ಪಪಂ ಸದಸ್ಯನಿಂದ ಧರಣಿ
ಗುರುಮಠಕಲ್: ಪಟ್ಟಣದ ಚರಂಡಿಗಳಲ್ಲಿ ತುಂಬಿರುವ ಹೂಳು, ಸರ್ಕಾರಿ ಸ್ಥಳಗಳ ಅಕ್ರಮ ಒತ್ತುವರಿ, ಪಂಚಾಯ್ತಿಯಲ್ಲಿ ಮಧ್ಯವರ್ತಿಗಳ ಹಾವಳಿ ತಡೆಯುವುದು ಸೇರಿ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಪ.ಪಂ ವಾರ್ಡ್ 5ರ ಸದಸ್ಯ ವೆಂಕಟಪ್ಪ ಮನ್ನೆ ಪಟ್ಟಣ ಪಂಚಾಯತ್ ಕಾರ್ಯಾಲಯದ ಎದುರು ಏಕಾಂಗಿ ಅಮರಣಾಂತ ಧರಣಿಯನ್ನು ಹಮ್ಮಿಕೊಂಡಿದ್ದರು.
ಭರವಸೆ: ಮಹಾತ್ಮಾ ಗಾಂಧೀರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಧರಣಿಗೆ ಸ್ಪಂದಿಸಿ, ಅಧಿಕಾರಿಗಳು ಕ್ರಮ ಕೈಗೊಳ್ಳುವುದಾಗಿ ಲಿಖಿತ ರೂಪದಲ್ಲಿ ಭರವಸೆ ನೀಡಿದ್ದರಿಂದ 2 ತಾಸಿನಲ್ಲೇ ವೆಂಕಟಪ್ಪ ಧರಣಿ ಅಂತ್ಯಗೊಳಿಸಿದರು.
ಬೇಡಿಕೆ: ಪಟ್ಟಣದ ವಾರ್ಡ್ಗಳಲ್ಲಿ ಸಂಗ್ರಹವಾದ ಕಸ ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸುವುದು, ಸಿಸಿ ರಸ್ತೆಗಳ ದುರಸ್ತಿ, ಮ್ಯುಟೇಷನ್ ಕಡತಗಳಿಗೆ ಪಡೆಯುತ್ತಿರುವ ಹೆಚ್ಚಿನ ಹಣ, ಸರ್ಕಾರಿ ಸೌಮ್ಯದ ಆಸ್ತಿ ಒತ್ತುವರಿ ಬಗ್ಗೆ ಪರಿಶೀಲಿಸಿ ಕ್ರಮ, ಹೊರಗುತ್ತಿಗೆ ಆಧಾರದ ಮೇಲೆ ಸ್ವಚ್ಛತಾ ಸಿಬ್ಬಂದಿ ನೇಮಕ, ಕಚೇರಿಯಲ್ಲಿನ ಮಧ್ಯವರ್ತಿಗಳ ಹಾವಳಿ ತಡೆಯುವ ನಿಟ್ಟಿನಲ್ಲಿ ಪರಿಶೀಲಿಸಿ 7 ದಿನಗಳಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಪಂಚಾಯತ ಅಧಿಕಾರಿಗಳು ಲಿಖಿತ ಭರವಸೆ ನೀಡಿದರು.
ಮುಟೇಷನ್ ಮಾಡಲು ಕಚೇರಿ ಸಿಬ್ಬಂದಿ ಜನ ಸಾಮಾನ್ಯರಿಂದ ಹೆಚ್ಚಿನ ಹಣವನ್ನು ಪಡೆಯುತ್ತಿರುವ ಕುರಿತು ವಿಶೇಷ ಕಾಳಜಿ ವಹಿಸಿ, ಪರಿಶೀಲಿಸಿದ ಬಳಿಕ ಸಂಬಂಧಿಸಿ ಸಿಬ್ಬಂದಿಗೆ ನೋಟಿಸ್ ನೀಡಲಾಗುವುದು ಎಂದು ಅಧಿಕಾರಿ ರವೀಂದ್ರ ವೈ. ಲಂಬು ತಿಳಿಸಿದರು.