ಸಾಹಿತ್ಯದಿಂದ ಸಮಾಜ ತಿದ್ದುವ ಕೆಲಸವಾಗಲಿ: ಪಾಟೀಲ್
ಗುಲ್ಬರ್ಗ: ಹಿಂದಿನಿಂದಲೂ ಸಾಹಿತ್ಯ, ಕಲೆ, ಸಂಸ್ಕೃತಿಕ, ಜನಪದ ಸಾಹಿತ್ಯ ಹೀಗೆ ಹತ್ತು ಹಲವು ಪ್ರಕಾರದ ಮೂಲಕ ಸಮಾಜವನ್ನು ತಿದ್ದುವ ಕೆಲಸ ನಡೆಯುತ್ತಾ ಬಂದಿದೆ. ಅದನ್ನು ಆಧುನಿಕ ಕಾಲಕ್ಕೂ ಮುಂದುವರೆಯಬೇಕು ಎಂದು ಗುಲ್ಬರ್ಗದ ಹಿರಿಯ ನ್ಯಾಯವಾದಿ ಶರಣಬಸಪ್ಪ ಮಾಲಿಪಾಟೀಲ್ ಆಶಯ ವ್ಯಕ್ತಪಡಿಸಿದರು.
ತಾಲೂಕಿನ ಭೂಸನೂರ ಗ್ರಾಮದ ಸಂಸ್ಥಾನ ಹಿರೇಮಠದಲ್ಲಿ ಭಾನುವಾರ ಹಮ್ಮಿಕೊಂಡ ವಿದ್ಯಾರ್ಥಿ ಹಣಮಂತರಾಯ ಕೆ. ಜಮಾದಾರ ಅವರು ಬರೆದ ಗುಲಾಬಿ ಗೊಂಚಲು ಚೊಚ್ಚಲು ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಇತರರಿಗೆ ಮಾದರಿ: ಸಾಹಿತಿಗಳ ಸಾಹಿತ್ಯ ರಚನೆ ಸರಳವಾಗಿದೆ. ಆದರೆ 9ನೇ ತರಗತಿಯ ವಿದ್ಯಾರ್ಥಿ ಹಣಮಂತರಾಯ ಜಮಾದಾರ ಎಳೆಯನಾದರು ಕವನ ಸಂಕಲನ ರಚನೆ ಮಾಡಿರುವುದು ಅವನ ಸಾಹಿತ್ಯಾಸಕ್ತಿ ಇತರರಿಗೆ ಮಾದರಿ ಎಂದರು.
ಸಾಹಿತಿಯಾಗಿ ಹೊರಹೊಮ್ಮಲಿ: ಸಂಸ್ಥಾನ ಹಿರೇಮಠದ ಬಸವಲಿಂಗ ದೇವರು ಆಶೀರ್ವಚನ ನೀಡಿ, ಬಾಲಕ ಚಿಕ್ಕ ವಯಸ್ಸಿನಲ್ಲಿ ಕಠಿಣ ಪರಿಶ್ರಮದಿಂದ ಕವನ ಸಂಕಲನ ಹೊರತಂದಿರುವುದು ಸಾಹಿತಿಕ ಸಾಧನೆ. ಮುಂದೆಯೂ ಬಾಲಕ ಒಳ್ಳೆಯ ಕವಿಯಾಗಿ, ಸಾಹಿತಿಯಾಗಿ ಹೊರಹೊಮ್ಮಲಿ ಎಂದು ಶುಭಕೋರಿದರು.
ಕಬ್ಬು ಬೆಳೆಗಾರ ತಾಲೂಕು ಮುಖಂಡ ಧರ್ಮರಾಜ ಸಾಹು, ಕೃತಿ ಲೇಖಕ ಹಣಮಂತರಾಯ ಕೆ. ಜಮಾದಾರ, ಬಸವಂತಾಯ ಮಾಲಿಪಾಟೀಲ್, ಶಾಂತಮಲ್ಲಪ್ಪ ನೆಲ್ಲೂರ, ಭಗವಂತಪ್ಪ ಮಾಲಿಪಾಟೀಲ್, ರಾಜು ಪೊಲೀಸ್ ಪಾಟೀಲ್, ದಿಲೀಪ ಕೊತಲಿ, ಗುಂಡಪ್ಪ ಪ್ಯಾಟಿ, ಬಸವರಾಜ ಮಲಶೆಟ್ಟಿ, ಕಲ್ಯಾಣಿ ಜಮಾದಾರ, ಗುರುಶಾಂತ ಜಮಾದಾರ, ಮಹಾಂತಪ್ಪ ಮಲಶೆಟ್ಟಿ, ಗುರುಶಾಂತಪ್ಪ ಕಡಕೊಳ, ಬಾಬು ಗೊಬ್ಬೂರ್, ಗುರುಬಸಪ್ಪ ಜಗತಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.