ಪಿ ಕ.ಲೋ. ಗುಲ್ಬರ್ಗ, ಆಳಂದ- ಡಿ.19ರಂದು ಲೋಕೋಪಯೋಗಿ ಪ್ರವಾಸಿ ಮಂದಿರ ಆಳಂದ. ವಿವರಗಳಿಗಾಗಿ ಸಾರ್ವಜನಿಕರು ಲೋಕಾಯುಕ್ತ ಆರಕ್ಷಕ ಅಧೀಕ್ಷಕರ ಕಚೇರಿ, ಐವಾನ್-ಇ-ಶಾಹಿ ಕಂಪೌಂಡ್ ಗುಲ್ಬರ್ಗ, ದೂ. 08472-263645, 263745 ಸಂಪರ್ಕಿಸಿ.
ಬೆಳವಣಿಗೆಗೆ ಪೌಷ್ಟಿಕ ಆಹಾರ ಅಗತ್ಯ: ಗೋದಾವರಿ
ಗುಲ್ಬರ್ಗ: ಮನುಷ್ಯನ ಶಾರೀರಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಪೌಷ್ಠಿಕ ಆಹಾರ ಅಗತ್ಯವಾಗಿದ್ದು, ನಿತ್ಯ ತಪ್ಪದೇ ಪೌಷ್ಟಿಕ ಆಹಾರ ಸೇವಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಗುಲ್ಬರ್ಗ ಶಿಶು ಅಭಿವೃದ್ಧಿ ನಗರಯೋಜನೆಯ ಅಂಗನವಾಡಿ ಮೇಲ್ವಿಚಾರಕಿ ಗೋದಾವರಿ ಬಿ. ಯಾದವ ಹೇಳಿದರು. ನಗರದ ಬಿದ್ದಾಪುರ ಕಾಲೋನಿಯ ಬುದ್ಧ ವಿಹಾರದಲ್ಲಿ ಏರ್ಪಡಿಸಿದ್ದ ಪೌಷ್ಠಿಕ ಆಹಾರ ಶಿಬಿರದಲ್ಲಿ ಉಪನ್ಯಾಸಕರಾಗಿ ಮಾತನಾಡಿದರು. ಸಂತೋಷ ಮೇಲ್ಮನಿ ಮಾತನಾಡಿದರು. ಜಗನ್ನಾಥ ದಿಕ್ಸಂಗಿಕರ್, ಸುಧಾ ಆನಂದ ಉಪಸ್ಥಿತರಿದ್ದರು. ಸಂಗಮ್ಮ ಬೆಣ್ಣೆಶಿರೂರ ಸ್ವಾಗತಿಸಿದರು. ಮುಕ್ತಾಬಾಯಿ ನಿರೂಪಿಸಿದರು. ಅಯ್ಯಮ್ಮ ವಂದಿಸಿದರು. ಕಾರ್ಯಕ್ರಮದಲ್ಲಿ ವಾರ್ಡ್ ನಂ.38ರ 17 ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಸಿದ್ಧ ಪಡಿಸಿದ ಪೌಷ್ಠಿಕ ಆಹಾರ, ಕಾಯಿಪಲ್ಯೆಗಳನ್ನು ಪ್ರದರ್ಶಿಸಲಾಯಿತು.
ವೈದ್ಯಕೀಯ ಕಾಲೇಜಿಗೆ ಮರುನಾಮಕರಣ
ಗುಲ್ಬರ್ಗ: ನಗರದ ಪ್ರತಿಷ್ಠಿತ ಹೈ.ಕ. ಶಿಕ್ಷಣ ಸಂಸ್ಥೆಯ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಗೆ ಡಾ. ಮಲಕರೆಡ್ಡಿ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಎಂದು ಹೊಸ ನಾಮಕರಣ ಮಾಡಲಾಯಿತು. ಡಾ. ಮಲಕರೆಡ್ಡಿ ಎಂದು ನಾಮಕರಣಗೊಂಡಿರುವ ಈ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು 1980 ರಲ್ಲಿ ಹೈ.ಕ. ಶಿಕ್ಷಣ ಸಂಸ್ಥೆಯ ಆಗಿನ ಅಧ್ಯಕ್ಷ ಡಾ. ಎ.ಬಿ. ಮಲಕರೆಡ್ಡಿ ಅವರ ಆಸಕ್ತಿ ಮೇರೆಗೆ ಸ್ಥಾಪನೆಗೊಂಡಿದೆ. ಪ್ರಾರಂಭದಲ್ಲಿ ಕೇವಲ 50 ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ಇತ್ತು. ಆದರೆ, ಇವತ್ತು ಈ ಸಂಖ್ಯೆ ದ್ವಿಗುಣಗೊಂಡಿದೆ. ಅಲ್ಲದೇ ಮೂರು ವಿಭಾಗದಲ್ಲಿ ಸ್ನಾತಕೋತ್ತರ ಅಧ್ಯಯನ ಕೈಗೊಳ್ಳುವ ಅವಕಾಶ ಇದೆ. ವೈದ್ಯರಾಗಬೇಕೆಂಬ ಅಗಣಿತ ಆಸೆ ಹೊಂದಿದ್ದ ಅರ್ಹ ವಿದ್ಯಾರ್ಥಿಗಳು ಒಂದಿಲ್ಲ ಒಂದು ಕಾರಣದಿಂದ ಎಂಬಿಬಿಎಸ್ ಸೀಟು ಸಿಗದೇ ನಿರಾಶೆ ಹೊಂದಿ ಎಂಜಿನಿಯರಿಂಗ್ ಅಥವಾ ಬೇರೆ ಕೋರ್ಸ್ಗೆ ಹೋಗುವ ವಿದ್ಯಾರ್ಥಿಗಳ ಅನುಕೂಲದ ದೃಷ್ಟಿಯಿಂದ 1980 ರಲ್ಲಿ ಡಾ. ಮಲಕರೆಡ್ಡಿ ಈ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜನ್ನು ಸ್ಥಾಪಿಸಿದರು.
ಮಾದರಿ ಕ್ರೀಡಾಂಗಣ ನಿರ್ಮಾಣ: ಡಾ. ಅಜಯಸಿಂಗ್
ಜೇವರ್ಗಿ: ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕ್ರೀಡಾಂಗಣ ಮಾದರಿಯಲ್ಲಿ ಜೇವರ್ಗಿ ಕ್ರೀಡಾಂಗಣವನ್ನು ಮಾಡುವ ಸಂಕಲ್ಪ ತಮ್ಮದಾಗಿದೆ ಎಂದು ಶಾಸಕ ಡಾ. ಅಜಯಸಿಂಗ್ ಹೇಳಿದರು. ಪಟ್ಟಣದ ಹೊರವಲಯದ ಕ್ರೀಡಾಂಗಣದಲ್ಲಿ 2012-13ನೇ ಸಾಲಿನ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಕ್ರೀಡಾ ಅನ್ವೇಷಣೆ ಮತ್ತು ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಮುಂಬರುವ ದಿನಗಳಲ್ಲಿ ವಿವಿಧ ಕ್ರೀಡೆಗಳನ್ನು ಇದೇ ಕ್ರೀಡಾಂಗಣದಲ್ಲಿ ಆಯೋಜಿಸುವ ಮೂಲಕ ಗ್ರಾಮೀಣ ಪ್ರದೇಶದ ಯುವ ಪ್ರತಿಭೆಗಳನ್ನು ಗುರುತಿಸಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಿಂಚಿಸುವ ಸಂಕಲ್ಪ ತಮ್ಮದಾಗಿದ್ದು, ಅದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯ. ಕ್ರೀಡಾಂಗಣದ ಮತ್ತಷ್ಟು ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದರು. ತಾಪಂ ಅಧ್ಯಕ್ಷ ಮಲ್ಲಣ್ಣಗೌಡ ಪಾಟೀಲ್ ನೇದಲಗಿ, ಪಪಂ ಅಧ್ಯಕ್ಷೆ ಅನೀತಾ ಪಾರ್ಶಿ, ಜಿಪಂ ಸದಸ್ಯ ಗುರುಲಿಂಗಪ್ಪಗೌಡ ಆಂದೋಲಾ, ಇದ್ದರು.
ತೊಗರಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ನಾಳೆ ರಸ್ತೆ ತಡೆ
ಆಳಂದ: ಗುಲ್ಬರ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ರೈತರು ತೊಗರಿಯನ್ನೇ ವಾಣಿಜ್ಯ ಬೆಳೆಯನ್ನಾಗಿ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರ ನಿಗದಿಪಡಿಸಿದ ಕ್ವಿಂಟಲ್ಗೆ 4300 ಹಾಗೂ ಎಂ.ಎಸ್. ಸ್ವಾಮಿನಾಥನ ಶಿಪಾರಸ್ಸಿನಂತೆ 2150 ಸೇರಿ ಒಟ್ಟು 6450 ಬೆಂಬಲ ಬೆಲೆಯಲ್ಲಿ ರೈತರ ತೊಗರಿಯನ್ನು ಖರೀದಿ ಮಾಡುವಂತೆ ಒತ್ತಾಯಿಸಿ 16ರಂದು ಆಳಂದ ಪಟ್ಟಣದ ಬಸ್ನಿಲ್ದಾಣದ ಹತ್ತಿರ ರಸ್ತೆತಡೆ ಚಳವಳಿ ನಡೆಸಲಾಗುವುದೆಂದು ಕರ್ನಾಟಕ ಪ್ರಾಂತ ರೈತಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ, ಅಖಿಲ ಭಾರತ ಕಿಸಾನಸಭಾ ಜಿಲ್ಲಾ ಕಾರ್ಯದರ್ಶಿ ಮೌಲಾಮುಲ್ಲಾ ಹೇಳಿದರು. ಆಳಂದನಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ತೊಗರಿ ಮಂಡಳಿಗೆ 100 ಕೋಟಿ ಹಣ ಒದಗಿಸಬೇಕು, ಎಂ.ಎಸ್. ಸ್ವಾಮಿನಾಥನ್ ವರದಿಯಂತೆ ತೊಗರಿ, ಕಡಲೆ, ಉದ್ದು, ಹೆಸರು ಈ ಬೆಳೆಗೂ ಪ್ರತಿ ಕ್ವಿಂಟಲ್ಗೆ 6450 ನಿಗದಿಪಡಿಸಬೇಕು, ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಡೆಯುವ ಹೋರಾಟದಲ್ಲಿ ರೈತರು ಪಾಲ್ಗೊಳ್ಳುವಂತೆ ವಿನಂತಿಸಿದರು.
ಗುಲ್ಬರ್ಗದಲ್ಲಿ ಸಂಪುಟ ಸಭೆ ಈ ವರ್ಷಕ್ಕಿಲ್ಲ: ಜಯಚಂದ್ರ
ಗುಲ್ಬರ್ಗ: ಹಿಂದಿನ ಬಿಜೆಪಿ ಸರ್ಕಾರದ ಸಿಎಂ ಯಡಿಯೂರಪ್ಪರಿಂದ ಆರಂಭವಾಗಿದ್ದ ಗುಲ್ಬರ್ಗ ಸಂಪುಟ ಸಭೆ ಸಂಪ್ರದಾಯ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮುಕ್ಕಾಗೋದು ನಿಶ್ಚಿತ. ಏಕೆಂದರೆ ಸಿದ್ದು ಸಂಪುಟದ ಹಿರಿಯ ಸಚಿವರಾದ ಟಿಬಿ ಜಟಚಂದ್ರ ಅವರು ಗುಲ್ಬರ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ವರ್ಷ ಸಂಪುಟ ಸಭೆ ಗುಲ್ಬರ್ಗದಲ್ಲಿ ನಡೆಸಲಾಗದು. ಅದೇನಿದ್ದರೂ 2014-15ನೇ ಇಸ್ವಿಗೆ ನೋಡೋಣ ಎಂದು ಹೇಳಿದ್ದಾರೆ. ಈ ಭಾಗದ ಪ್ರಗತಿ ಚಿಂತನೆಯ ವೇದಿಕೆಯಾಗುತ್ತಿದ್ದ ಸಂಪುಟ ಸಭೆ ಯಾವಾಗ ನಡೆಸುತ್ತೀರಿ ಎಂಬ ವರದಿಗಾರರ ಪ್ರಶ್ನೆಗೆ ನಸುನಕ್ಕ ಜಯಚಂದ್ರ ಈ ವರ್ಷಕ್ಕಂತು ಅಸಾಧ್ಯ. ಅದೇನಿದ್ದರೂ ಬರುವ ವರ್ಷಕ್ಕೆ ನೋಡೋಣ ಎಂದರು. ಆದರೆ ಸಂಪುಟ ಸಭೆ ನಿಶ್ಚಿತ ಗುಲ್ಬರ್ಗದಲ್ಲಿ ನಡೆಸಲಾಗುತ್ತದೆ ಎಂದು ಯಾವುದೇ ಆಶ್ವಾಸನೆ ನೀಡಲಿಲ್ಲ. ಕಲಂ 371(ಜೆ) ಪ್ರಕಾರ ಹೈ-ಕ 6 ಜಿಲ್ಲೆಗಳಲ್ಲಿ ನೇಮಕಾತಿ ನಡೆಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಈಗಾಗಲೇ ಸೂಚಿಸಲಾಗಿದೆ. ಜನವರಿ ತಿಂಗಳೊಳಗೆ ನೇಮಕಾತಿಗಳು ಶುರುವಾಗಲಿವೆ ಎಂದ ಜಯಚಂದ್ರ ಈ ಬಾರಿ ವೈದ್ಯಕೀಯ ಸೀಟು ಹಂಚಿಕೆಯ ವಿಷಯವೂ ಕಲಂ 371(ಜೆ) ಅನ್ವಯವೇ ಸಾಗಲಿದೆ ಎಂದರು.
ಜಯಂತಿ, ಗಣ್ಯರ ನಿಧನಕ್ಕೆ ರಜೆ ಬೇಡ: ಸುಳ್ಳದ
ಆಳಂದ: ರಾಜ್ಯದಲ್ಲಿ ಮಹಾನ್ ವ್ಯಕ್ತಿಗಳ ಜಯಂತಿಗೆ ಹಾಗೂ ಗಣ್ಯರು ಮೃತಪಟ್ಟರೆ ಸಾರ್ವತ್ರಿಕ ರಜೆ ನೀಡುವ ಬದಲು ಅವರು ಮಾಡಿದ ಸಾಧನೆ ಹಾಗೂ ನೀಡಿದ ಕೊಡುಗೆ ಕುರಿತು ಚಿಂತನ ಮಂಥನಕ್ಕೆ ಅವಕಾಶ ಕಲ್ಪಿಸಬೇಕೆಂದು ನ್ಯಾಯ ಶೋಧನಾ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಬಾಬುರಾವ ಎಸ್. ಸುಳ್ಳದ ಇಂಗಿತ ವ್ಯಕ್ತಪಡಿಸಿದ್ದಾರೆ. ತಾಲೂಕಿನ ಮಾದನಹಿಪ್ಪರಗಾ ಗ್ರಾಮದಲ್ಲಿನ ಬೋಧಿಸತ್ವ ವಿದ್ಯಾವರ್ಧಕ ಬಾಲಕಿಯರ ಪ್ರೌಢಶಾಲೆಯಲ್ಲಿ ಶ್ರೀ ಕಂಠದತ್ತ ನರಸಿಂಹರಾಜ ಒಡೆಯರ್ ಶೃದ್ಧಾಂಜಲಿ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಗತ್ಯ ಬಿದ್ದಲ್ಲಿ ಆಯಾ ಪ್ರದೇಶ ಮತ್ತು ವ್ಯಾಪ್ತಿಗಳಲ್ಲಿ ಮಾತ್ರ ರಜೆ ನೀಡಲಿ. ಗಣ್ಯಮಾನ್ಯರು, ರಾಜ ಮಹಾರಾಜರು, ಮಹಾತ್ಮರ ಮರಣೋತ್ತರ ಜನ್ಮದಿನ, ಹಬ್ಬ ಮತ್ತಿತರ ದಿನಗಳಲ್ಲಿ ಇತಿಮಿತಿ ಮೀರಿ ರಜಾದಿನಗಳು, ಬಂದ್ ಆಚರಣೆಗಳಿಂದ ಶಾಲಾ ಕಾಲೇಜು ಶಿಕ್ಷಣದ ಅಭಿವೃದ್ಧಿಗೆ ಕುಂಠಿತ ಎಂದು ಆತಂಕ ವ್ಯಕ್ತಪಡಿಸಿದರು.
ನೀರು ಜೀವನಾಮೃತ: ಸಂಗಮೇಶ್ವರ ಕುಂಬಾರ
ಗುಲ್ಬರ್ಗ: ನೀರು ಜೀವನಾಮೃತ. ನಮ್ಮ ಬಾಳ ಪಯಣದಲ್ಲಿ ಪ್ರಮುಖವಾಗಿ ಬಳಸಲ್ಪಡುವ ಸಂಪನ್ಮೂಲ. ನಿತ್ಯನಾವು ನೀರನ್ನು ವ್ಯರ್ಥ ಮಾಡುತ್ತ ಹೋದರೆ ನಮ್ಮ ಭವಿಷ್ಯದ ನಾಶ ಖಂಡಿತ ಎಂದು ಮೈರಾಡ ಸಮುದಾಯ ಅಭಿವೃದ್ಧಿ ಯೋಜನಾಧಿಕಾರಿ ಸಂಗಮೇಶ್ವರ ಕುಂಬಾರ ಅಭಿಪ್ರಾಯಪಟ್ಟರು. ಮಹಾನಗರ ಪಾಲಿಕೆ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ನಿಯಮಿತ ಮತ್ತು ಮೈರಾಡ ಸಂಸ್ಥೆ ಗುಲ್ಬರ್ಗ ಹಾಗೂ ಪ್ರಜ್ಞೆ ಯುವಕ ಸಂಘ ಹೀರಾಪುರ ಇವುಗಳ ಸಹಕಾರದಲ್ಲಿ ಹೀರಾಪುರದ ಅರಳಿ ಕಟ್ಟೆಯ ಹತ್ತಿರ ವಾರ್ಡ್ ಮಟ್ಟದ ನೀರು ಸರಬರಾಜು, ಒಳಚರಂಡಿ ಕುರಿತು ತಿಳುವಳಿಕೆ ಮತ್ತು ಮಾಹಿತಿ ಶಿಕ್ಷಣ, ಸಂವಹನ ಶಿಬಿರದಲ್ಲಿ ಮಾತನಾಡಿದರು. ಪ್ರಜ್ಞಾ ಯುವಕ ಸಂಘದ ಸಂತೋಷ ಮೇಲ್ಮನಿ ಮಾತನಾಡಿದರು. ನಾಗೇಂದ್ರಪ್ಪ ಪದ್ಮಾಜಿ ಕಾರ್ಯಕ್ರಮ ಉದ್ಘಾಟಿಸಿದರು. ಲಕ್ಷ್ಮೀಕಾಂತ, ಕುಪೇಂದ್ರ ಬಿರಾದಾರ, ಸರ್ದಾರಮಿಯಾ, ರಾಜೇಂದ್ರ ಡಿಪ್ಟಿ, ದೇವಿಂದ್ರಪ್ಪ ಕ್ವಾಟಿ, ಸವಿತಾ ಸಗರ, ಸಿದ್ದಮ್ಮ ಎಲ್. ಕುಂಬಾರ, ಪಾಶಾಮಿಯಾ, ವಿಠ್ಠಲ್ ಚಿಕಣಿ, ಇರ್ಫಾನ್, ಸಮುದಾಯದ ಸಂಘಟಕರು, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.
ಲೋಕ ಕಲ್ಯಾಣಕ್ಕಾಗಿ ಆನಂದ ಸಿಂಧು ಪಠಣ ಅಗತ್ಯ: ಶ್ರೀಗಳು
ಜೇವರ್ಗಿ: ಮಾನವರು ಲೋಕ ಕಲ್ಯಾಣಕ್ಕಾಗಿ ಶಂಕರ ಭಗವತ್ಪಾದರ ಪಠಣ ಅಗತ್ಯ. ನಾಡಿನಲ್ಲಿ ಭಗವಂತನ ನಾಮಸ್ಮರಣೆ ನಿರಂತರ ನಡೆಯಬೇಕು ಅಂದಾಗ ಮಾತ್ರ ಮಾನವರಲ್ಲಿಯ ರೋಗಗಳು ದೂರವಾಗುತ್ತವೆ ಎಂದು ಯಡತೊರೆ ಶಂಕರಬಾರತೀ ಶ್ರೀ ಅನುಗ್ರಹ ಸಂದೇಶ ನೀಡಿದರು. ಪಟ್ಟಣದ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ಗುಲ್ಬರ್ಗ ನಗರದ ನೂತನ ವಿದ್ಯಾಲಯ ಸಂಸ್ಥೆಯ ಆವರಣದಲ್ಲಿ ಡಿ.21ರಂದು ನಡೆಯಲಿರುವ ಆನಂದಸಿಂಧು ಕಾರ್ಯಕ್ರಮಕ್ಕೆ ವಿಪ್ರ ಸಮಾಜದ ಬಾಂಧವರಿಗೆ ಆಮಂತ್ರಣ ನೀಡಿ ಅನುಗ್ರಹ ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ತಾಲೂಕು ವಿಪ್ರ ಸಮಾಜದ ಅಧ್ಯಕ್ಷ ರಮೇಶಬಾಬು ವಕೀಲ, ರಾಜೇಂದ್ರ ಕುಲಕರ್ಣಿ, ಶ್ಯಾಮರಾವ ರ್ಯಾವನೂರ, ಅನೀಲಕುಮಾರ್ ಇನಾಮದಾರ, ಹಳ್ಳೆಪ್ಪಚಾರ್ಯ ಜೋಶಿ, ದತ್ತಾತ್ರೇಯರಾವ ಕುಲಕರ್ಣಿ, ಗುರುರಾಜ ಆಲಬಾಳ, ವಿಜಯಕುಮಾರ್ ಕಲ್ಲೂರ, ಬಾಪುರಾವ ಪಾಗಾ, ಮುದ್ಗಲರಾವ ಕುಲಕರ್ಣಿ, ಸುದರ್ಶನ ಆಲಬಾಳ, ಅಪ್ಪಣ್ಣ ಕೂಟನೂರ, ಕಿಶನರಾವ ಹೆಮನೂರ, ವೆಂಕಟರಾವ ಮಳ್ಳಿ, ಶಂಕರರಾವ ಅವರಾದಿ, ರವೀಂದ್ರ ವಕೀಲ, ಶಿವರಾಮಾಚಾರ್ಯ ಜೋಶಿ, ವೆಂಕಟೇಶ ಹರವಾಳ, ಭೀಮಸೇನ ಜೋಶಿ ಇದ್ದರು.
'ಸಂವಿಧಾನ ಮಾನವ ಹಕ್ಕುಗಳ ರಕ್ಷಾ ಕವಚ'
ಆಳಂದ: ವಿಶ್ವದಲ್ಲಿರುವ ಮಾನವ ಹಕ್ಕುಗಳ ಬಗ್ಗೆ ಸಂವಿಧಾನ ಬದ್ಧವಾಗಿ ಹಾಗೂ ಮಾನವ ಹಕ್ಕಗಳ ಆಯೋಗದ ಪ್ರಕಾರ ಪ್ರತಿಯೊಬ್ಬ ಭಾರತೀಯ ಪ್ರಜೆಗೆ ನೀಡಲ್ಪಟ್ಟ ಮಾನವ ಹಕ್ಕುಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ನಮ್ಮ ಸಂವಿಧಾನವು ಮಾನವ ಹಕ್ಕುಗಳ ರಕ್ಷಾ ಕವಚ ಎಂದು ಜೆಎಂಎಫ್ಸಿ ಪ್ರಧಾನ ಸಿವಿಲ್ ನ್ಯಾಯಾಧೀಶ ಪ್ರಭು ಎನ್. ಬಡಿಗೇರ ಹೇಳಿದರು. ಪಟ್ಟಣದ ಕೋರ್ಟ್ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ ಮಾನವ ಹಕ್ಕುಗಳ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಭಾರತ ಸಂವಿಧಾನ, ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ನ್ಯಾಯವಾದಿ ಎಂ.ವಿ.ಎಕಬೋಟೆ, ಮಾನವನ ಮೂಲಭೂತ ಹಕ್ಕುಗಳು ಕುರಿತು ದೇವಾನಂದ ಹೋದಲೂಕರ್ ಉಪನ್ಯಾಸ ನೀಡಿದರು. ಪಿ.ಎನ್. ಶಹಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನ್ಯಾಯವಾದಿ ಸಂಘದ ಅಧ್ಯಕ್ಷ ಎಸ್.ಡಿ. ಬೋಸಗೆ, ಪ್ರಧಾನ ಕಾರ್ಯದರ್ಶಿ ಸ್ವಾಮಿರಾವ ಚನ್ನಗುಂಡ, ಬಿ.ಎ. ದೇಶಪಾಂಡೆ, ಎಡಬ್ಲೂ ಅನ್ಸಾರಿ, ಎಸ್.ಎ. ಪಾಟೀಲ್, ಶಿವಶಂಕರ ಪಾಲ್ಗೊಂಡಿದ್ದರು.
ತೊಗರಿ ಆಮದಿನಿಂದ ದೇಶದ ರೈತರಿಗೆ ನಷ್ಟ: ಬಸವರಾಜ
ಚಿಂಚೋಳಿ: ಗುಲ್ಬರ್ಗ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ತೊಗರಿ ಬೆಳೆಯಲಾಗುತ್ತಿದ್ದು, ಜಾಗತೀಕರಣದಿಂದಾಗಿ ಮತ್ತು ಯುರೋಪ್ ಮತ್ತು ಆಗ್ನೇಯ ದೇಶಗಳ ವ್ಯಾಪಾರ, ಆಮದುನಿಂದಾಗಿ ನಮ್ಮ ದೇಶದ ರೈತರು ಅತಿ ಹೆಚ್ಚು ನಷ್ಟವನ್ನು ಅನುಭವಿಸಬೇಕಾಗಿದೆ ಎಂದು ಕರ್ನಾಟಕ ಪ್ರಾಂತ ರೈತಸಂಘದ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಯು. ಬಸವರಾಜ ಕಳವಳ ವ್ಯಕ್ತಪಡಿಸಿದರು. ಪಟ್ಟಣದ ಮಹಾಂತೇಶ್ವರ ಮಠದಲ್ಲಿ ಹೈ-ಕ ಚೇಂಬರ್ ಆಫ್ ಕಾಮರ್ಸ್ ಗುಲ್ಬರ್ಗ, ಕರ್ನಾಟಕ ಪ್ರಾಂತ ರೈತ ಸಂಘ, ತೊಗರಿ ಬೆಳೆಗಾರರ ಸಂಘ, ಅಖಿಲ ಭಾರತ ಕಿಸಾನಸಭಾ ಮತ್ತು ಜಿಲ್ಲಾ ಕೃಷಿಕ ಸಮಾಜ ವತಿಯಿಂದ ಏರ್ಪಡಿಸಿದ್ದ ತೊಗರಿ ಬೆಳೆಯುವ ರೈತರ ಸಮಾವೇಶದಲ್ಲಿ ಮಾತನಾಡಿದರು. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಧಂಗಾಪುರ ಮಾತನಾಡಿ, ಜಿಲ್ಲೆಯ ತೊಗರಿ ಮಂಡಳಿಗೆ 100 ಕೋಟಿ ಸರ್ಕಾರ ಕೂಡಲೇ ಬಿಡುಗಡೆಗೊಳಿಸಿ ರೈತರ ತೊಗರಿ ಖರೀಸಬೇಕೆಂದರು.
ಮಕ್ಕಳಲ್ಲಿ ಭಾವೈಕ್ಯತೆ ಬೆಳೆಸುವುದು ಅಗತ್ಯ: ಸಿರಿ
ಜೇವರ್ಗಿ: ಶಾಲಾ ಮಕ್ಕಳಲ್ಲಿ ಭಾವೈಕ್ಯತೆ ಮೂಡಿಸುವುದರೊಂದಿಗೆ ಭಾರತ ಸೇವಾ ದಳದ ಉದ್ದೇಶಗಳನ್ನು ತಿಳಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಶಿಕ್ಷಕ ಬಾಂಧವರು ಮಕ್ಕಳಲ್ಲಿ ದೇಶಪ್ರೇಮ, ದೇಶಭಕ್ತಿಯ ಕುರಿತು ಅರಿವು ಉಂಟು ಮಾಡಬೇಕೆಂದು ಭಾರತ ಸೇವಾ ದಳದ ತಾಲೂಕು ಸಮಿತಿ ಅಧ್ಯಕ್ಷ ರಾಜಶೇಖರ ಸಿರಿ ಅಭಿಪ್ರಾಯಪಟ್ಟರು. ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಭಾರತ ಸೇವಾ ದಳ ತಾಲೂಕು ಸಮಿತಿ ಆಯೋಜಿಸಿದ್ದ ತಾಲೂಕು ಮಟ್ಟದ ದೈಹಿಕ ಶಿಕ್ಷಕರಿಗೆ ಬ್ಯಾಂಡ್ ವಾದ್ಯ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದಕ್ಕೂ ಮುನ್ನ ಭಾರತ ಸೇವಾದಳದ ಜಿಲ್ಲಾ ಸಮಿತಿ ಅಧ್ಯಕ್ಷ ಬಸವಣ್ಣಪ್ಪ ಗೌನಳ್ಳಿ ಭಾರತ ಸೇವಾದಳದ ಸಂಸ್ಥಾಪಕ ಡಾ.ನಾ.ಸು.ಹರ್ಡೇಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ತಾಪಂ ಅಧ್ಯಕ್ಷ ಮಲ್ಲಣ್ಣಗೌಡ ಪಾಟೀಲ್ ನೇದಲಗಿ, ಸೇವಾದಳದ ಜಿಲ್ಲಾ ಕಾರ್ಯದರ್ಶಿ ಶಿವಶರಣಪ್ಪ ಜಂಬೇರಾಳ, ತಹಸೀಲ್ದಾರ್ ಮಲ್ಲಿಕಾರ್ಜುನ ರೆಡ್ಡಿ ಪಾಟೀಲ್, ವಸಂತರಾವ ನರಿಬೋಳ, ಮನೋಹರ ಕಾಮನಕೇರಿ, ರಶೀದ್ ನಮಾಜಿ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಶರಣಬಸಪ್ಪ ಸಡ್ಡು ಉಪಸ್ಥಿತರಿದ್ದರು.
ವಿವಿಧ ಮೂಲ ಸೌಕರ್ಯ ಕಾಮಗಾರಿಗಳ ಅನುಷ್ಠಾನ
ಗುಲ್ಬರ್ಗ/ಶಹಾಬಾದ್: ರಾಜ್ಯ ಸರ್ಕಾರ ಪ್ರಾದೇಶಿಕ ಅಸಮತೋಲನ ಸರದೂಗಿಸಲು ಸರ್ಕಾರದ ಅಂಗ ಸಂಸ್ಥೆಯಾದ ಕೆಯುಐಡಿಎಫ್ಸಿ ಮುಖಾಂತರ ಶಹಾಬಾದ್ ನಗರದಲ್ಲಿ ವಿವಿಧ ಮೂಲಸೌಕರ್ಯ ಕಾಮಗಾರಿಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ನಗರಸಭೆ ಪೌರಾಯುಕ್ತ ಕೆ. ಗುರಲಿಂಗಪ್ಪ ತಿಳಿಸಿದರು. ನಗರದಲ್ಲಿ ನಗರಸಭೆ ಕಾರ್ಯಾಲಯದಲ್ಲಿ ಕೆಯುಐಡಿಎಫ್ಸಿ ಮತ್ತು ನಗರಸಭೆ ಶಹಾಬಾದ್ ಹಾಗೂ ಬಯಲು ಸೀಮೆ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಉತ್ತರ ಕರ್ನಾಟಕ ನಗರ ವಲಯ ಬಂಡವಾಳ ಹೂಡಿಕಾ ಕಾರ್ಯಕ್ರಮದಡಿ ನಗರಸಭೆ ಸದಸ್ಯರಿಗೆ ಕೆಯುಐಡಿಎಫ್ಸಿ ಯೋಜನೆ ಬಗ್ಗೆ ಅರಿವು ನೀಡುವ ಕಾರ್ಯಕ್ರಮ ನಡೆಯಿತು. ಈ ಅಭಿವೃದ್ಧಿ ಕಾಮಗಾರಿಗಳಾದ 24್ಢ7 ನಿರಂತರ ನೀರು ಸರಬರಾಜು ವ್ಯವಸ್ಥೆ, ಕೊಳಚೆ ಪ್ರದೇಶದ ಅಭಿವೃದ್ಧಿ, ಒಳಚರಂಡಿ ವ್ಯವಸ್ಥೆ ಹಾಗೂ ತ್ಯಾಜ್ಯ ನೀರು ಸಂಸ್ಕರಣ ಘಟಕದ ಸ್ಥಾಪನೆ ಹೀಗೆ ಸಾರ್ವಜನಿಕರಿಗೆ ಅನುಕೂಲವಾಗುವ ಅನೇಕ ಕಾಮಗಾರಿಗಳನ್ನು ಎತ್ತಿಕೊಂಡಿದೆ. ಆದ್ದರಿಂದ ಸಾರ್ವಜನಿಕರಿಗೆ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸದಸ್ಯರು ಇದಕ್ಕೆ ಅಡೆತಡೆಯಿಲ್ಲದೇ ಸಹಕರಿಸಬೇಕು ಎಂದರು.