ನಿರ್ಲಕ್ಷ್ಯಕ್ಕೆ ಸಾಕ್ಷಿ ನಾಗರಕೆರೆ
ಕ.ಪ್ರ.ವಾರ್ತೆ, ಶಹಾಪುರ, ಡಿ. 15
ಬೆಟ್ಟದ ಸಾಲುಗಳಿಂದ ಹರಿಯುತ್ತ ಬರುವ ನೀರನ್ನು ತಟದಲ್ಲಿ ತಡೆದು ನಿಲ್ಲಿಸಿಕೊಂಡಿರುವ ಕೆರೆಗಳು ಅದ್ಭುತ ಸೊಬಗನ್ನು ಸೃಷ್ಟಿಸುತ್ತಿದೆ. ತಲೆಗೆ ಸುರಿದಿದ್ದು ಕಾಲಿಗಿಳಿಯಲೇ ಬೇಕೆಂಬ ನಿಯಮದಂತೆ ಶಹಾಪುರ ಪಟ್ಟಣಕ್ಕೆ ಮುಕುಟ ಪ್ರಾಯದಂತೆ ಬೃಹತ್ ಬುದ್ಧ ಮಲಗಿದ ಬೆಟ್ಟದಡಿಯಲ್ಲೇ ಇರುವ ನಾಗರಕೆರೆ ಅಪರೂಪವೆಂಬಂತಿದೆ.
ಹಿಂದಿನ ಜಲಸಂರಕ್ಷಣಾ ಪದ್ಧತಿಯನುಸಾರ ನಾಗರಕೆರೆ ನಿರ್ಮಿಸಲಾಗಿತ್ತು. ನೀರಿನ ಬಗ್ಗೆ ಅವರಿಗಿದ್ದ ಕಾಳಜಿಗೆ ಸಾಕ್ಷಿಯೆಂಬಂತೆ ನಾಗರಕೆರೆ ಆಯಕಟ್ಟಿನ ಸ್ಥಳದಲ್ಲೇ ನಿರ್ಮಾಣವಾಗಿದೆ. ಕೃಷ್ಣಾ ಭೀಮಾ ನದಿಗಳ ಹರಿವಿನ ವ್ಯಾಪ್ತಿಯಲ್ಲಿ ಬರುವ ಸಗರನಾಡಿನಲ್ಲಿ ನೀರಾವರಿಗೆ ಹೆಚ್ಚಿನ ಆದ್ಯತೆಯನ್ನು ಹಿಂದಿನವರು ಕಲ್ಪಿಸಿದ್ದರು ಎಂಬುದಕ್ಕೆ ಕೆರೆ ಕುಂಟೆಗಳು ಕಾಣುತ್ತದೆ.
ಪ್ರಸ್ತುತ ನಾಗರಕೆರೆ ಸ್ಥಿತಿ ಗಮನಿಸಿದರೆ ಬೆಟ್ಟದ ಸಾಲುಗಳಲ್ಲಿ ಬಿದ್ದ ಮಳೆ ನೀರು ಅನಾಯಾಸವಾಗಿ ಕೆರೆಯಂಗಳಕ್ಕೆ ಬಂದು ಸೇರುವುದು.
ಸದ್ಯ ನಿರ್ಲಕ್ಷ್ಯದ ತಾಣ: ಬೆಟ್ಟದ ಪರಿಸರಕ್ಕೆ ಹೊಂದಿಕೊಂಡಿರುವ ನಾಗರಕೆರೆ ನೀರು ಸಂಗ್ರಹಣಕ್ಕೆ ಹೇಳಿ ಮಾಡಿಸಿದಂತಿದ್ದು, ಬೆಟ್ಟವೇ ಕೆರೆಯ ರಕ್ಷಣೆಗೆ ನಿಂತಿದೆ. ಆದರೆ ಆ ಕುರಿತು ಕಾಳಜಿಯ ಕೊರತೆ ಎದ್ದು ಕಾಣುತ್ತಿದೆ. ಒಂದಡೆ ಬೆಟ್ಟದಿಂದ ಕೂಗಳತೆ ದೂರದಲ್ಲಿರುವ ಬೀದರ್, ಬೆಂಗಳೂರ ಹೈವೇ ರಸ್ತೆ, ಮೇಲ್ದಂಡೆ ಕಣ್ಹಾಯಿಸಿದರೆ ಬುದ್ಧ ಮಲಗಿದ ಸನ್ನಿವೇಶ ಹಿಂದುಗಡೆ ದಿಗ್ಗಿಯ ಸಂಗಮನಾಥ ಹೀಗೆ ಸೌಂದರ್ಯದ ಸೊಬಗು ಸವಿಯಬಹುದು.
ಜನಪ್ರತಿನಿಧಿಗಳು ಕಾಳಜಿ ವಹಿಸಲಿ: ಈಗಿರುವ ಸಂಗ್ರಹಣ ಕೆರೆ (ಫಿಲ್ಟರ್ ಬೆಡ್) ಬೆಳೆಯುತ್ತಿರುವ ಪಟ್ಟಣಕ್ಕೆ ನೀರು ಪೂರೈಸಲು ಸಾಕಾಗುತ್ತಿಲ್ಲ. ಸದ್ಯ ಕೃಷ್ಣೆಯಿಂದ ಕಾಲುವೆಗಳ ಮೂಲಕ ನೀರು ಬರುತ್ತಿದ್ದು, ಬೇಸಿಗೆ ತಿಂಗಳಲ್ಲಿ ಕೊರೆತಯಾಗುತ್ತದೆ, ಸದ್ಯ 18.ಕಿ.ಮಿ ದೂರದಲ್ಲಿರುವ ಭೀಮಾ ಬ್ರಿಜ್ ಕಮ್ ಬ್ಯಾರೇಜ್ನಿಂದ ಪೈಪ್ ಲೈನ್ಗಳ ಮೂಲಕ ನೀರು ಸರಬರಾಜು ಮಾಡಿ ಸಂಗ್ರಹಣ ಕೆರೆ ನಿರ್ಮಾಣ ಮಾಡುವುದು ಮುಖ್ಯವಾದ ಯೋಜನೆಯಾಗಿದೆ.
ಈ ಕುರಿತು ಜನಪ್ರತಿನಿಧಿಗಳು ಪಟ್ಟಣದ ಅಭಿವೃದ್ಧಿ ಗಮನದಲ್ಲಿಟ್ಟುಕೊಂಟು ನಾಗರಕೆರೆಗೆ ಕಾಯಕಲ್ಪ ನೀಡಬೇಕಾದದ್ದು ಅತ್ಯಂತ ಮುಖ್ಯವಾಗಿದೆ.