ಪಿಡಿಒ ವಿರುದ್ಧ ಸದಸ್ಯರ ಶೀತಲ ಸಮರ ಅಂತ್ಯ
ಗುರುಮಠಕಲ್: ಪುಟಪಾಕ ಪಿಡಿಒ ಶರಣಪ್ಪರನ್ನು ವರ್ಗಾವಣೆ ಮಾಡುವ ಮೂಲಕ ಸದಸ್ಯರ ಮತ್ತು ಅಭಿವೃದ್ಧಿ ಅಧಿಕಾರಿಗಳ ನಡುವಿನ ಶೀತಲ ಸಮರ ಕೊನೆ ಕಂಡಿದೆ. ಪಂಚಾಯತಿಯ ಸರ್ವ ಸದಸ್ಯರು, ಅಧ್ಯಕ್ಷರು ಹಾಗೂ ಸಿಇಒಗೆ ನ.26ರಂದು ಬಹಿರಂಗವಾಗಿ ಪತ್ರ ಬರೆಯುವುದರ ಮೂಲಕ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯ್ತಿ ಸಿಇಒ, ತಿಮ್ಮಪ್ಪ ಅವರನ್ನು ಪುಟಪಾಕ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳನ್ನಾಗಿ ನೇಮಿಸಿ ಅದೇಶ ನಿಡಿದ್ದಾರೆ.
ಎರಡನೇ ಬಾರಿಗೆ ಯಶಸ್ವಿ: ಈ ಹಿಂದೆ ಶರಣಪ್ಪ ವಿರುದ್ಧ ಎಲ್ಲಾ ಸದಸ್ಯರು ಆರೋಪಿಸಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ನೀಡಿದರು ಸಚಿವರು ಇತ್ತ ಗಮನ ಹರಿಸದೇ ಇರುವುದರಿಂದಾಗಿ ಪ್ರಥಮ ಬಾರಿಗೆ ಮುಖಭಂಗ ಅನುಭವಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವರಿಂದ ಉಪಯೋಗವಿಲ್ಲ ಎಂದು ತಿಳಿದ ಸದಸ್ಯರು, ಅಧಿಕಾರಿಯನ್ನು ವರ್ಗಾವಣೆ ಮಾಡದಿದ್ದರೆ ತಮ್ಮ ರಾಜಿನಾಮೆ ಪಡೆಯಬೇಕೆಂದು ಪಟ್ಟು ಹಿಡಿದ ಕಾರಣ ವರ್ಗಾವಣೆಗೆ ಅದೇಶ ಹೊರಬಂದು, 2ನೇ ಬಾರಿಯ ಹೋರಾಟದಲ್ಲಿ ಯಶಸ್ಸು ಸಿಕ್ಕಿದೆ.
--
ಇಂದು ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ
ಗುರುಮಠಕಲ್: ಜಿಲ್ಲಾ ಉಸ್ತುವಾರಿ ಸಚಿವರಾದ ಬಾಬೂರಾವ ಚಿಂಚನಸೂರ ಡಿ.16 ರಿಂದ ಜಿಲ್ಲಾ ಪ್ರವಾಸ ನಡೆಸಲಿದ್ದಾರೆ. ಡಿ.16 ರಂದು ಗುರುಮಠಕಲ್ ಮತಕ್ಷೇತ್ರದ ಬೆಳಗೇರಾ, ಎಸ್.ಹೊಸಳ್ಳಿ, ಕೆ.ಹೊಸಳ್ಳಿ ಗ್ರಾಮಗಳಿಗೆ ಬೇಟಿ ನೀಡಿ ಸಾರ್ವಜನಿಕ ಕುಂದುಕೊರತೆ ಆಲಿಸುವರು. ಡಿ.17 ರಂದು ಬೆಳ್ಳಿಗೆ 11ಕ್ಕೆ ಯಾದಗಿರಿಯಲ್ಲಿ ನಗರಸಭೆ ಹಾಗೂ ವಿವಿಧ ಇಲಾಖೆಗಳ ಪ್ರಗತಿಯಲ್ಲಿರುವ ಕಾಮಗಾರಿಗಳ ಪರಿಶೀಲನೆ ಮಾಡುವರು. ಸಂಜೆ ಹಿಂದಿ ಪ್ರಚಾರ ಸಭಾದ ಅವರಣದಲ್ಲಿ ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಏರ್ಪಡಿಸಲಾಗಿರುವ ಆಯುಷ್ ಆರೋಗ್ಯ ಮೇಳ ಕಾರ್ಯಕ್ರಮ ಉದ್ಘಾಟನೆ ಮಾಡುವರು.