'ಬಿಗಿ ತಪ್ಪುತ್ತಿರುವ ಶಹಾಪುರ ಆಡಳಿತ'
ಶಹಾಪುರ: ತಾಲೂಕಾ ಆಡಳಿತ ವ್ಯಾಪ್ತಿಯಲ್ಲಿ ಬರುವ ವಿವಿಧ ಇಲಾಖೆಗಳ ಆಡಳಿತ ವೈಖರಿ ದಿನೇ ದಿನೇ ನಿಷ್ಕ್ರಿಯವಾಗುತ್ತಿದ್ದು, ಸಾರ್ವಜನಿಕರು ಕಚೇರಿಗೆ ಅಲೆದಾಡಿ ಸುಸ್ತಾದರು ಸಣ್ಣ ಪುಟ್ಟ ಕೆಲಸಗಳು ಆಗುತ್ತಿಲ್ಲವೆಂದು ರೈತ ಮುಖಂಡ ಅಶೋಕರಾವ ಮಲ್ಲಾಬಾದಿ ಆರೋಪಿಸಿದ್ದಾರೆ. ತಾಲೂಕಿನಲ್ಲಿ ಹಲವಾರು ಇಲಾಖೆಗಳು ಸಾರ್ವಜನಿಕರ ಕೆಲಸ ಕಾರ್ಯಗಳಾಗಿಯೇ ಇದ್ದರೂ ಅಧಿಕಾರಿಗಳು ಸಿಬ್ಬಂದಿ ಸಕಾಲದಲ್ಲಿ ಸಿಗುತ್ತಿಲ್ಲ. ಏನೇ ಕೇಳಿದರು ಯಾದಗಿರಿಗೆ ಮೀಟಿಂಗ್ ಹೋಗಿದ್ದಾರೆ ಎಂಬ ಸರಳ ಉತ್ತರ ಸಿಗುತ್ತದೆ. ಹಲವು ಕಚೇರಿಗಳಂತು ಇನ್ನೂ ಬಾಡಿಗೆ ಕಟ್ಟಡದಲ್ಲಿಯೇ ನಡೆಯುತ್ತಿದ್ದು, ಯಾವಾಗ ನೋಡಿದರು ಬೀಗ ಜಡಿದುಕೊಂಡೇ ಇರುತ್ತವೆ. ಬೆಳಗ್ಗೆ 8 ಗಂಟೆಗೆ ಬರುವ ಹಳ್ಳಿಗರ ಸಮಸ್ಯೆಗಳಿಗೆ ಸ್ಪಂದಿಸುವವರೇ ಇಲ್ಲದಂತಾಗಿದೆ. ಮುಗ್ಧರು, ಅಮಾಯಕರು ಕಚೇರಿಗಳಿಗೆ ಅಲೆದಾಡಿಯೇ ನಿತ್ರಾಣವಾಗಿದ್ದಾರೆ. ಕುಂದು ಕೊರೆತೆಗಳ ಪರಿಹಾರವಾಗುತ್ತಿಲ್ಲ ತಕ್ಷಣವೇ ಸ್ಥಳೀಯ ಜನಪ್ರತಿನಿಧಿಗಳು ಕಾಳಜಿ ವಹಿಸಿ ಆಡಳಿತ ವ್ಯೆವಸ್ಥೆಗೆ ಕಾಯಕಲ್ಪ ನೀಡುವ ಕಾರ್ಯಕ್ಕೆ ಮುಂದಾಗಬೇಕು. ದಿನನಿತ್ಯ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಸಿಗುವಂತಾಗಬೇಕೆಂದು ಅಶೋಕರಾವ ಮನವಿ ಮಾಡಿದ್ದಾರೆ.